ಬುಧವಾರ, ಜೂಲೈ 8, 2020
23 °C

ಆರ್‌ಸಿಬಿಗೆ ಕರ್ಸ್ಟನ್‌, ನೆಹ್ರಾ ಮಾರ್ಗದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್‌ಸಿಬಿಗೆ ಕರ್ಸ್ಟನ್‌, ನೆಹ್ರಾ ಮಾರ್ಗದರ್ಶನ

ಬೆಂಗಳೂರು: ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಮತ್ತು ಭಾರತದ ಹಿರಿಯ ಆಟಗಾರ ಆಶಿಶ್‌ ನೆಹ್ರಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಕ್ರಮವಾಗಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಕೋಚ್‌ ಆಗಿ ನೇಮಕವಾಗಿದ್ದಾರೆ.

ಇವರು ತಂಡದ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಆರ್‌ಸಿಬಿ ಫ್ರಾಂಚೈಸ್‌ ಹೋದ ವಾರ ಕರ್ಸ್ಟನ್‌ ಮತ್ತು ನೆಹ್ರಾ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

2011ರಲ್ಲಿ ಭಾರತ ಏಕದಿನ ವಿಶ್ವಕಪ್‌ ಗೆದ್ದಾಗ ಗ್ಯಾರಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. 2015ರ ಐಪಿಎಲ್‌ನಲ್ಲಿ ಅವರು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಕೋಚ್‌ ಆಗಿದ್ದರು.

ಹೋದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದ ನೆಹ್ರಾ, ಭಾರತ ಮತ್ತು ಶ್ರೀಲಂಕಾ ನಡುವಣ ಸರಣಿಯ ವೇಳೆ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡಿದ್ದರು.

ನ್ಯೂಜಿಲೆಂಡ್‌ನ ಹಿರಿಯ ಆಟಗಾರ ಡೇನಿಯಲ್‌ ವೆಟೋರಿ ಅವರನ್ನು ತಂಡದ ಮುಖ್ಯ ಕೋಚ್ ಆಗಿ ಮುಂದುವರಿಸಲು ಆರ್‌ಸಿಬಿ ಫ್ರಾಂಚೈಸ್‌ ನಿರ್ಧರಿಸಿದೆ. ವೆಟೋರಿ, 2014ರಿಂದಲೂ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಆಸ್ಟ್ರೇಲಿಯಾದ ಟ್ರೆಂಟ್‌ ವುಡ್‌ಹಿಲ್‌ಗೆ ಬ್ಯಾಟಿಂಗ್‌ ಟ್ಯಾಲೆಂಟ್‌ ಡೆವಲಪ್‌ಮೆಂಟ್‌, ಅನಾಲಿಟಿಕ್ಸ್‌ ಮತ್ತು ಫೀಲ್ಡಿಂಗ್‌ ಕೋಚ್‌ನ ಜವಾಬ್ದಾರಿ ವಹಿಸಲಾಗಿದೆ.

ತಂಡದ ಬೌಲಿಂಗ್‌ ಕೋಚ್‌ ಆಗಿದ್ದ ಮೆಕ್‌ಡೊನಾಲ್ಡ್‌ ಇನ್ನು ಮುಂದೆ ಬೌಲಿಂಗ್‌ ಟ್ಯಾಲೆಂಟ್‌ ಡೆವಲಪ್‌ಮೆಂಟ್‌ ಮತ್ತು ಅನಾಲಿಟಿಕ್‌ ವಿಭಾಗದ ಹೊಣೆ ನಿಭಾಯಿಸಲಿದ್ದಾರೆ.

‘ಗ್ಯಾರಿ ಮತ್ತು ನೆಹ್ರಾ ಅವರನ್ನು ತಂಡದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಕೋಚ್‌ ಆಗಿ ನೇಮಿಸಿರುವುದು ಖುಷಿಯ ವಿಚಾರ. ಅನುಭವಿಗಳಾಗಿರುವ ಇವರು ಆಟಗಾರರಿಗೆ ಹಲವು ವಿನೂತನ ಕೌಶಲಗಳನ್ನು ಹೇಳಿಕೊಟ್ಟು ತಂಡದ ಶಕ್ತಿ ಹೆಚ್ಚಿಸಲಿದ್ದಾರೆ. ಈ ಬಾರಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಲು ನಾವೆಲ್ಲ ಶ್ರಮಿಸುತ್ತೇವೆ’ ಎಂದು ವೆಟೋರಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.