ಮಂಗಳವಾರ, ಆಗಸ್ಟ್ 4, 2020
22 °C

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್

ಕಲಬುರ್ಗಿ: ‘ವೃತ್ತಿಪರ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ವಿತರಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕಗಳ ಯೋಜನೆಯಡಿ ಸ್ನಾತಕೋತ್ತರ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಬಜೆಟ್‌ನಲ್ಲಿ ಈಗಾಗಲೇ ಘೋಷಿಸಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅನುದಾನಿತ ಕಾಲೇಜು ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ವಿತರಿಸಲಾಗುವುದು. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡ ರಾಯಚೂರು ವಿಶ್ವವಿದ್ಯಾಲಯವನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಪ್ರತಿ ವರ್ಷ 12 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಆ ಪೈಕಿ 3 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಸಿಗುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಲು ಬೇಕಾದ ಮೂಲಸೌಲಭ್ಯ ಸೇರಿ ಇತರೆ ಸೌಲಭ್ಯಗಳನ್ನು ಒಳಗೊಂಡ ಐದು ವರ್ಷಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಎಚ್‌ಕೆಆರ್‌ಡಿಬಿಗೆ ಸಲ್ಲಿಸಬೇಕು. ಅದರಲ್ಲಿ ಪ್ರತಿ ವರ್ಷ ಕಾರ್ಯಗತಗೊಳಿಸುವ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಆಗ ಎಚ್‌ಕೆಆರ್‌ಡಿಬಿಯಿಂದ ಅನುದಾನ ನೀಡಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಕುಲಪತಿ ಪ್ರೊ.ಎಸ್.ಆರ್.ನಿರಂಜನ ಮಾತನಾಡಿ, ‘ರಾಜ್ಯದ 23 ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ನಲ್ಲಿ ಗುಲಬರ್ಗಾ ವಿಶ್ವ ವಿದ್ಯಾಲಯ ಮೊದಲ ಸ್ಥಾನ ಪಡೆದಿದೆ. ಕಳೆದ ವರ್ಷ ನಡೆದ ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ–ಸೆಟ್)ಯ ಫಲಿತಾಂಶದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ 4ನೇ ಸ್ಥಾನ ಪಡೆದಿದೆ’ ಎಂದು ಮಾಹಿತಿ

ನೀಡಿದರು.

ಸಿಂಡಿಕೇಟ್ ಸದಸ್ಯ ಸಾಯಿಬಣ್ಣ ಕೆಂಗೂರಿ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಸತೀಶ ಅಳ್ಳೊಳ್ಳಿ, ಕುಲಸಚಿವ ಪ್ರೊ.ದಯಾನಂದ ಅಗಸರ, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎಂ.ಮದರಿ, ಹಣಕಾಸು ಅಧಿಕಾರಿ ಪ್ರೊ.ರಾಜನಾಳಕರ ಲಕ್ಷ್ಮಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕದ ನಿರ್ದೇಶಕ ಪ್ರೊ.ವಿ.ಟಿ.ಕಾಂಬಳೆ, ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳಿಂದ ಸಚಿವರಿಗೆ ಮುತ್ತಿಗೆ

‘3ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ತಕ್ಷಣ ಲ್ಯಾಪ್‌ಟಾಪ್ ವಿತರಿಸಬೇಕು’ ಎಂದು ಒತ್ತಾಯಿಸಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದರು.

‘ಲ್ಯಾಪ್‌ಟಾಪ್‌ಗಳು ಕಡಿಮೆ ಸಂಖ್ಯೆಯಲ್ಲಿ ಲಭ್ಯವಾಗಿದ್ದರಿಂದ ಮೆರಿಟ್ ಆಧರಿಸಿ ವಿತರಿಸಲಾಗುತ್ತಿದೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಮುಗಿದು, ಲ್ಯಾಪ್‌ಟಾಪ್ ವಿತರಿಸುವ ಹೊತ್ತಿಗೆ ನಮ್ಮ ಕೋರ್ಸ್ ಮುಗಿಯುತ್ತದೆ. ಆದ್ದರಿಂದ ಈಗಲೇ ಎಲ್ಲರಿಗೂ ವಿತರಿಸಬೇಕು’ ಎಂದು ಪಟ್ಟು ಹಿಡಿದರು. ಪ್ರತಿಕ್ರಿಯಿಸಿದ ಸಚಿವರು, ‘ತಕ್ಷಣ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಎಲ್ಲರಿಗೂ ಲ್ಯಾಪ್‌ಟಾಪ್ ವಿತರಿಸಲಾಗುವುದು’ ಎಂದು ಭರವಸೆ ನೀಡಿದರು.

* * 

ವೈಜ್ಞಾನಿಕ ಉಪಕರಣಗಳ ಖರೀದಿಗೆ ಎಚ್‌ಕೆಆರ್‌ಡಿಬಿಯಿಂದ ವಿಶ್ವವಿದ್ಯಾಲಯಕ್ಕೆ ₹10 ಕೋಟಿ ಅನುದಾನ ನೀಡಬೇಕು

ಪ್ರೊ.ಎಸ್.ಆರ್.ನಿರಂಜನ,

ಕುಲಪತಿ, ಗುಲಬರ್ಗಾ ವಿಶ್ವವಿದ್ಯಾಲಯ

2016–17 ಶೈಕ್ಷಣಿಕ ವರ್ಷ

₹62.5 ಲಕ್ಷ ಬಿಡುಗಡೆಯಾದ ಅನುದಾನ

369 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು

79 ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು 

448 ಪ.ಜಾ, ಪ.ಪಂ ಒಟ್ಟು ವಿದ್ಯಾರ್ಥಿಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.