ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ್ ರಾವ್ ಕೇಳುತ್ತಿದ್ದಾರೆ ‘ನಮ್ಮವರು ಯಾರು’?

Last Updated 2 ಜನವರಿ 2018, 9:03 IST
ಅಕ್ಷರ ಗಾತ್ರ

ಗಣೇಶ್ ರಾವ್ ಕೇಸರ್ಕರ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ ‘ನಮ್ಮವರು’ ಶುಕ್ರವಾರ ತೆರೆಗೆ ಬರುತ್ತಿದೆ. ಸಮಾಜದಲ್ಲಿ ಎಲ್ಲರ ಜೀವನದಲ್ಲೂ ಆಗುತ್ತಿರುವ ಪಲ್ಲಟಗಳನ್ನು ಇಟ್ಟುಕೊಂಡು ಹೊಸೆದಿರುವ ಕಥೆ ಈ ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ನಮ್ಮವರು’ ಎಂಬ ಹೆಸರಿನ ಕೆಳಗೆ ‘ಯಾರು’ ಎಂಬ ಅಡಿಶೀರ್ಷಿಕೆ ಇದೆ. ಈ ಮೂಲಕ ‘ನಮ್ಮವರು ಯಾರು’ ಎಂಬ ಪ್ರಶ್ನೆಯನ್ನು ಕೇಳಲು ಈ ಸಿನಿಮಾ ಮುಂದಾಗಿರುವಂತಿದೆ.

‘ಇದು ನಾನು ನಟಿಸುತ್ತಿರುವ 150ನೇ ಚಿತ್ರ. ಸಾಂಸಾರಿಕ ಕಥಾಹಂದರವನ್ನು ಇದು ಹೊಂದಿದೆ’ ಎಂದು ಹೇಳುತ್ತಾರೆ ಗಣೇಶ್ ರಾವ್.

ಪ್ರತಿ ವ್ಯಕ್ತಿಯ ಜೀವನದಲ್ಲೂ ನಡೆಯಬಹುದಾದ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ. ‘ಗಂಡಸು ಮದುವೆ ಆಗುವವರೆಗೆ ಒಂದು ರೀತಿ ಇರುತ್ತಾನೆ. ಮದುವೆಯ ನಂತರ ಅಪ್ಪ–ಅಮ್ಮನನ್ನು ಕಡೆಗಣಿಸುತ್ತಾನೆ. ಹೆಂಡತಿಯನ್ನು ಬಿಟ್ಟುಬಿಟ್ಟರೆ ಸಮಾಜ ಆಡಿಕೊಳ್ಳುತ್ತದೆ.  ಅದೇ ರೀತಿ, ತಂದೆ–ತಾಯಿಯನ್ನು ಬಿಟ್ಟು ಹೆಂಡತಿಯ ಕಡೆ ಮುಖ ಮಾಡಿದರೂ ಹಾಗೇ ಆಗುತ್ತದೆ. ಅಂತಹ ಸಮಯದಲ್ಲಿ ಏನು ಮಾಡಬೇಕು ಎಂಬ ತೊಳಲಾಟಕ್ಕೆ ಗಂಡಸು ಸಿಲುಕಿಕೊಳ್ಳುತ್ತಾನೆ. ಇದು ಈ ಸಿನಿಮಾದ ಕಥಾಹಂದರ’ ಎನ್ನುತ್ತಾರೆ ಗಣೇಶ್ ರಾವ್.

ಇಂತಹ ಸಂದಿಗ್ಧಕ್ಕೆ ಸಿಲುಕಿದ ವ್ಯಕ್ತಿ ಏನು ಮಾಡುತ್ತಾನೆ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾನೆ ಎಂಬುದೇ ಈ ಸಿನಿಮಾದ ಕಥಾ ಹೂರಣ ಎಂದು ಅವರು ಹೇಳಿದರು. ಓಂಕಾರ್ ಪುರುಷೋತ್ತಮ್‌ ಅವರು ಇದನ್ನು ನಿರ್ದೇಶಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.

ಅಪ್ಪ–ಅಮ್ಮ ಮಕ್ಕಳ ಕಡೆ ಸರಿಯಾಗಿ ಗಮನ ಕೊಡದಿದ್ದಾಗ ಮಗುವಿನ ಮೇಲೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಎಳೆಯೂ ಸಿನಿಮಾದಲ್ಲಿ ಇದೆ ಎಂದು ಗಣೇಶ್ ರಾವ್ ತಿಳಿಸಿದರು.

ಕಥಾನಾಯಕ ತನ್ನ ತಾಯಿಯನ್ನು ಒಂದು ಹಂತದಲ್ಲಿ ಅನಾಥಾಶ್ರಮಕ್ಕೆ ಸೇರಿಸುತ್ತಾನೆ. ಆಗ ಅಜ್ಜಿಯ ಪ್ರೀತಿಯಿಂದ ವಂಚಿತನಾಗುವ ಮೊಮ್ಮಗ ಅವಳನ್ನು ಹುಡುಕಿಕೊಂಡು ತಾನೇ ಅನಾಥಾಶ್ರಾಮಕ್ಕೆ ಹೋಗಿಬಿಡುವ ಸನ್ನಿವೇಶವೂ ಸಿನಿಮಾದಲ್ಲಿ ಚಿತ್ರಿತವಾಗಿದೆಯಂತೆ.

ರಾಜ್‌ ಭಾಸ್ಕರ್ ಅವರು ಸಂಗೀತ ನೀಡಿದ್ದಾರೆ, ಮುತ್ತುರಾಜ್‌ ಅವರು ಛಾಯಾಗ್ರಹಣದ ಹೊಣೆ ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT