ಭಾನುವಾರ, ಆಗಸ್ಟ್ 9, 2020
22 °C

ಹೊಸ ವರ್ಷಕೆ ಮಕ್ಕಳ ರೈಲು ಪ್ರಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ‘ಚುಕು ಬುಕು.. ಚುಕು ಬುಕು..’ ಎಂದು ಮಕ್ಕಳು ಒಗ್ಗೂಡಿ ಕೂಗುತ್ತಿದ್ದ ರೈಲು ಬಂಡಿಯ ಹಾಡು ಗುನುಗುಡುತ್ತಲೇ ಇರುತ್ತದೆ. ಹಾಡಿ ಕುಣಿಯುವ ಚಿಣ್ಣರು ನಗರದ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿ ಎಲ್ಲರ ಗಮನ ಸೆಳೆದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಒಂದು ದಿನದ ಪ್ರವಾಸಕ್ಕೆಂದು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಕೋಲಾರಕ್ಕೆ ಹೋಗುವ ರೈಲಿನಲ್ಲಿ ಹತ್ತಿ ಶ್ರೀನಿವಾಸಪುರದಲ್ಲಿ ಇಳಿದು, ಮಧ್ಯಾಹ್ನ ಅದೇ ರೈಲಿನಲ್ಲಿ ವಾಪಸ್‌ ಆಗುವುದು ಅವರ ಉದ್ದೇಶವಾಗಿತ್ತು.

ರೈಲಿನಲ್ಲಿ ಎಂದೂ ಪ್ರಯಾಣಿಸದ ಮಕ್ಕಳಿಗೆ ಹೊಸ ಅನುಭವ ತಂದಿತ್ತು. ರೈಲ್ವೆ ನಿಲ್ದಾಣವೂ ಬಹುತೇಕ ಮಕ್ಕಳಿಗೆ ಹೊಸತು. ಸಾರಿಗೆ ವಾಹನಗಳು, ಲಾರಿ, ರೈಲು ಮತ್ತಿತರ ವಾಹನಗಳನ್ನು ಪಠ್ಯ ಪುಸ್ತಕದಲ್ಲಿ ಓದಿ, ತಿಳಿದಿದ್ದ ಮಕ್ಕಳು ರೈಲು ಪಯಣಕ್ಕೆ ಟಿಕೆಟ್‌ ಕೊಳ್ಳುವ ರೀತಿ, ಪ್ಲಾಟ್‌ ಫಾರಂ, ಲಗೇಜ್‌ ಕೊಠಡಿ, ನಿಲ್ದಾಣದ ವಿವಿಧ ವಿಭಾಗಗಳನ್ನು ಶಿಕ್ಷಕರಾದ ಚಾಂದ್ ಪಾಷಾ, ಅಶೋಕ್‌ ಪರಿಚಯಿಸಿಕೊಟ್ಟರು. ಇವೆಲ್ಲವನ್ನೂ ಕುತೂಹಲದಿಂದ ಆಲಿಸುತ್ತಿದ್ದ ಮಕ್ಕಳು, ರೈಲು ನಿಲ್ದಾಣಕ್ಕೆ ಬಂದು ನಿಂತಾಗ ಸಂಭ್ರಮಿಸಿದರು. ದಾರಿಯುದ್ದಕ್ಕೂ ಮಕ್ಕಳ ಪ್ರಶ್ನೆಗಳು, ಹಾಡು, ಆಟ, ನೃತ್ಯ ನಿಲ್ಲದೆ ಸಾಗಿತ್ತು.

ಶಾಲೆಯಲ್ಲಿ ತಯಾರಿಸಿದ ಟೊಮೆಟೊ ಬಾತ್‌, ಶಾವಿಗೆ ಬಾತ್‌ ಮಕ್ಕಳ ಜೊತೆಗಿದ್ದವು. ಹೊಸ ವರ್ಷಾಚರಣೆಗಾಗಿ ಮೂರು ಕೇಜಿ ಕೇಕ್‌, ಬಿಸ್ಕತ್‌, ಚಾಕಲೇಟ್‌ಗಳೂ ಇದ್ದವು. ಶ್ರೀನಿವಾಸಪುರದಲ್ಲಿ ಸಾಯಿಬಾಬಾ, ಗಣೇಶನ ದೇವಸ್ಥಾನ, ಬಸ್‌ ಡಿಪೊ, ತರಕಾರಿ ಮಂಡಿಯನ್ನು ವೀಕ್ಷಿಸಿದ ಮಕ್ಕಳು, ಉದ್ಯಾನದಲ್ಲಿ ಕುಳಿತು ಉಪಾಹಾರ ಮುಗಿಸಿ, ಕೇಕ್‌ ಕತ್ತರಿಸಿದರು. ವಾಪಸ್‌ ಬರುವಾಗಲೂ ಮಕ್ಕಳ ಉತ್ಸಾಹ, ಖುಷಿ, ಕುತೂಹಲ ಕಡಿಮೆ ಆಗಿರಲಿಲ್ಲ.

‘ಮಕ್ಕಳೊಂದಿಗೆ ಪ್ರವಾಸ ಮಾಡುವುದರಿಂದ ನಾವೂ ಮಕ್ಕಳಾಗುತ್ತೇವೆ. ಅವರಂತೆಯೇ ಹೊರಪ್ರಂಚವನ್ನು ಮುಗ್ಧವಾಗಿ ಗಮನಿಸುತ್ತೇವೆ. ಅವರ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡುವಂತಾಗುತ್ತದೆ. ಇದೊಂದು ಅಪರೂಪದ ರೈಲ್ವೆ ಪ್ರವಾಸ’ ಎಂದು ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ ತಿಳಿಸಿದರು.

‘ನಾನು ರೈಲನ್ನೇ ಇರಲಿಲ್ಲ. ಇವತ್ತು ಬಹಳ ಸಂತಸವಾಯಿತು. ಶಾಲೆಯಿಂದ ಆಗಾಗ ಇಂತಹ ಪ್ರವಾಸ ಏರ್ಪಡಿಸಿದರೆ ಒಳ್ಳೆಯದು’ ಎಂದು ಏಳನೇ ತರಗತಿಯ ಲಕ್ಷ್ಮಿ ಹೇಳಿದರು.

ಅಂಧಮಕ್ಕಳಿಗೆ ಸ್ವೆಟರ್‌ ವಿತರಣೆ

ಶಿಡ್ಲಘಟ್ಟ: ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ಆಟವಾಡಿ, ಕೇಕ್‌ ಕತ್ತರಿಸಿ, ಸ್ವೇಟರ್‌ ವಿತರಿಸುವ ಮೂಲಕ ಮುತ್ತುಟ್‌ ಫೈನಾನ್ಸ್‌ ಗುಚ್ಛ ವ್ಯವಸ್ಥಾಪಕ ವೆಂಕಟೇಶ್‌ ಸೋಮವಾರ ಹೊಸ ವರ್ಷವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು.

‘ಈ ಬಾರಿ ಚಳಿ ಹೆಚ್ಚಾಗಿದೆ. ಸಮಾನ ಮನಸ್ಕರು ಸೇರಿಕೊಂಡು ವಿಭಿನ್ನ ರೀತಿಯಲ್ಲಿ ಹೊಸ ವರ್ಷ ಸ್ವಾಗತಿಸಲು ನಿರ್ಧರಿಸಿದೆವವು. ಪ್ರತಿಯೊಬ್ಬಯೂ ತಮ್ಮದೇ ಆದ ವೈಶಿಷ್ಟ್ಯ ಹೊಂದಿದ್ದು, ಪರಸ್ಪರರನ್ನು ಗೌರವಿಸುತ್ತಾ, ಸೌಹಾರ್ದದಿಂದ ಸಹಕರಿಸಿ ಬಾಳಿದಾಗ ಸಮಾಜ ಶಾಂತಿಯುತವಾಗಿ ಇರುತ್ತದೆ’ ಎಂದರು.

ನಗರಸಭೆ ಆಯುಕ್ತ ಚಲಪತಿ ಮಾತನಾಡಿ, ಹೊಸ ವರ್ಷಾಚರಣೆ ಹೆಸರಲ್ಲಿ ದುಂದುವೆಚ್ಚ ಮಾಡುವ ಬದಲಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಅರ್ಥಪೂರ್ಣವಾಗಿರುತ್ತದೆ’ ಎಂದು ನುಡಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿಯ ನಾರಾಯಣಸ್ವಾಮಿ, ಮುತ್ತುಟ್‌ ಫೈನಾನ್ಸ್‌ನ ವಲಯ ವ್ಯವಸ್ಥಾಪಕ ಅರುಣ್‌ ಪವಿತ್ರನ್‌, ಶ್ರೀನಿವಾಸ್‌, ಮಂಜುನಾಥ್‌, ರಾಮಕೃಷ್ಣಪ್ಪ, ರಾಮು, ವಿನೋದ್‌, ಕುಮಾರ್‌, ಸುಮನ್‌, ರಾಮಕೃಷ್ಣ, ಮನೀಶ್‌, ದೇವರಾಜು, ವೆಂಕಟೇಶ್‌ ಹಾಜರಿದ್ದರು.

ಬಾಗೇಪಲ್ಲಿಯಲ್ಲಿ ಸಂಭ್ರಮಾಚರಣೆ

ಬಾಗೇಪಲ್ಲಿ: 'ಹೊಸ ವರ್ಷವನ್ನು ಮೋಜು, ಮಸ್ತಿ ಬದಲಾಗಿ ಪಟ್ಟಣದ ಬಿಜಿಎಸ್ ಶಾಲೆ ಮಕ್ಕಳು ಸೋಮವಾರ ಸರ್ಕಾರಿ ಆಸ್ಪತ್ರೆಯ 100 ಮಂದಿ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ವಿಭಿನ್ನ ರೀತಿ ಆಚರಿಸಿದರು.

'ಹೊಸ ವರ್ಷವನ್ನು ಕೆಲವರು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುವ ಸಂಪ್ರದಾಯ ಸಾಮಾನ್ಯವಾಗಿದೆ. ಅದಕ್ಕಾಗಿ ದುಂದುವೆಚ್ಚ ಮಾಡುವರು. ಆದರೆ ಇಲ್ಲಿಯ ಮಕ್ಕಳು ಸಮಾಜಮುಖಿ ಸೇವೆ ಮೂಲಕ ಗಮನ ಸೆಳೆದರು ಎಂದು ಶಾಲಾ ಶಿಕ್ಷಕ ಕೆ.ಚೌಡರೆಡ್ಡಿ ತಿಳಿಸಿದರು.

ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಸಿ.ಎನ್. ಸತ್ಯನಾರಾಯಣರೆಡ್ಡಿ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜ್ಞಾನಕುಮಾರ್‌, ಶಿಕ್ಷಕರಾದ ಎಸ್.ಎಸ್.ಶ್ರೀನಿವಾಸ್, ಜಯಂತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.