ಶನಿವಾರ, ಜೂಲೈ 4, 2020
21 °C

ಉಪವಿಭಾಗಾಧಿಕಾರಿ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪವಿಭಾಗಾಧಿಕಾರಿ ವಿರುದ್ಧ ಪ್ರತಿಭಟನೆ

ರಾಣೆಬೆನ್ನೂರು: ‘ತಾಲ್ಲೂಕಿನ ಮುದೇನೂರು ಗ್ರಾಮದ ರೈತರಿಬ್ಬರ ಮೇಲೆ ಉಪವಿಭಾಗಾಧಿಕಾರಿ (ಎ.ಸಿ.) ಪಿ.ಎನ್‌.ಲೋಕೇಶ್ ಹಲ್ಲೆ ಮಾಡಿ, ಒದ್ದಿದ್ದಲ್ಲದೇ, ಅವರನ್ನು ಜೈಲಿಗೆ ಹಾಕಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ವಿವಿಧ ಸಂಘ–ಸಂಸ್ಥೆ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ‘ಲೋಕೇಶ ಅವರು ಮುದೇನೂರಿನ ಶಂಕರಗೌಡ ಗಂಗನಗೌಡ್ರ ಹಾಗೂ ಕೆಂಚನಗೌಡ ಬಸನಗೌಡ್ರ ಅವರ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಪ್ರಕರಣ ದಾಖಲಿಸಿದ್ದಾರೆ. ಇದನ್ನು ರೈತ ಸಂಘ ಖಂಡಿಸುತ್ತದೆ’ ಎಂದರು.

‘ಸಾರ್ವಜನಿಕರು ತಪ್ಪು ಮಾಡಿದರೆ ಪ್ರಶ್ನೆ ಮಾಡುವ ಹಕ್ಕು ಸರ್ಕಾರಿ ಅಧಿಕಾರಿಗಳಿಗೆ ಇದೆ. ಆದರೆ, ಉಪವಿಭಾಗಾಧಿಕಾರಿಗೆ ರೈತರನ್ನು ಒದೆಯುವ ಅಧಿಕಾರ ಕೊಟ್ಟವರಾರು?’ ಎಂದು ಕೇಳಿದ ಅವರು, ‘ರೈತರ ಮೇಲೆ ದೌರ್ಜನ್ಯ ನಡೆಸಿದ ಉಪವಿಭಾಗಾಧಿಕಾರಿ ಪಿ.ಎನ್‌.ಲೋಕೇಶ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆಯು ನಗರದ ಗಣೇಶ ದೇವಸ್ಥಾನದಿಂದ ಪ್ರಾರಂಭವಾಗಿ ಬಸ್‌ ನಿಲ್ದಾಣ, ಅಂಚೆ ಕಚೇರಿ ವೃತ್ತ, ಎಂ.ಜಿ.ರಸ್ತೆ, ಟಾಂಗಾಕೂಟ, ಕುರುಬಗೇರಿ ವೃತ್ತದ ಮೂಲಕ ತಹಶೀಲ್ದಾರ್‌ ಕಚೇರಿಗೆ ಬಂದು, ಬಳಿಕ ತಹಶೀಲ್ದಾರ್‌ ರಾಮಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ನಗರದ ನ್ಯಾಯಾಲಯದ ಆವರಣದ ಎದುರು ಕೆಲ ಸಮಯ ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಮುಖಂಡ ನಿತ್ಯಾನಂದ ಕುಂದಾಪುರ, ಚಂದ್ರು ಕಡ್ಲಿಗೊಂದಿ, ಫಾಲಾಕ್ಷ ಕಡೇಮನಿ, ನಾಗಪ್ಪ ಯಲಿಗಾರ, ಮಲ್ಲಿಕಾರ್ಜುನ ಬಳ್ಳಾರಿ, ಜೆಡಿಎಸ್‌ ಮುಖಂಡ ಮಂಜುನಾಥ ಭಾನುವಳ್ಳಿ, ಬಸನಗೌಡ ಗಂಗಪ್ಪನವರ, ರಾಮನಗೌಡ ಪಾಟೀಲ, ಸಿದ್ದನಗವಡ ಸಣ್ಣಕಾಶಿ, ಚಂದ್ರಶೇಖರ ಗಂಗನಗೌಡ್ರ, ವೆಂಕನಗೌಡ ಸಣ್ಣಕಾಶಿ, ಪ್ರಕಾಶಗೌಡ ಪಾಟೀಲ, ಕರಬಸಪ್ಪ ಅಗಸಿಬಾಗಿಲ, ಮೇಘರಾಜ ಕರಬಸಳ್ಳವರ, ಬಸವರಾಜ ಕಡೂರ, ಹರೀಶ ನಾಗೇನಹಳ್ಳಿ ಇದ್ದರು.

* * 

ರಾಷ್ಟ್ರಪತಿಯಿಂಧ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತ ಶಂಕರಗೌಡ ಅವರನ್ನು ಜೈಲಿಗೆ ಕಳಿಸಿದ್ದು ರೈತ ಸಮುದಾಯಕ್ಕೆ ಮಾಡಿದ ಅವಮಾನ

ಈರಪ್ಪ ಹಲಗೇರಿ

ರೈತ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.