‘ಪರದಾಡುತ್ತಿರುವ ಯಲ್ಲಮ್ಮನ ಭಕ್ತರು’

7

‘ಪರದಾಡುತ್ತಿರುವ ಯಲ್ಲಮ್ಮನ ಭಕ್ತರು’

Published:
Updated:
‘ಪರದಾಡುತ್ತಿರುವ ಯಲ್ಲಮ್ಮನ ಭಕ್ತರು’

ಸವದತ್ತಿ: ಈ ಭಾಗದ ಸಮಸ್ತ ಜನರ ಜೀವನದಿ ಮಲಪ್ರಭಾ ಮಡಿಲು ಬರಿದಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗುವ ಲಕ್ಷಣಗಳು ಕಾಣಲಾರಂಭಿಸಿವೆ. ಯಲ್ಲಮ್ಮನ ಜಾತ್ರೆಗೆ ಬರುವ ಭಕ್ತರೂ ಪುಣ್ಯಸ್ನಾನಕ್ಕಾಗಿ ಪರದಾಡುವಂತಾಗಿದೆ. ಸವದತ್ತಿಗೆ 8 ರಿಂದ 10 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ.

ಮಂಗಳವಾರದ (ಜ.2) ಬನದ ಹುಣ್ಣಿಮೆ ಆಚರಣೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಸಾಕಷ್ಟು ಮಂದಿ ಕಾಲ್ನಡಿಗೆ, ಚಕ್ಕಡಿಗಳಲ್ಲಿ ಬರುತ್ತಾರೆ. ಅವರು ಪುಣ್ಯಸ್ನಾನಕ್ಕೆ ಮಲಪ್ರಭಾ ನದಿಗೆ ಹೋದರೆ ಅವರಿಗೆ ನಿರಾಶೆಯಾಗಲಿದೆ. ಜೋಗುಳಬಾವಿ ಹಾಗೂ ಯಲ್ಲಮ್ಮನಗುಡ್ಡದಿಂದ 5 ಕಿ.ಮೀ. ಕಾಲ್ನಡಿಗೆಯಿಂದ ಬಂದ್ರೆ, ಅಲ್ಲಿ ಮಲಪ್ರಭೆಯ ನೀರು 1 ಕಿ.ಮೀ. ದೂರ ಹರಿಯುತ್ತಿರುವುದರಿಂದ ಅಲ್ಲಿಯವರೆಗೆ ಹೋಗುವುದು ಅನಿವಾರ್ಯವಾಗಿದೆ. ಇನ್ನು ಜೋಗುಳಬಾವಿ ಸತ್ಯಮ್ಮನ ಪಕ್ಕದ ತವರಿಕರೆ ಕೂಡಾ ಸಂಪೂರ್ಣ ಖಾಲಿಯಾಗಿದೆ. ಅಲ್ಲಿ ಗಿಡಗಂಟಿಗಳು ಬೆಳೆದು, ಕೆಸರಿನ ಗದ್ದೆಯಂತೆಯಾಗಿದೆ.

ಮಹಾಲಿಂಗಪುರದ ಭಕ್ತ ಶ್ರೀಕಾಂತ ಪೂಜಾರ ಮಾತನಾಡಿ, ‘ಈಗಷ್ಟೇ ಅಲ್ರೀ ಮುಂದ ಬರುವ ಭಾರತ ಹುಣ್ಣಿಮೆಗೂ ನಮ್ಮೂರಿಂದ ಸಾವಿರಾರು ಭಕ್ತರು ಬರುತ್ತಾರೆ. ಈಗಲೇ ಹಿಂಗಾದ್ರೆ, ಮುಂದೆ ಹೇಗಿದೆಯೋ? ಕೂಡಲೇ ಸಂಬಂಧಿಸಿದವರು ಭಕ್ತರ ಕಾಳಜಿ ವಹಿಸುವುದು ಅಗತ್ಯ ಐತಿ. ಇಲ್ಲಾಂದ್ರೆ ತುಂಬಾ ತೊಂದರೆ ಆಗತೈತಿ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಹಾರೋಗೇರಿಯಿಂದ ಕಾಲ್ನಡಿಗೆ ಬಂದಿರುವ ಹಣಮಂತ ಸಣ್ಣಕ್ಕನವರ ಮಾತನಾಡಿ, ‘ಈ ಕೆರೆಯೊಳಗ ಜಳಕಾ ಮಾಡುವುದು ಹ್ಯಾಂಗ್‌ರ್ರೀ, ಇನ್‌ ಜೋಗುಳಬಾವಿಯೊಳಗ ಸ್ನಾನಾ ಮಾಡಾಕ್‌ ಆಗಾಂಗಿಲ್ಲಾ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry