ಬುಧವಾರ, ಆಗಸ್ಟ್ 5, 2020
21 °C
ವಿದೇಶಿ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ತಯಾರಿ

ಅಂತರರಾಷ್ಟ್ರೀಯ ಪ್ರವಾಸಿ ಎಕ್ಸ್‌ಪೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ಪ್ರವಾಸಿ ಎಕ್ಸ್‌ಪೊ

ಬೆಂಗಳೂರು: ವಿದೇಶಿ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ಮೊದಲ ಬಾರಿಗೆ ‘ಅಂತರರಾಷ್ಟ್ರೀಯ ಪ್ರವಾಸಿ ಎಕ್ಸ್‌ಪೊ–2018’ (ಕೆಐಟಿಇಎಸ್‌) ಕಾರ್ಯಕ್ರಮ ಆಯೋಜಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ‘ಇಲ್ಲಿನ ಪ್ರವಾಸಿ ತಾಣಗಳ ಪರಿಚಯಿಸಲು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯಮಗಳಿಗೆ ನೆರವಾಗಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಫೆಬ್ರುವರಿ 28ರಿಂದ ಮಾರ್ಚ್‌ 2ರವರೆಗೆ ಎಕ್ಸ್‌ಪೋ ನಡೆಯಲಿದೆ’ ಎಂದು ಹೇಳಿದರು.

‘25ಕ್ಕೂ ಹೆಚ್ಚಿನ ದೇಶಗಳ 400ಕ್ಕೂ ಹೆಚ್ಚಿನ ನೋಂದಾಯಿತ ಖರೀದಿದಾರರು ಮತ್ತು ಮಾಧ್ಯಮಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 12 ಸಾವಿರಕ್ಕೂ ಹೆಚ್ಚಿನ ಸಂದರ್ಶನಗಳು ನಡೆಯಲಿವೆ. ಪ್ರವಾಸೋದ್ಯಮ ವಲಯವನ್ನು ಹಿಗ್ಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ’ ಎಂದರು.

ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಗೊಳ್ಳುತ್ತಿವೆ. ಮೇಳದಲ್ಲಿ 28 ಪ್ರಮುಖ ಪ್ರವಾಸಿ ವಿಭಾಗಗಳ ಬಗ್ಗೆ ಚರ್ಚೆ ನಡೆಯಲಿದೆ. ವನ್ಯಜೀವಿ, ಯುನೆಸ್ಕೋ ಪ್ರದೇಶ, ಪರಿಸರ ಪ್ರವಾಸೋದ್ಯಮ, ಪಾರಂಪರಿಕ ತಾಣಗಳು ಸೇರಿ ಇತರ ಪ್ರವಾಸಿ ತಾಣಗಳನ್ನು ಪರಿಚಯಿಸಲಾಗುತ್ತದೆ. ಮೇಳದ ನಂತರ ಪ್ರತಿನಿಧಿಗಳನ್ನು ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗುವುದು ಎಂದರು.

ಎಕ್ಸೊಪೊಗೆ ನೂತನ ಲಾಂಛನ

ಈ ಎಕ್ಸ್‌ಪೊಗಾಗಿ ಇಲಾಖೆ ನೂತನ ಲಾಂಛನ ಬಿಡುಗಡೆ ಮಾಡಿದೆ.

‘ರಾಜ್ಯದಲ್ಲಿ 8,000 ಆನೆಗಳಿವೆ. ಹಾಗಾಗಿ ಆನೆಯನ್ನು ಪ್ರಧಾನವಾಗಿ ಇಟ್ಟುಕೊಂಡು ಅದರೊಳಗೆ ರಾಜ್ಯದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಲಾಂಛನ ರೂಪಿಸಲಾಗಿದೆ’ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಈ ಬಾರಿ ವನ್ಯಜೀವಿ, ಸಾಹಸ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿರುವ ಕಾರಣ ಆ ಅಂಶಗಳನ್ನು ಒಳಗೊಂಡ ಲಾಂಛನ ರೂಪಿಸಿದ್ದೇವೆ. ವಿಷಯಗಳಿಗೆ ಅನುಸಾರವಾಗಿ ಲಾಂಛನದ ಒಳನೋಟ ಬದಲಾಗುತ್ತಿರುತ್ತದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.