ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಂಡಾರ ಓಕುಳಿಯಿಂದ ಬಂಗಾರವಾದ ಕ್ಷೇತ್ರ’

Last Updated 3 ಜನವರಿ 2018, 9:02 IST
ಅಕ್ಷರ ಗಾತ್ರ

ಸವದತ್ತಿ: ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಬನದ ಹುಣ್ಣಿಮೆ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಸಡಗರ ಸಂಭ್ರಮದಿಂದ ಶ್ರೀದೇವಿಗೆ ಮೀಸಲು ಅಡುಗೆ ಮಾಡಿ, ಅರ್ಪಿಸಿ, ದರ್ಶನ ಪಡೆದರು.

ಒಂದು ವಾರದಿಂದ ಯಲ್ಲಮ್ಮನಗುಡ್ಡಕ್ಕೆ ಭಕ್ತರು ಚಕ್ಕಡಿ, ವಿವಿಧ ವಾಹನಗಳ ಹಾಗೂ ಪಾದಯಾತ್ರೆಯ ಮೂಲಕ ಆಗಮಿಸಿ ಸುತ್ತಲಿನ ಗುಡ್ಡದ ವಿಶಾಲವಾದ ಪ್ರದೇಶದಲ್ಲಿಯೇ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು, ಮೀಸಲು (ವಿಶೇಷ) ಅಡುಗೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.

ಭಕ್ತರು ವಿವಿಧ ವಾದ್ಯಗಳು, ಚೌಡಕಿ ಪದಗಳೊಂದಿಗೆ ಕುಣಿಯುತ್ತ ಪ್ರಾಂಗಣ ಬಂದರೆ ಎಲ್ಲಿ ನೋಡಿದರೂ ‘ಯಲ್ಲಮ್ಮಾ ನಿನ್ ಹಾಲಕ್‌ ಉಧೋ, ಉಧೋ’ ಎಂಬ ಜಯ ಘೋಷ ಹಾಕುತ್ತ, ಬಂಢಾರ ಎರಚುತ್ತ, ಖುಷಿಯಿಂದ ರೇಣುಕಾದೇವಿ ದರ್ಶನ  ಪಡೆದು ಭಕ್ತಿಯ ಹರಕೆ ಸರ್ಮಪಿಸಿದರು.

ಸೂರ್ಯಾಸ್ತವಾಗುತ್ತಿದ್ದಂತೆ ಚಳಿ, ಬೆಳಗಿನ ಮಂಜು, ಮಧ್ಯಾಹ್ನದ ಸುಡುಬಿಸಿಲು ಲೆಕ್ಕಿಸದೇ ಭಕ್ತರು ಭಕ್ತಿಯ ಸಾಗರದಲ್ಲಿ ತೇಲಿದರು. ಯಲ್ಲಮ್ಮನ ಸ್ಮರಣೆಯಲ್ಲಿ ಎಲ್ಲವನ್ನು ಮರೆತ ಭಕ್ತರು, ಎಣ್ಣೆಹೊಂಡದಲ್ಲಿ ಪವಿತ್ರ ಸ್ನಾನ ಮಾಡಿದರು. ಕೆಲವರು ಹಸಿ ಬಟ್ಟೆಯಲ್ಲಿ ದೀಡ್‌ ನಮಸ್ಕಾರ ಹಾಕಿದರು.

ಮೀಸಲು ನೈವೇದ್ಯ: ಭಕ್ತರು ಇಡೀ ಗುಡ್ಡದ ವಿಶಾಲ ಪ್ರದೇಶದಲ್ಲಿ ಬಿಡಾರಹೂಡಿ ಮೀಸಲು ಅಡುಗೆಯಾದ ಕಡಬು, ಹೋಳಿಗೆ, ಕರಚಿಕಾಯಿ, ಸೇಂಡಗಿ, ಅನ್ನ, ಸಾಂಬಾರು ತಯಾರಿಸಿ ಶ್ರೀದೇವಿಗೆ ಹಡ್ಡಲಗಿ (ಮಡಿಲು) ತುಂಬಿದರು. ದೇವಿಯ ಅನುಯಾಯಿಗಳಾದ ಜೋಗಪ್ಪ, ಜೋಗಮ್ಮ, ಭಕ್ತರು ಪೂಜಿಸಿದರು.

ದರ್ಶನ ವ್ಯವಸ್ಥೆ: ಭಕ್ತರಿಗೆ ದೇವಿ ದರ್ಶನಕ್ಕೆ ಆಡಳಿತ ಮಂಡಳಿ ಸುರಕ್ಷಿತ ಸರದಿಯಲ್ಲಿ ಸಾಗುವಂತೆ ವ್ಯವಸ್ಥೆ ಮಾಡಿದೆ. ಇದರಿಂದ ಭಕ್ತರಿಗೆ ಗದ್ದಲವಾಗಲಿಲ್ಲ. ಸರದಿಸಾಲು ತುಂಬಾ ದೂರವಾಗಿದ್ದರಿಂದ ಗಂಟೆಗಟ್ಟಲೆ ಕಾಯುವುದು ಅನಿವಾರ್ಯವಾಯಿತು.

ನೀರಿನ ಕೊರತೆ: ಹುಣ್ಣಿಮೆ ದಿನವಾದ ಮಂಗಳವಾರ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದರಿಂದ ಭಕ್ತರು ಕೊಡಗಳು, ಡಬ್ಬಿಗಳನ್ನು ಸರದಿಯಲ್ಲಿಟ್ಟು ಗಂಟೆಗಟ್ಟಲೆ ಕಾದರು. ‘ನಿನ್ನೆಯಿಂದ ಹನಿ ನೀರಿಗಾಗಿ ಪೇಚಾಡುತ್ತಿದ್ದೇವೆ. ಇಲ್ಲಿ ಪಾಳಿ ಹಚ್ಚೇವಿ. ನಮಗು ನಮ್ಮ ದನಕರುಗಳಿಗೆ ಏನು ಮಾಡುವುದು. ಹಿಂಗಾದ್ರ್‌ ಮುಂದ ಹ್ಯಾಂಗ್‌’ ಎಂದು ಯಾದವಾಡದ ಹಣಮಂತ ಹುಣಶಿಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಏಕ ಸಂಚಾರ: ಭಕ್ತರ ವಾಹನಗಳು ವ್ಯವಸ್ಥಿತವಾಗಿ ಸಾಗಲು ಪೊಲೀಸರು ಏಕಮುಖ ರಸ್ತೆ ಸಂಚಾರ ವ್ಯವಸ್ಥೆ ಮಾಡಿದ್ದರು. ಸವದತ್ತಿ ಎಪಿಎಂಸಿ ಶಾಂತಿನಗರ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಹೋಗುವುದು, ಜೋಗುಳಭಾವಿ ಮಾರ್ಗದ ಕೆಳಗಿನ ರಸ್ತೆಯಿಂದ ಹೊರಬರುವ ಸೌಕರ್ಯ ಕಲ್ಪಿಸಲಾಗಿತ್ತು. ಇದರಿಂದ ಸುಗಮ ಸಂಚಾರಕ್ಕೆ ಒಂದೆಡೆ ಅನುಕೂಲವಾದರೆ ಇನ್ನೊಂದೆಡೆ ತೊಂದರೆ. ಒಂದೇ ರಸ್ತೆಯಿಂದ ಲಕ್ಷಾಂತರ ವಾಹನ ಹೋಗುವುದು ಕಷ್ಟವಾಯಿತು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಸೌಕರ್ಯ: ‘ಭಕ್ತರ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯಗಳ ಜತೆಗೆ ವಾಹನ ನಿಲುಗಡೆ, ವಸತಿ, ಬೆಳಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಆದರೆ ಅದು ಸಾಲಲಿಲ್ಲ. ಸೋಮವಾರ ರಾತ್ರಿ ಕೆಲ ಕಿಡಿಗೇಡಿಗಳು ಪೈಪ್‌ ವಾಲ್‌ ಬೇಕಾಬಿಟ್ಟಿ ತಿರುಗಿಸಿ ನೀರು ಸಾಕಾಗದಂತೆ ಮಾಡಿದರು. ಆದರೂ ಟ್ಯಾಂಕರ್‌ ಮೂಲಕ ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ತಿಳಿಸಿದರು. ‘ಒಟ್ಟು 100 ಜನರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಇಲ್ಲಿ ಸಂಗ್ರಹಿಸಿದ ಕಸಕಡ್ಡಿ ಗುಡ್ಡದ ಹೊರವಲಯದಲ್ಲಿ ಹಾಕುತ್ತಾರೆ’ ಎಂದರು.

ಹರಿಜಾತ್ರೆ: ಮಂಗಳವಾರ ಬನದ ಹುಣ್ಣಿಮೆ ಉತ್ಸವ ಮುಗಿದರೂ ಬಹುತೇಕ ಭಕ್ತರು ಶುಕ್ರವಾರ ಮತ್ತು ಮಂಗಳವಾರ ಆಚರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT