ಗುರುವಾರ , ಆಗಸ್ಟ್ 13, 2020
27 °C

ನೀರಿಗಾಗಿ ನೀರಿನಲ್ಲಿಯೇ ಗ್ರಾಮಸ್ಥರ ಸಾಹಸ!

ದೇವರಾಜ ನಾಯ್ಕ Updated:

ಅಕ್ಷರ ಗಾತ್ರ : | |

ನೀರಿಗಾಗಿ ನೀರಿನಲ್ಲಿಯೇ ಗ್ರಾಮಸ್ಥರ ಸಾಹಸ!

ಕಾರವಾರ: ಹಳ್ಳದಲ್ಲಿ ಸೊಂಟದೆತ್ತರಕ್ಕೆ ನೀರು ತುಂಬಿದ್ದರೂ ಲೆಕ್ಕಿಸದೇ ಅದರಲ್ಲೇ ಕಿ.ಮೀ. ದೂರ ಕ್ರಮಿಸಿ ಕುಡಿಯುವ ನೀರು ತರುವ ಸಾಹಸಕ್ಕೆ ಇಲ್ಲಿನ ಕಿನ್ನರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರು ಇಳಿದಿದ್ದಾರೆ.

ಕಿನ್ನರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭಾಗವಾಡ, ಚಾಮಕುಳಿವಾಡ, ಅಂಬೆಜೂಗ, ಝಾಡಕಿ ಭಾಗದ ಅನೇಕ ಮನೆಗಳಲ್ಲಿ ಬಾವಿ ಇದ್ದು, ನೀರು ಕೂಡ ಸಾಕಷ್ಟಿದೆ. ಆದರೆ ಬಹುತೇಕ ಬಾವಿಗಳ ನೀರು ಉಪ್ಪು ಮಿಶ್ರಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ದೂರದ ನಾಯ್ಕವಾಡಾದ ‘ಹನಮಾಬಾಯಾ’ ಎಂದು ಕರೆಯುವ ಬಾವಿಯಿಂದ ಕುಡಿಯುವ ನೀರು ತರಲಾಗುತ್ತದೆ. ಇದಕ್ಕಾಗಿ ಮಕ್ಕಳು, ಮಹಿಳೆಯರು, ಹಿರಿಯರು ಎನ್ನದೇ ಗ್ರಾಮದವರೆಲ್ಲರೂ ಪ್ರತಿದಿನ ಬೆಳಿಗ್ಗೆ ಎದ್ದು ಕೊಡ ಹಿಡಿದು ಆ ಬಾವಿಯತ್ತ ಸಾಗುತ್ತಾರೆ.

ಎಚ್ಚರ ತಪ್ಪಿದರೆ ಅಪಾಯ: ಆದರೆ ಅದಕ್ಕಾಗಿ ಕಾಳಿ ಹಿನ್ನೀರಿನ್ನು ದಾಟಿ ಅವರು 1 ಕಿ.ಮೀ. ದೂರ ಸಾಗಬೇಕು. ರಸ್ತೆಯ ಮೂಲಕ ತೆರಳಿದರೆ ಆ ಬಾವಿಗೆ 3 ಕಿ.ಮೀ. ಆದರೆ ಸಮೀಪವೆಂದು ಕಾಳಿ ಹಿನ್ನೀರಿನ ಹಳ್ಳದಲ್ಲಿಯೇ ಸಾಗಿ ಕೊಡ ಹೊತ್ತು ಕುಡಿಯುವ ನೀರಿನೊಂದಿಗೆ ಮರಳುತ್ತಾರೆ.

ಉಪ್ಪು ನೀರಿನ ಹಾವಳಿ: ಗ್ರಾಮದ ಸಮೀಪದಲ್ಲೇ ಕಾಳಿನದಿ ಹರಿಯುತ್ತದೆ. ಉಬ್ಬರ ಸಮಯದಲ್ಲಿ ಅರಬ್ಬಿ ಸಮುದ್ರದ ನೀರು ಕಾಳಿನದಿ ಹರಿವಿನ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಹಾಗಾಗಿ ನದಿಯು ಸಮುದ್ರ ಸೇರುವ ಸಂಗಮ ಸ್ಥಳದಿಂದ ಸುಮಾರು 15 ಕಿ.ಮೀ­.ವರೆಗಿನ ನದಿ ನೀರು ಉಪ್ಪು­ ಮಿಶ್ರಿತವಾಗಿರುತ್ತದೆ. ಅದು ಇಲ್ಲಿನ ಜಮೀನುಗಳಿಗೆ ನುಗ್ಗವುದಲ್ಲದೇ, ಬಾವಿಗಳ ನೀರು ಕೂಡ ಉಪ್ಪು ಮಿ­ಶ್ರಿತವಾಗಿ ಪರಿವರ್ತಿತ­ವಾಗುತ್ತಿದೆ.

ಸೇತುವೆ ನಿರ್ಮಿಸಿ: ‘ಈ ಪ್ರದೇಶದಲ್ಲಿ ಮರದಿಂದ ಮಾಡಿದ ಸೇತುವೆಯೊಂದಿತ್ತು. ಆಗ ಈ ರೀತಿ ನೀರಿನಲ್ಲಿ ಇಳಿದು ತೆರಳಬೇಕಾದ ಪರಿಸ್ಥಿತಿ ಇರಲಿಲ್ಲ. ಆದರೆ ಅದು ಕಳೆದ ನಾಲ್ಕೈದು ವರ್ಷಗಳ ಹಿಂದೆ ಅದು ಮುರಿದು ಹೋಗಿದೆ. ಹೀಗಾಗಿ ಇಲ್ಲೊಂದು ಸೇತುವೆ ಮಂಜೂರು ಮಾಡಿಸುವಂತೆ ಅನೇಕ ಬಾರಿ ಇಲ್ಲಿನ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದ್ದಾಗ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಶಾಂತ ಗೋವೇಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಿನ ಪೂರೈಕೆ ಇದೆ: ‘ಗ್ರಾಮ ಪಂಚಾಯ್ತಿ ವತಿಯಿಂದ ಸಮೀಪದ ಬೋರ್‌ವೆಲ್‌ಗಳಿಂದ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಅಲ್ಲಿನ ಜನರಿಗೆ ದೂರದ ಆ ಬಾವಿಯ ನೀರು ಕುಡಿದು ರೂಢಿಯಾಗಿರುವುದರಿಂದ ಅದನ್ನೇ ಅವರು ಮುಂದುವರಿಸಿದ್ದಾರೆ. ಈಗಾಗಲೇ ಸೇತುವೆಗಾಗಿ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ತಿಳಿಸಿದ್ದೆವು. ಆದರೆ ಆ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ಬೃಹತ್ ಮೊತ್ತದ ಅನುದಾನ ಅಗತ್ಯವಿದೆ’ ಎನ್ನುತ್ತಾರೆ ಕಿನ್ನರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂದೀಪ ರಾಣೆ.

* * 

ಉಪ್ಪು ನೀರಿನ ಸಮಸ್ಯೆ ತಡೆಗಟ್ಟಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಆದರೆ ಕಿನ್ನರ ವ್ಯಾಪ್ತಿಯಲ್ಲಿ ಸೇತುವೆ ಅಗತ್ಯತೆಯ ಕುರಿತಾಗಿ ಪರಿಶೀಲಿಸುತ್ತೇವೆ

– ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.