ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಕುಟುಂಬದ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ಸಚಿವ ಸಂಪುಟ ನಿರ್ಣಯ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಇನ್ನು ಮುಂದೆ ತಮ್ಮ ಆಸ್ತಿಯ ವಿವರದ ಜತೆಗೆ ಅವಲಂಬಿತ ತಂದೆ, ತಾಯಿ, ಮಕ್ಕಳ ಹೆಸರಿನಲ್ಲಿರುವ ಸ್ಥಿರ ಮತ್ತು ಚರಾಸ್ತಿ, ನಗದು, ಬ್ಯಾಂಕ್ ಖಾತೆ ವಿವರಗಳನ್ನು ಪ್ರತಿ ವರ್ಷ ಲೋಕಾಯುಕ್ತಕ್ಕೆ ಸಲ್ಲಿಸುವುದು ಕಡ್ಡಾಯವಾಗಲಿದೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಭೆ ಬಳಿಕ ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ತಿದ್ದುಪಡಿಯ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಇಲ್ಲಿಯವರೆಗಿದ್ದ ನಿಯಮಗಳ ಅನುಸಾರ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿರುವ ಆಸ್ತಿ ಮತ್ತು ಸಾಲದ ವಿವರಗಳನ್ನಷ್ಟೇ ನೀಡಬೇಕಿತ್ತು. ನೌಕರ, ಆತನ ಪತ್ನಿ, ತಂದೆ, ತಾಯಿ ಹಾಗೂ ಎಲ್ಲ ಮಕ್ಕಳ ಹೆಸರು, ಅವರ ಹೆಸರಿನಲ್ಲಿರುವ ಆಸ್ತಿ, ಅವರೆಲ್ಲರ ಬ್ಯಾಂಕ್ ಖಾತೆಗಳ ವಿವರ, ವಿವಿಧ ರೂಪದ ಉಳಿತಾಯ, ₹10,000 ಮೌಲ್ಯಕ್ಕೂ ಮೇಲ್ಪಟ್ಟ ವಸ್ತುಗಳ ವಿವರ, ₹25,000 ಮೌಲ್ಯಕ್ಕೂ ಮೇಲ್ಪಟ್ಟ ಗೃಹೋಪಯೋಗಿ ವಸ್ತುಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ಸದ್ಯದ ನಿಯಮಗಳ ಪ್ರಕಾರ ಆಸ್ತಿ ಮೌಲ್ಯಗಳ ವಿವರ ನೀಡುವಾಗ, ಆಸ್ತಿ ಖರೀದಿಸಿದಾಗ ಪಾವತಿಸಿದ್ದ ಮೊತ್ತ ಎಷ್ಟು ಎಂಬ ವಿವರ ನೀಡಿದರೆ ಸಾಕಾಗುತ್ತಿತ್ತು. ಹೊಸ ನಿಯಮದ ಪ್ರಕಾರ ಮಾರ್ಗಸೂಚಿ ದರದ ಆಧಾರದಲ್ಲಿ ವಿವರ ಸಲ್ಲಿಸಬೇಕಾಗುತ್ತದೆ.

ಆಧಾರ್‌ ಕಡ್ಡಾಯ

ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯುವ ಫಲಾನುಭವಿಗಳಿಗೆ ಆಧಾರ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.

‘ಕರ್ನಾಟಕ ರಾಜ್ಯ ಆಧಾರ್(ಆರ್ಥಿಕ ಮತ್ತು ಇತರೆ ಸಬ್ಸಿಡಿಗಳ ಉದ್ದೇಶಿತ ವಿತರಣೆ, ಪ್ರಯೋಜನ, ಸೇವೆಗಳು) ಮಸೂದೆ–2017ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ‌ಫೆಬ್ರುವರಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ಮಸೂದೆಗೆ ಅನುಮೋದನೆ ಪಡೆಯಲಾಗುವುದು ಎಂದು ಜಯಚಂದ್ರ ತಿಳಿಸಿದರು.

ಕಾಯ್ದೆ ಜಾರಿಯಾದ ಬಳಿಕ ಬೆಳೆ ನಷ್ಟ ಪರಿಹಾರ, ಬೆಳೆವಿಮೆ, ಪಡಿತರ ಚೀಟಿ, ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲ ಯೋಜನೆಗಳ ಸೌಲಭ್ಯ ಪಡೆಯಬೇಕಾದರೆ ಆಧಾರ್ ಜೋಡಣೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಆಶಾದೀಪ

ಖಾಸಗಿ ವಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉದ್ಯೋಗ ನೀಡುವುದನ್ನು ಪ್ರೋತ್ಸಾಹಿಸಲು ‘ಆಶಾದೀಪ’ ಎಂಬ ಯೋಜನೆ ಜಾರಿಗೆ ಬರಲಿದೆ.

ಖಾಸಗಿ ಉದ್ಯಮಿಗಳು ನೌಕರಿ ನೀಡಿದರೆ ಎರಡು ವರ್ಷದವರೆಗೆ ಕಾರ್ಮಿಕರ ರಾಜ್ಯ ವಿಮೆಯ ಕಂತನ್ನು ಸರ್ಕಾರವೇ ಪಾವತಿಸಲಿದೆ. ಇದಕ್ಕಾಗಿ ₹40 ಕೋಟಿಯನ್ನು ಸರ್ಕಾರ ಮೀಸಲಿಟ್ಟಿದೆ.

ಅಕ್ರಮ ಮರಳು ಗಣಿಗಾರಿಕೆಗೆ ಗೂಂಡಾ ಕಾಯ್ದೆ ಅನ್ವಯ

ಅಕ್ರಮ ಮರಳು ಗಣಿಗಾರಿಕೆ ಹಾಗೂ ಅರಣ್ಯದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುವವರ ವಿರುದ್ಧ ಗೂಂಡಾ ಕಾಯ್ದೆ ಬಳಸಲು ಸರ್ಕಾರ ತೀರ್ಮಾನಿಸಿದೆ.

ಗೂಂಡಾ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಹಾಲಿ ಇರುವ ಕಾಯ್ದೆ ಅಡಿ ಭೂಮಿ ಕಬಳಿಸುವವರು, ಮೀಟರ್‌ (ದುಬಾರಿ) ಬಡ್ಡಿ ವಸೂಲಿ ಮಾಡುವವರು, ಬೀದಿ ಕಾಮಣ್ಣರು, ರೌಡಿಸಂ ಮಾಡುವ ಮತ್ತು ಕೋಮುಸೌಹಾರ್ದ ಕದಡುವ ಕೆಲಸದಲ್ಲಿ ಪದೆಪದೇ ಭಾಗಿಯಾಗುವವರ ವಿರುದ್ಧ ಈ ಕಾಯ್ದೆ ಬಳಸಬಹುದಿತ್ತು.

ರಾಜ್ಯ ಬಜೆಟ್‌ ಫೆ. 16ಕ್ಕೆ

2018– 19ನೇ ಸಾಲಿನ ರಾಜ್ಯ ಬಜೆಟ್‌ ಫೆ. 16ರಂದು ಮಂಡನೆಯಾಗಲಿದೆ.

ವಿಧಾನ ಮಂಡಲದ ಬಜೆಟ್‌ ಅಧಿವೇಶನ ಫೆ. 16ರಂದು ಆರಂಭವಾಗಿ 28ರವರೆಗೆ ನಡೆಯಲಿದೆ ಎಂದು ಜಯಚಂದ್ರ ತಿಳಿಸಿದರು.

ವಿಧಾನಮಂಡಲದ ಜಂಟಿ ಅಧಿವೇಶನ ಫೆ. 5ರಿಂದ ನಾಲ್ಕು ದಿನ (9ರವರೆಗೆ) ನಡೆಯಲಿದೆ. ಮೊದಲ ದಿನ ರಾಜ್ಯಪಾಲ ವಜುಭಾಯ್‌ ವಾಲಾ ಭಾಷಣ ಮಾಡಲಿದ್ದು, ಕೊನೆಯ ದಿನ ಸರ್ಕಾರ ಉತ್ತರ ನೀಡಲಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT