ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಮತಿ: ಇನ್ನೂ ನಿಗದಿಯಾಗದ ಮುಹೂರ್ತ

Last Updated 2 ಜನವರಿ 2018, 9:03 IST
ಅಕ್ಷರ ಗಾತ್ರ

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಜನ ಆ ಒಂದು ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಹಲವು ವರ್ಷಗಳ ಹೋರಾಟದ ಫಲವಾಗಿ ದಕ್ಕಿದ ತಾಲ್ಲೂಕಿನ ಸ್ಥಾನಮಾನ ಅನುಭವಿಸಲು ಸಿದ್ಧರಾಗಿದ್ದರು. ಇರುವ ಕಟ್ಟಡಗಳಿಗೇ ಸುಣ್ಣ–ಬಣ್ಣ ಬಳಿದು ಅಧಿಕಾರಿಗಳೂ ಸಜ್ಜುಗೊಂಡಿದ್ದರು. ಆದರೆ, ಕಾರ್ಯಾರಂಭ ಮುಂದಕ್ಕೆ ಹೋಗಿದ್ದರಿಂದ ಜನರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ.

ಸರ್ಕಾರ ಈ ಹಿಂದೆ ಘೋಷಿಸಿದ್ದಂತೆ ಜನವರಿ 2ರಂದೇ ನ್ಯಾಮತಿ ಒಳಗೊಂಡಂತೆ ರಾಜ್ಯದ 49 ಹೊಸ ತಾಲ್ಲೂಕುಗಳು ಕಾರ್ಯಾರಂಭ ಮಾಡಬೇಕಿತ್ತು. ಆದರೆ, ಸರ್ಕಾರವೇ ಹೊರಡಿಸಿದ ತಕರಾರು ಅರ್ಜಿಗೆ ಒಂದು ತಿಂಗಳ ಕಾಲಾವಧಿ ನಿಗದಿಗೊಳಿಸಿದ್ದರಿಂದ ಕಾರ್ಯಾರಂಭ ವಿಳಂಬವಾಗಿದೆ. ಕಾಲಾವಧಿ ಇದೇ ಜನವರಿ 7ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ದಿನಾಂಕದ ನಂತರವಷ್ಟೇ ಕಾರ್ಯಾರಂಭ ಎಂದು ಜಿಲ್ಲೆ ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.

‘ತಕರಾರು ಅರ್ಜಿಗೆ ದಿನಾಂಕ ನಿಗದಿಪಡಿಸುವುದಕ್ಕೂ ಮೊದಲು ಕಾರ್ಯಾರಂಭ ಮಾಡುವ ದಿನಾಂಕ ಘೋಷಣೆ ಮಾಡುವ ಅಗತ್ಯವಿರಲಿಲ್ಲ. ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಕೊಂಡೇ ದಿನಾಂಕ ಘೋಷಣೆ ಮಾಡಬಹುದಾಗಿತ್ತು. ಜಿಲ್ಲಾಧಿಕಾರಿ ಅವರು ನ್ಯಾಮತಿಗೆ ಬಂದು ಈ ವಿಷಯ ತಿಳಿಸಿದಾಗಲೇ ನಮಗೆ ಗೊತ್ತಾಗಿದ್ದು; ನಾವೆಲ್ಲಾ ಸಿದ್ಧತೆ ಮಾಡಿಕೊಂಡಿದ್ದೆವು. ಸರ್ಕಾರದ ಈ ನಡೆಯಿಂದ ನಮಗೆ ಈಗ ಭ್ರಮನಿರಸನವಾಗಿದೆ’ ಎಂದು ಬೇಸರ ವ್ಯಕ್ತ‍ಪಡಿಸುತ್ತಾರೆ ನ್ಯಾಮತಿ ನಾಗರಿಕ ಹೊನ್ನೂರಪ್ಪ.

ನ್ಯಾಮತಿಯಲ್ಲಿ ಎಲ್ಲೆಲ್ಲಿ ಯಾವ ಕಚೇರಿಗಳು ಕಾರ್ಯಾರಂಭ ಮಾಡಬೇಕೆಂದು ಗುರುತಿಸಲಾಗಿದೆ. ನ್ಯಾಮತಿ ಗ್ರಾಮ ಪಂಚಾಯ್ತಿ ಆಡಳಿತ ವ್ಯಾಪ್ತಿಯ ಮಳಿಗೆ, ಕಚೇರಿಗಳನ್ನು ತಾಲ್ಲೂಕು ಆಡಳಿತಕ್ಕೆ ವಹಿಸಿಕೊಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ತಿಳಿಸಿದ್ದಾರೆ.

ತಾಲ್ಲೂಕು ಕಚೇರಿ ಈಗಿರುವ ನಾಡ ಕಚೇರಿಯಲ್ಲೇ ಕಾರ್ಯಾರಂಭ ಮಾಡಲಿದೆ. ಇಲ್ಲಿ ಸುಮಾರು 20 ಇಲಾಖೆಗಳು ಕಾರ್ಯನಿರ್ವಹಿಸಲಿವೆ. ನ್ಯಾಮತಿ ಪಟ್ಟಣದಲ್ಲಿ ಕೆಲ ನೂತನ ಕಚೇರಿಗಳ ಕಟ್ಟಡಕ್ಕೆ ಜಾಗ ಸಹ ಗುರುತಿಸಲಾಗಿದೆ. ಸರ್ಕಾರದಿಂದ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಬಂದ ನಂತರ ಕಾಮಗಾರಿ ಆರಂಭಿಸಲಾಗುವುದು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ವಸತಿ ಗೃಹಗಳು, ಅರಣ್ಯ ಇಲಾಖೆಗೆ ಸಂಬಂಧಿಸಿದ 2 ಕಟ್ಟಡ ಒಳಗೊಂಡಂತೆ ಕೆಲ ಖಾಸಗಿ ಕೆಲ ಕಟ್ಟಡಗಳನ್ನು ಬಾಡಿಗೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಹೊನ್ನಾಳಿ ತಾಲ್ಲೂಕಿನ 179 ಗ್ರಾಮಗಳಲ್ಲಿ ಮೂರು ಹೋಬಳಿಗಳ 75 ಗ್ರಾಮಗಳನ್ನು ಸೇರಿಸಿ ಹೊಸ ತಾಲ್ಲೂಕು ರಚಿಸುವ ಕುರಿತು ಸರ್ಕಾರಕ್ಕೆ 2010–11ನೇ ಸಾಲಿನಲ್ಲೇ ಪ್ರಸ್ತಾವ ಸಲ್ಲಿಸಲಾಗಿತ್ತು. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಕೊನೆಯ ಅವಧಿಯಲ್ಲಿ ಘೋಷಿಸಿದ ಹೊಸ ತಾಲ್ಲೂಕುಗಳಲ್ಲಿ ನ್ಯಾಮತಿಯೂ ಸೇರಿತ್ತು. ಇದೇ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತಾಲ್ಲೂಕು ಘೋಷಣೆ ಮಾಡಿತ್ತು.

ನ್ಯಾಮತಿ ತಾಲ್ಲೂಕಿಗೆ ಸೇರಿದ ಗ್ರಾಮಗಳು

ನ್ಯಾಮತಿ ಹೋಬಳಿ: ದಾನಿಹಳ್ಳಿ, ನ್ಯಾಮತಿ, ಬಸಾಪುರ, ಸುರಹೊನ್ನೆ, ಸಾಲಬಾಳು, ದೇವಿಕೊಪ್ಪ, ಯರಗನಾಳ್‌, ಕುದರೆಕೊಂಡ, ರಾಮೇಶ್ವರ, ಬೆಳಗುತ್ತಿ. ಈಸ್ರಾಪುರ, ತೀರ್ಥರಾಮೇಶ್ವರ, ಗುಡ್ಡೆಹಳ್ಳಿ, ನೆರಗಿನಕೆರೆ, ಹೊಸಕೊಪ್ಪ, ಕುಳ್ಳೆಹಳ್ಳಿ, ಜೀನಹಳ್ಳಿ, ದೊಡ್ಡೆತ್ತಿನಹಳ್ಳಿ, ದಾಸರಕಟ್ಟೆ, ಚಿಕ್ಕೆತ್ತಿನಹಳ್ಳಿ, ಕೋಡಿಕೊಪ್ಪ, ಕಂಬಿಗನಹಳ್ಳಿ, ಕುಂಕುವಾ, ವಡೆಯರಹತ್ತೂರು, ಕೂಗೋನಹಳ್ಳಿ, ಗಡೇಕಟ್ಟೆ, ಕಲ್ಲುಕಟ್ಟೆ, ಚಟ್ನಹಳ್ಳಿ, ಫಲವನಹಳ್ಳಿ, ಮುಸ್ಸೇನಾಳ್‌, ಗಂಜೇನಹಳ್ಳಿ, ಮಂಗನಕೊಪ್ಪ, ಸವಳಂಗ, ಸೋಗಿಲು, ಮಾದಾಪುರ, ಮಾಚಗೊಂಡನಹಳ್ಳಿ, ಕೊಡತಾಳ್, ವೀರಾಪುರ, ಚಿನ್ನಿಕಟ್ಟೆ, ಬಿದರಹಳ್ಳಿ, ಯಲ್ಲಾಪುರ, ಸೂರಗೊಂಡನಕೊಪ್ಪ, ಲಕ್ಕಿನಕೊಪ್ಪ, ಸಾವಕೊಂಡನಹಳ್ಳಿ, ಅರಳಿಕಟ್ಟೆ, ಜೋಗ, ಗುಂಡಿಚಟ್ನಹಳ್ಳಿ, ಸಿದ್ದಾಪುರ, ಕ್ಯಾತಿನಕೊಪ್ಪ, ಬೆಳಲಕಟ್ಟೆ.

ಗೋವಿನಕೋವಿ ಹೋಬಳಿ: ಬಸವನಹಳ್ಳಿ, ಗಂಗನಕೋಟೆ, ಅರೇಹಳ್ಳಿ, ಬಿಜೋಗಟ್ಟೆ, ಕೆಂಗಟ್ಟೆ, ಕುಂಕೋನಹಳ್ಳಿ, ದೊಡ್ಡೇರಿ, ಅಕ್ಕತಂಗೇರ ಕಟ್ಟೆ, ಚೀಲೂರು, ತಗ್ಗಿಹಳ್ಳಿ, ಚಿ.ಕಡದಕಟ್ಟೆ, ಮರಿಗೊಂಡನಹಳ್ಳಿ, ಕೋಟೆಹಾಳ್, ಗೊರವರಹಟ್ಟಿ, ಅಚ್ಯುತಾಪುರ, ಕುರುವಾ, ಗೋವಿನಕೋವಿ, ಸೇವಾಲಾಲ್‌ ನಗರ, ಟಿ.ಗೋಪಗೊಂಡನಹಳ್ಳಿ, ಮಳಲಿ. ಕಸಬ ಹೋಬಳಿ: ಮಾದನಬಾವಿ, ಕೊಡಚಗೊಂಡನಹಳ್ಳಿ, ಆರುಂಡಿ, ಕೆಂಚಿಕೊಪ್ಪ, ಕತ್ತಿಗೆ.

* * 

ಜನವರಿ ಎರಡನೇ ವಾರದಿಂದ ನೂತನ ತಾಲ್ಲೂಕು ಕೇಂದ್ರ ಅಸ್ತಿತ್ವಕ್ಕೆ ಬರಲಿದ್ದು, ಇದಕ್ಕೆ ಸಕಲ ಸಿದ್ಧತೆಗಳು ನಡೆದಿವೆ.
ಡಿ.ಎಸ್‌.ರಮೇಶ್
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT