ಶನಿವಾರ, ಜೂಲೈ 4, 2020
21 °C

ಹೊಸ ವರ್ಷಕ್ಕೆ ಸೇವೆಯ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ವರ್ಷಕ್ಕೆ ಸೇವೆಯ ಮೆರುಗು

ಬಳ್ಳಾರಿ: ನಗರದ ಎಲ್ಲೆಡೆ ಯುವಜನ ಭಾನುವಾರ ಮಧ್ಯರಾತ್ರಿಯ ವೇಳೆ ರಸ್ತೆಯಲ್ಲಿ, ಮನೆಗಳಲ್ಲಿ, ಹೋಟೆಲ್‌– ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರುವ ಸಮಯದಲ್ಲೇ, ರಸ್ತೆ ಬದಿ ನಡುಗುತ್ತಾ ಮಲಗಿದ್ದ ನಿರ್ಗತಿಕರಿಗೆ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ಉಚಿತವಾಗಿ ಹೊದಿಕೆ ನೀಡಿ ಅವರಿಗೆ ಬೆಚ್ಚನೆ ರಾತ್ರಿಯ ಅನುಭವವನ್ನು ದೊರಕಿಸಿಕೊಟ್ಟರು.

ನಗರದ ವಿಮ್ಸ್‌ ಆಸ್ಪತ್ರೆಯ ಹೊರರೋಗಿಗಳ ವಿಭಾಗ, ಸುಧಾ ವೃತ್ತ, ಟಿ.ಬಿ ಸ್ಯಾನಿಟೋರಿಯಂ, ಕೌಲ್‌ಬಜಾರ್‌, ಜೋಳದರಾಶಿ ದೊಡ್ಡನಗೌಡ ರಂಗಮಂದಿರ, ಎಪಿಎಂಸಿ ರಸ್ತೆ, ಬೆಂಗಳೂರು ರಸ್ತೆ, ಗಡಿಗಿ ಚೆನ್ನಪ್ಪ ವೃತ್ತ, ದುರ್ಗಮ್ಮ ಗುಡಿ ರೈಲ್ವೆ ವೃತ್ತ ಮತ್ತು ರೈಲು ನಿಲ್ದಾಣದಲ್ಲಿ ಸಂಚರಿಸಿದ ಬಳಗದ ಸದಸ್ಯರು ನಿರ್ಗತಿಕರನ್ನು ಗುರುತಿಸಿ ಹೊದಿಕೆಯನ್ನು ಹೊದಿಸಿದರು.

ತಡರಾತ್ರಿ ಹೊದಿಕೆ ಹೊದಿಸಿದವರನ್ನು ಕಂಡು ಅಚ್ಚರಿಪಟ್ಟದ ಮಂದಿ ಕೈಮುಗಿದು ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಸಂಚರಿಸಿದ ಬಳಗದ ಸದಸ್ಯರು ಧನ್ಯತೆಯ ಭಾವದಲ್ಲಿ ಮನೆ ಸೇರಿದರು.

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ವೆಂಕಟೇಶ ಮೂರ್ತಿ, ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್‌ ಗಾಯತ್ರಿ, ಬಳಗದ ಸದಸ್ಯರಾದ ತೇಜ ರಘರಾಮರಾವ್‌, ಬಿ.ಚಂದ್ರಶೇಖರ ಆಚಾರ್, ವಿಶ್ವ, ಸುರೇಶ, ರಮೇಶ, ಮಹೇಶ ಗೋಪಾಲ, ಅಶೋಕ ಭಂಡಾರಿ, ಎ.ಎರ್ರಿಸ್ವಾಮಿ, ರಾಧಾಕೃಷ್ಣ ಇದ್ದರು.

ಕಾರ್ಯಾಚರಣೆ: ರಾತ್ರಿಯಿಡೀ ನಗರದಲ್ಲಿ ಸಂಚರಿಸಿದ ಪೊಲೀಸರು ಅತಿವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದವರನ್ನು ತಡೆದು ನಿಯಮ ಪಾಲನೆಯ ಪಾಠ ಮಾಡಿದರು. ನೋಂದಣಿ ಸಂಖ್ಯೆ ಇಲ್ಲದೆಯೇ ಸಂಚರಿಸುತ್ತಿದ್ದ ಕಾರನ್ನು ತಡೆದು ದಂಡ ಶುಲ್ಕ ವಿಧಿಸಿದರು. ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕ ಸಿಬ್ಬಂದಿಯನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿತ್ತು.

ಪೂಜೆ, ಕೇಕ್‌: ಹೊಸ ವರ್ಷದ ಮೊದಲ ದಿನವಾದ ಸೋಮವಾರವೂ ಸಂಭ್ರಮ ಮೇರೆ ಮೀರಿತ್ತು. ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಕೆಲವೆಡೆ ಕೇಕ್‌ಗಳಿಗಾಗಿ ನೂಕುನುಗ್ಗಲೂ ಕಂಡುಬಂತು. ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆಯೂ ನಡೆಯಿತು. ಮನೆಗಳ ಮುಂದೆ ಹೊಸ ವರ್ಷಕ್ಕೆ ಸ್ವಾಗತ ಕೋರುವ ರಂಗೋಲಿಗಳು ಗಮನ ಸೆಳೆದವು.

ಯುವಜನರ ಸಂಭ್ರಮ

ಮಧ್ಯರಾತ್ರಿ ಸಮೀಪಿಸುತ್ತಿ ದ್ದಂತೆಯೇ ಯುವಜನರ ಸಂಭ್ರಮ, ಕೇಕೆ ಮುಗಿಲುಮುಟ್ಟಿತು. ಪಟಾಕಿಗಳು ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸಿದವು. ಆಕಾಶದೀಪಗಳು ಮೇಲಕ್ಕೆ ಸಾಗುತ್ತಾ ಹೊಳೆದವು. ಹಲವೆಡೆ ಎದೆ ಝಲ್ಲೆನಿಸುವ ಡಿ.ಜೆ. ಸಂಗೀತದ ಅಬ್ಬರಕ್ಕೆ ಜನ ಹುಚ್ಚೆದ್ದು ಕುಣಿದರು. ಮಧ್ಯರಾತ್ರಿ ಕಳೆಯುತ್ತಿದ್ದಂತೆಯೇ ಯುವಕರು ಗುಂಪಾಗಿ ಬೈಕ್‌ ಚಾಲನೆ ಮಾಡುತ್ತಾ ಸಾಗಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.