ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ರಚನೆಯಲ್ಲೂ ಪ್ರಚಾರದ ಕನಸು

Last Updated 2 ಜನವರಿ 2018, 19:42 IST
ಅಕ್ಷರ ಗಾತ್ರ

ಮಂಗಳೂರು: ‘ಸಂಸತ್ತು ಗಂಭೀರವಾಗಿ ಮಾಡಬೇಕಾದಂತಹ ಕಾನೂನು ರಚನೆಯ ಕೆಲಸವನ್ನೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದರು.

ಮೂಡುಬಿದಿರೆಯಲ್ಲಿ ಆರಂಭವಾಗಿರುವ ಸಿಪಿಎಂ 22ನೇ ರಾಜ್ಯ ಸಮ್ಮೇಳನದ ಅಂಗವಾಗಿ ಅಲ್ಲಿನ ಸ್ವರಾಜ್‌ ಮೈದಾನದಲ್ಲಿ ಮಂಗಳವಾರ  ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಕಾನೂನು ರಚನೆ ಪ್ರಚಾರಕ್ಕಾಗಿ ಮಾಡಬೇಕಾದ ಕೆಲಸ ಅಲ್ಲವೇ ಅಲ್ಲ. ಅದು ಅತ್ಯಂತ ಗಂಭೀರವಾದ ಕೆಲಸ. ಆದರೆ, ಬಿಜೆಪಿ ಸರ್ಕಾರ ಉಳಿದೆಲ್ಲದರಲ್ಲೂ ಅತಿಯಾದ ಪ್ರಚಾರ ಬಯಸಿದಂತೆ ಕಾನೂನು ರಚನೆಯಲ್ಲೂ ಪ್ರಚಾರಕ್ಕಾಗಿ ಎದುರು ನೋಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ತ್ರಿವಳಿ ತಲಾಖ್‌ ನಿಷೇಧಿಸುವ ಮಸೂದೆಯನ್ನು ಅವಲೋಕಿಸಿದರೆ ಕೇಂದ್ರ ಸರ್ಕಾರ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮದುವೆ ಒಂದು ಸಿವಿಲ್‌ ಒಪ್ಪಂದ. ಅದನ್ನು ಕ್ರಿಮಿನಲ್‌ ಅಪರಾಧವನ್ನಾಗಿಸುವ ತಪ್ಪನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಕುರಿತ ಗಂಭೀರ ಚರ್ಚೆಗೂ ಅವಕಾಶ ನೀಡಿಲ್ಲ. ಇದು ಬಿಜೆಪಿಯ ಕೋಮುವಾದಿ ರಾಜಕಾರಣದ ಭಾಗವೂ ಹೌದು ಎಂದರು.

‘ತ್ರಿವಳಿ ತಲಾಖ್‌ ನಿಷೇಧಿಸುವುದನ್ನು ಸಿಪಿಎಂ ಎಷ್ಟೋ ವರ್ಷಗಳಿಂದ ಆಗ್ರಹಿಸಿದೆ. ಅದರ ಜತೆಯಲ್ಲೇ ಪರಿತ್ಯಕ್ತ ಮಹಿಳೆಯರು ಹಾಗೂ ಮಕ್ಕಳ ಭವಿಷ್ಯವನ್ನು ಭದ್ರಪಡಿಸುವ ಕೆಲಸವೂ ಆಗಬೇಕು. ಆದರೆ, ಈಗಿನ ಮಸೂದೆ ತಲಾಖ್ ನೀಡಿದ ಪತಿಯನ್ನು ಜೈಲಿಗೆ ಕಳಿಸುವುದಕ್ಕೆ ಸೀಮಿತವಾಗಿದೆ. ಪರಿತ್ಯಕ್ತ ಮಹಿಳೆ, ಮಕ್ಕಳ ಗತಿ ಏನು’ ಎಂದು ಪ್ರಶ್ನಿಸಿದರು.

‘ಮಹಿಳೆಯರು ಒಂಟಿಯಾಗಿ ಹಜ್‌ ಯಾತ್ರೆ ಕೈಗೊಳ್ಳಲು ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿತು. ಮುಸ್ಲಿಂ ಮಹಿಳೆಯರ ಪರವಾಗಿ ಐತಿಹಾಸಿಕ ನಿರ್ಧಾರ ಕೈಗೊಂಡಿರುವುದಾಗಿ ಪ್ರಧಾನಿ ಬಡಾಯಿ ಕೊಚ್ಚಿಕೊಂಡರು. ಆದರೆ, ವಾಸ್ತವವಾಗಿ ಸೌದಿ ಅರೇಬಿಯಾ ಸರ್ಕಾರ 2015ರಲ್ಲೇ ಇಂತಹ ನಿರ್ಧಾರ ಕೈಗೊಂಡಿತ್ತು. ಅದನ್ನು ಮುಚ್ಚಿಟ್ಟು ಪ್ರಚಾರ ಪಡೆಯಲು ಪ್ರಧಾನಿ ಮೋದಿ ಹವಣಿಸಿದರು’ ಎಂದು ಟೀಕಿಸಿದರು.

ಭ್ರಷ್ಟರಿಗೆ ರಕ್ಷಣೆ: ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಹೆಸರಿನಲ್ಲಿ ಮೋದಿ ಅಧಿಕಾರಕ್ಕೆ ಬಂದರು. ನಂತರ ಭ್ರಷ್ಟರಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತಿದ್ದಾರೆ. ಪನಾಮಾ ದಾಖಲೆಗಳಲ್ಲಿ ಹೆಸರಿದೆ ಎಂಬ ಕಾರಣಕ್ಕೆ ಪಾಕಿಸ್ತಾನದ ಪ್ರಧಾನಿ ರಾಜೀನಾಮೆ ನೀಡಿದರು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಗೆ ಸಂಬಂಧಿಸಿದ ಪನಾಮಾ ದಾಖಲೆಗಳಲ್ಲಿ ಮೋದಿಯ ಹೆಸರೂ ಇದೆ. ಅವರೇಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಯೆಚೂರಿ ಪ್ರಶ್ನಿಸಿದರು.

ಮಧ್ಯಪ್ರದೇಶದ ವ್ಯಾಪಂ ಹಗರಣ, ರಾಜಸ್ತಾನದ ಲಲಿತ್‌ ಮೋದಿ ಐಪಿಎಲ್‌ ಹಗರಣ, ಬಿಹಾರದ ಭೂ ಹಗರಣ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಪುತ್ರನ ಆಸ್ತಿಯಲ್ಲಿ ದಿಢೀರ್ ಏರಿಕೆ, ಭದ್ರತಾ ಸಲಹೆಗಾರ ಅಜಿತ್‌ ಢೋಬಾಲ್‌ ಮಗನ ಸಂಸ್ಥೆ ಅಕ್ರಮ ವಂತಿಗೆ ಸಂಗ್ರಹಿಸಿರುವುದು ಸೇರಿದಂತೆ ಮೂರು ವರ್ಷಗಳಲ್ಲಿ ಹೊರಬಂದ ಯಾವ ಭ್ರಷ್ಟಾಚಾರದ ಪ್ರಕರಣದ ಬಗ್ಗೆಯೂ ತನಿಖೆ ಆಗಿಲ್ಲ. ಭ್ರಷ್ಟಾಚಾರದ ವಿರುದ್ಧದ ಬದ್ಧತೆ ಎಲ್ಲಿ ಹೋಯಿತು ಎಂದು ಕೇಳಿದರು.

ಪ್ರಯೋಗಶಾಲೆಯಲ್ಲೇ ಎದುರಿಸುತ್ತೇವೆ: ‘ಮಂಗಳೂರಿನಲ್ಲಿ ಸಿಪಿಎಂ ರಾಜ್ಯ ಸಮ್ಮೇಳನ ನಿಗದಿಯಾಗಿರುವುದನ್ನು ಕೇಳಿದ ದೆಹಲಿಯ ಕೆಲವರು, ಹಿಂದುತ್ವದ ಪ್ರಯೋಗಶಾಲೆಯಲ್ಲಿ ಕಾರ್ಯಕ್ರಮ ನಡೆಸಲು ಸಾಧ್ಯವಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಇಲ್ಲಿಯೇ ನಿಂತು ಅವರನ್ನು ಎದುರಿಸುವ ಶಕ್ತಿ ಸಿಪಿಎಂಗೆ ಇದೆ. ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭೇಟಿ ವಿರೋಧಿಸಿದಾಗಲೂ ಎದುರಿಸಿದ್ದೇವೆ. ಮುಂದೆಯೂ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎದುರಿಸುತ್ತೇವೆ’ ಎಂದರು.

ಭಾರತೀಯರೇ ಜಾತ್ಯಾತೀತರು

‘ಕರ್ನಾಟಕದವರೇ ಆದ ಕೇಂದ್ರ ಸಚಿವರೊಬ್ಬರು ಜಾತ್ಯತೀತರ ಗುರುತಿನ ಬಗ್ಗೆ ಪ್ರಶ್ನಿಸಿದ್ದಾರೆ. ಧರ್ಮ, ಜಾತಿ, ಕುಲದ ಗುರುತನ್ನು ಬದಿಗಿಟ್ಟು ಮೊದಲು ನಾನು ಭಾರತೀಯ ಎಂದು ಹೇಳುವವರೇ ಜಾತ್ಯತೀತರು’ ಎಂದು ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿದರು.

‘ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್‌, ಪಾರ್ಸಿ ಸೇರಿದಂತೆ ಯಾವುದೇ ಧರ್ಮವಿದ್ದರೂ ಜಾತ್ಯತೀತ ಮನಸ್ಸು ಭಾರತೀಯನೆಂದು ಹೇಳಿಕೊಳುವುದಕ್ಕೆ ತುಡಿಯುತ್ತಿರುತ್ತದೆ. ಕೋಮು ಧ್ರುವೀಕರಣಕ್ಕಾಗಿ ಇಂತಹ ಕುಚೋದ್ಯದ ಪ್ರಶ್ನೆಗಳನ್ನು ಎತ್ತುತ್ತಾರೆ. ಸಂವಿಧಾನದ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿ, ಅದನ್ನೇ ಬದಲಾಯಿಸುವ ಮಾತನಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT