ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

Last Updated 3 ಜನವರಿ 2018, 9:35 IST
ಅಕ್ಷರ ಗಾತ್ರ

ದಾವಣಗೆರೆ: ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸೇವೆ (ಒಪಿಡಿ) ಸ್ಥಗಿತಗೊಳಿಸಿ ಮಂಗಳವಾರ ನಡೆಸಿದ ವೈದ್ಯರ ಮುಷ್ಕರಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂ, ಪ್ರಯೋಗಾಲಯಗಳು ಹೊರ ರೋಗಿಗಳ ಸೇವೆ ಬಂದ್‌ ಮಾಡಿದ್ದವು. ಹಲವು ಆಸ್ಪತ್ರೆಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ‘ಹೊರ ರೋಗಿಗಳ ಸೇವೆ ಲಭ್ಯ ಇಲ್ಲ’ ಎಂಬ ಫಲಕ ನೇತು ಹಾಕಲಾಗಿತ್ತು. ಆದರೆ, ಶಸ್ತ್ರಚಿಕಿತ್ಸೆ, ಹೆರಿಗೆ ಒಳಗೊಂಡಂತೆ ತುರ್ತು ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದವು.

ಸಂಜೆ 6ರ ನಂತರ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ತಾಲ್ಲೂಕು ಕೇಂದ್ರಗಳಿಂದ ಚಿಕಿತ್ಸೆಗೆ ಬಂದ ರೋಗಿಗಳು, ವೈದ್ಯರು ಸಿಗದೆ ತೊಂದರೆ ಅನುಭವಿಸಿದರು. ಕೆಲವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಬಾಪೂಜಿ ಆಸ್ಪತ್ರೆ, ಎಸ್‌.ಎಸ್.ಹೈಟೆಕ್‌ ಆಸ್ಪತ್ರೆಗಳ ಜತೆಗೆ ಕೆಲವು ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

‘ಮುಷ್ಕರದ ಬಗ್ಗೆ ಮುಂಚಿತವಾಗಿ ಮಾಹಿತಿ ಇಲ್ಲದಿರುವುದರಿಂದ ನಗರದಲ್ಲಿ ಶೇ 80ರಷ್ಟು ಆಸ್ಪತ್ರೆಗಳು ಮಾತ್ರ ಹೊರ ರೋಗಿಗಳ ಸೇವೆ (ಒಪಿಡಿ) ಸ್ಥಗಿತಗೊಳಿಸಿದ್ದವು. ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ಖಾಸಗಿ ಹಾಗೂ ಸರ್ಕಾರಿ ವೈದ್ಯರು ಎನ್ನದೆ ಎಲ್ಲರಿಗೂ ತೊಂದರೆಯಾಗಲಿದೆ. ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಇಂತಹ ಕ್ರಮಗಳನ್ನು ಒಕ್ಕೊರಲಿನಿಂದ ವಿರೋಧಿಸಬೇಕು’ ಎಂದು ಭಾರತೀಯ ವೈದ್ಯಕೀಯ ಸಂಘದ ದಾವಣಗೆರೆ ಘಟಕದ ಅಧ್ಯಕ್ಷ ಗಣೇಶ ಇಡುಗುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮನವಿ ಸಲ್ಲಿಕೆ: ವೈದ್ಯರ ಮುಷ್ಕರ ಬೆಂಬಲಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಇ)ದ ನೇತೃತ್ವದಲ್ಲಿ ಪ್ರಧಾನ ಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಭಾರತೀಯ ವೈದ್ಯಕೀಯ ಪರಿಷತ್ ಅನ್ನೇ ಬಲಪಡಿಸಬೇಕು. ಯಾವುದೇ ಕಾರಣಕ್ಕೂ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆಗೆ ಮುಂದಾಗಬಾರದು ಎಂದು ಐಎಂಇ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭ ಭಾರತೀಯ ವೈದ್ಯಕೀಯ ಸಂಘದ ದಾವಣಗೆರೆ ಘಟಕದ ಪದಾಧಿಕಾರಿಗಳಾದ ಡಾ.ಪ್ರವೀಣ್‌ ಎಂ.ಅನ್ವೇಕರ್, ದಿನೇಶ್ ಜಾಧವ್, ಡಾ.ಎಸ್‌.ಎಂ.ಬ್ಯಾಡಗಿ, ಡಾ.ಸುಬ್ಬರಾವ್, ಡಾ.ಕೆ.ಪಿ.ಶಿವಕುಮಾರ್, ಡಾ.ಮಾರುತಿ ಪ್ರಸಾದ್, ಡಾ.ಸುನೀಲ್‌ ಬ್ಯಾಡಗಿ, ನರ್ಸಿಂಗ್‌ ಹೋಂ ಅಸೋಸಿಯೇಷನ್‌ ಅಧ್ಯಕ್ಷ ಡಾ.ಎ.ಎಂ.ಶಿವಕುಮಾರ್ ಅವರೂ ಇದ್ದರು.

ಬಸವಾಪಟ್ಟಣ ವರದಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ಕಾನೂನನ್ನು ವಿರೋಧಿಸಿ ಮಂಗಳವಾರ ಖಾಸಗಿ ಕ್ಲಿನಿಕ್‌ಗಳು ಬಂದ್‌ ಆಚರಿಸಿದವು. ಇಲ್ಲಿನ ಕುಸಗೂರ್‌ ಕ್ಲಿನಿಕ್‌ನ ವೈದ್ಯ ಡಾ.ಬಸವನಗೌಡ ಕುಸಗೂರ್‌ ಮಾತನಾಡಿ, ‘ಸರ್ಕಾರ ವೈದ್ಯರ ಸೇವೆಯನ್ನು ನಿಯಂತ್ರಿಸಲು ವಿವಿಧ ಕಾನೂನುಗಳನ್ನು ಹೇರುವುದರಿಂದ ತೊಂದರೆಯಾಗುತ್ತಿದೆ. ಸರ್ಕಾರದ ನಿಲುವಿಗೆ ವಿರೋಧವಿದೆ. ಸಂಘದ ಕರೆಯಂತೆ ಸೇವೆಯನ್ನು ಬಂದ್‌ ಮಾಡಿದ್ದೇವೆ ಎಂದು ಹೇಳಿದರು.

ಡಾ.ವಿಜಯಲಕ್ಷ್ಮಿ ಕುಸಗೂರ್‌ ಮಾತನಾಡಿ, ‘ವೈದ್ಯರು ಸೇವೆಯನ್ನು ನೀಡಲು ಯವುದೇ ಅಡ್ಡಿಗಳು ಇರಬಾರದು. ಸೇವೆಗೆ ವಿರುದ್ಧವಾಗಿ ಸರ್ಕಾರ ಕಾನೂನು ರೂಪಿಸುತ್ತಿರುವುದು ವಿಷಾದನೀಯ’ ಎಂದರು.

ಹರಪನಹಳ್ಳಿ: ಮುಷ್ಕರಕ್ಕೆ ಬೆಂಬಲ
ಹರಪನಹಳ್ಳಿ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಗಳು ಹೊರರೋಗಿ ಚಿಕಿತ್ಸಾ ವಿಭಾಗಬಂದ್ ಮಾಡುವ ಮೂಲಕ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದವು. ಮಹೇಶ ನರ್ಸಿಂಗ್ ಹೋಂ, ಡಾ.ಹರ್ಷ ನರ್ಸಿಂಗ್ ಹೋಂ, ಡಾ.ಶೇಖನಫ್ತಾರ್ ಕ್ಲಿನಿಕ್, ಬಾಲಾಜಿ ಕ್ಲಿನಿಕ್ ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ಸಿಗಲಿಲ್ಲ. ಪರಿಣಾಮ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುಸು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಕಂಡು ಬಂದರು.

ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ರೋಗಗಳು ಹತೋಟಿಗೆ ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಇರಲಿಲ್ಲ. ಆದರೆ, ಎಂದಿಗಿಂತ ರೋಗಿಗಳ ಸಂಖ್ಯೆ ಮಂಗಳವಾರ ಹೆಚ್ಚಾಗಿತ್ತು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶಂಕರನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT