ಬುಧವಾರ, ಜೂಲೈ 8, 2020
23 °C

ಸಮಸ್ಯೆ ಅನಾವರಣಕ್ಕೆ ವೇದಿಕೆಯಾದ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆ ಅನಾವರಣಕ್ಕೆ ವೇದಿಕೆಯಾದ ಸಭೆ

ಗದಗ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿವೆಯೇ, ಪರಿಣಾಮಕಾರಿಯಾಗಿ ಅನುಷ್ಠಾನ ಆಗಿವೆಯೇ ಎನ್ನುವುದನ್ನು ಪರಿಶೀಲಿಸಲು ಮಂಗಳವಾರ ಜಿಲ್ಲೆಯ ಐದೂ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ‘ಜನಸ್ಪಂದನ’ ಸಭೆ ನಡೆಯಿತು. ಮುಂಡರಗಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮನೋಜ್ ಜೈನ್‌, ಶಿರಹಟ್ಟಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಂಜುನಾಥ ಚವ್ಹಾಣ ಭಾಗವಹಿಸಿದ್ದರು. ಗದಗ, ರೋಣ, ನರಗುಂದದಲ್ಲಿ ನಡೆದ ಸಭೆಯ ಉಸ್ತುವಾರಿಯನ್ನು ಜಿಲ್ಲಾಮಟ್ಟದ ಅಧಿಕಾರಿಗಳು ವಹಿಸಿದ್ದರು.

ಸಭೆಯಿಂದ ಹೊರನಡೆದ ರೈತರು

ಮುಂಡರಗಿ: ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಜನಸ್ಪಂದನಾ ಸಭೆಯು ಕೆಲಕಾಲ ಗೊಂದಲದ ಗೂಡಾಗಿ ಬದಲಾಯಿತು. ಜಿಲ್ಲಾಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಕೆಲವು ರೈತ ಮುಖಂಡರು ಸಭೆಯಿಂದ ಹೊರ ನಡೆಯಲು ಯತ್ನಿಸಿದ ಘಟನೆ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆಯೆ ರೈತ ಮುಖಂಡ ಸುರೇಶ ಹಲವಾಗಲಿ ಮಾತನಾಡಿ, ‘ಕಲ್ಬುರ್ಗಿ ವಿಭಾಗದಲ್ಲಿ ರೈತರ ಪಂಪಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿಯಮಿತವಾಗಿ 7 ಗಂಟೆ ತ್ರೀಪೇಸ್ ವಿದ್ಯುತ್ ಪೂರೈಸಲಾಗುತ್ತದೆ. ಅದೇ ರೀತಿ ಈ ಭಾಗದ ರೈತರಿಗೂ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕು’ ಎಂದು ಮನವಿ ಮಾಡಿದರು.

‘ವಿದ್ಯುತ್ ಪೂರೈಕೆ ಹಾಗೂ ನಿರ್ವಹಣೆಯಲ್ಲಿ ಕಲ್ಬುರ್ಗಿ ವಿಭಾಗ ತುಂಬಾ ಹಿಂದುಳಿದಿದ್ದು, ಅದಕ್ಕಿಂತಲೂ ಹೆಸ್ಕಾಂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಜಿಲ್ಲಾಧಿಕಾರಿ ಸಮಜಾಯಿಸಿ ನೀಡಿದರು. ಆಗ ಮಧ್ಯ ಪ್ರವೇಶಿಸಿದ ರೈತ ಮುಖಂಡ ಈಶ್ವರಪ್ಪ ಹಂಚಿನಾಳ, ‘ಅಂಡಮಾನ್ ನಿಕೋಬಾರ್‌ನಲ್ಲಿ ವಿದ್ಯುತ್ ಉತ್ಪಾದನೆಯೇ ಇಲ್ಲ. ಹಾಗೆಂದು ಅಲ್ಲಿ ವಿದ್ಯುತ್‌ ಪೂರೈಕೆ ಇಲ್ಲವೇ, ನೀವು ಎಲ್ಲಿಯದೋ ಉದಾಹರಣೆ ಹೇಳಿದರೆ ನಾವು ಕೈಕಟ್ಟಿಕೊಂಡು ಕೂರಲು ಬರುತ್ತದೆಯೆ?.’ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು.

ಇದರಿಂದ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ‘ಮಧ್ಯದಲ್ಲಿ ಮಾತನಾಡಲು ನೀವು ಅವರ ಪರ ವಕೀಲರೇ?’ ಎಂದು ಹಂಚಿನಾಳ ಅವರನ್ನು ಖಾರವಾಗಿ ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಮಾತಿನಿಂದ ಆಕ್ರೋಶಗೊಂಡ ರೈತ ಮುಖಂಡರು, ಸಭೆಯನ್ನು ಬಹಿಷ್ಕರಿಸಿ ಹೊರಡಲು ಅನುವಾದರು. ‘ರೈತರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡದಿದ್ದರೆ, ಜಿಲ್ಲಾಡಳಿತ ಈ ಸಭೆಯನ್ನು ಏಕೆ ನಡೆಸಬೇಕು, ರೈತರು ಯಾಕೆ ಇದರಲ್ಲಿ ಭಾಗವಹಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಶಾಸಕ ರಾಮಕೃಷ್ಣ ದೊಡ್ಡಮನಿ, ಸಿ.ಪಿ.ಐ ಮಂಜುನಾಥ ನಡುವಿನಮನಿ ಅವರು ರೈತರನ್ನು ಸಮಾಧಾನ ಪಡಿಸಿದರು. ಬಳಿಕ ಸಭೆ ಮುಂದುವರಿಯಿತು.

ಕೆ.ಎ.ದೇಸಾಯಿ ಸೇರಿ ತಾಲ್ಲೂಕಿನ ಬಹುತೇಕ ರೈತರು ಬೆಳೆವಿಮೆ ಪರಿಹಾರ ವಿತರಿಸದಿರುವ ಕುರಿತು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ‘ಜಿಲ್ಲೆಯಾದ್ಯಂತ ಒಟ್ಟು 1.50 ಲಕ್ಷ ರೈತರಿಗೆ ಈಗಾಗಲೇ ₹ 132ಕೋಟಿ ಬೆಳೆಹಾನಿ ಪರಿಹಾರ ವಿತರಿಸಲಾಗಿದೆ. ಆಧಾರ್ ಸಂಖ್ಯೆ ಜೋಡಣೆಯಾದ ಶೇ 20ರಷ್ಟು ರೈತರಿಗೆ ಪರಿಹಾರ ವಿತರಣೆ ವಿಳಂಬವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಬೆಳೆ ಕಟಾವು ಪ್ರಯೋಗ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ಪ್ರತಿ ಹೆಕ್ಟೇರ್ ಒಣ ಭೂಮಿಗೆ ₹ 6,800 ಹಾಗೂ ನೀರಾವರಿ ಜಮೀನಿಗೆ ₹ 13,500 ಪರಿಹಾರ ನಿಗದಿಪಡಿಸಲಾಗಿದೆ’ ಎಂದರು.

ರಾಜ್ಯಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿದರು. ‘ರೈತರು ಕೊರೆಯಿಸಿರುವ ಕೊಳವೆ ಬಾವಿಗಳಿಗೆ ಹಕ್ಕುಪತ್ರ ವಿತರಿಸಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಈಶ್ವರಪ್ಪ ಹಂಚಿನಾಳ ಪಶು ವೈದ್ಯಾಧಿಕಾರಿಗಳ ಕೊರತೆ ಕುರಿತು ಸಭೆಯ ಗಮನ ಸೆಳೆದರು. ತಾಲ್ಲೂಕಿನಲ್ಲಿ ತೊಗರಿ ಹಾಗೂ ಹತ್ತಿ ಬೆಳೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ವೀರಣ್ಣ ಘಟ್ಟಿ ಮನವಿ ಮಾಡಿದರು.

ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆ ಕುರಿತು ರೈತರು ಕೇಳಿದ ಹಲವು ಪ್ರಶ್ನೆಗಳಿಗೆ ಶಾಸಕ ರಾಮಕೃಷ್ಣ ದೊಡ್ಡಮನಿ ಉತ್ತರ ನೀಡಿದರು. ನೋಡಲ್ ಅಧಿಕಾರಿ ಹೊಂಬಳಮಠ, ತಹಶೀಲ್ದಾರ್ ಭ್ರಮರಾಂಬಾ ಗುಬ್ಬಿಶಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ, ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಮುಂಡಗಿ ಇದ್ದರು.

‘ನೀರು, ರಸ್ತೆ, ಉದ್ಯೋಗ ಖಾತ್ರಿ ಕುರಿತು ದೂರು’

ರೋಣ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ಕುಡಿಯುವ ನೀರು, ರಸ್ತೆ, ಉದ್ಯೋಗ ಖಾತ್ರಿ ಯೋಜನೆ, ಸೇರಿ ಹಲವು ಸಮಸ್ಯೆ ಬಗೆಹರಿಸುವಂತೆ ಮಂಗಳವಾರ ಇಲ್ಲಿ ನಡೆದ ಜನಸ್ಪಂದನೆ ಸಭೆಯಲ್ಲಿ ಉಪವಿಭಾಗಾಧಿಕಾರಿ ಮಂಜುನಾಥ ಅವರಿಗೆ ಮನವಿ ಮಾಡಿದರು.

ಸವಡಿ ಗ್ರಾಮಸ್ಥರು ಮನವಿ ಸಲ್ಲಿಸಿ, ‘ಬೆಳವಣಕಿ ಗ್ರಾಮದಲ್ಲಿ ನಿವೇಶನಗಳಿಗಾಗಿ ಜಾಗ ನಿಗದಿಪಡಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿ ಯಾವುದೇ ರೀತಿಯಾದ ದಾಖಲಾತಿ ನೀಡಿಲ್ಲ’ ಎಂದು ದೂರಿದರು.

ವಕೀಲ ಎಂ.ಎಸ್.ಹಡಪದ ಮಾತನಾಡಿ, ‘ಗಜೇಂದ್ರಗಡದಲ್ಲಿ 22 ಮತ್ತು 23ನೇ ವಾರ್ಡನಲ್ಲಿ 1976ರಲ್ಲಿಯೇ ಮತ್ತಿಕಟ್ಟಿ ಅವರು ಶಾಸಕರಿದ್ದಾಗ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ನೀಡಿದ್ದಾರೆ. ಆದರೆ, ದಾಖಲೆಗಳು ಇಲ್ಲದ ಕಾರಣ ಆ ಜಾಗವು ಕೊಳಗೇರಿಯಾಗಿ ಬದಲಾಗಿದೆ’ ಎಂದರು. ‘ಈ ಕುರಿತು ಲಿಖಿತ ಅರ್ಜಿ ನೀಡುವಂತೆ ಉಪವಿಭಾಗ ಅಧಿಕಾರಿ ಸೂಚಿಸಿದರು.

ಬೆಳವಣಕಿ ಗ್ರಾಮದ ರೈತ ಬಿ.ಬಿ.ಚರಡಿ ಅವರು ಬೆಳೆಹಾನಿ ಪರಿಹಾರ ಇದುವರೆಗೂ ಬಂದಿಲ್ಲ ಎಂದು ದೂರಿದರು. ತಹಶೀಲ್ದಾರ್ ಶಿವಲಿಂಗ ಪ್ರಭುವಾಲಿ, ತಾಲ್ಲೂಕ ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿ ಎಂ.ವಿ.ಚಳಗೇರಿ, ಅಜಿತ್ ಇದ್ದರು.

‘ಬ್ಯಾಂಕ್ ಸಿಬ್ಬಂದಿ, ಮಧ್ಯವರ್ತಿಗಳ ಕಾಟ’

ಶಿರಹಟ್ಟಿ: ‘ಪಟ್ಟಣದಲ್ಲಿ ಕಾರ್ಯರ್ನಿವಹಿಸುತ್ತಿರುವ ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಗ್ರಾಮೀಣ ಜನರಿಗೆ ಸಾಲ ಸೌಲಭ್ಯ ನೀಡುತ್ತಿಲ್ಲ. ಸರ್ಕಾರಿ ಯೋಜನೆಗಳನ್ನು ಜನರಿಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ವಿಚಾರಿಸಿದರೆ ಸಬೂಬು ಹೇಳಿ ಪೀಡಿಸುತ್ತಾರೆ’ ಎಂದು ಮಂಗಳವಾರ ಇಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಛಬ್ಬಿ ಗ್ರಾಮದ ನಿವಾಸಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಜಾನು ಲಮಾಣಿ ಆರೋಪಿಸಿದರು.

‘ಬ್ಯಾಂಕುಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ನಿಯಂತ್ರಣ ಇಲ್ಲದಂತಾಗಿದೆ. ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಬೇಕು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ಮಂಜುನಾಥ ಚವ್ಹಾಣ ಅವರನ್ನು ಒತ್ತಾಯಿಸಿದರು.

‘ತಾಲ್ಲೂಕು ವಿಂಗಡಣೆಯಲ್ಲಿ ನಮಗೆ ಅಧಿಕಾರಿಗಳಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ. ರಾಜಕೀಯ ವ್ಯಕ್ತಿಗಳಿಂದ ಅಸಾಧ್ಯದ ಮಾತು. ಆ ಭಾಗದ ರಾಜಕೀಯ ಪ್ರಭಾವದಿಂದ ಶಿರಹಟ್ಟಿ ತಾಲ್ಲೂಕು ನಿರಂತರವಾಗಿ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿಯುತ್ತ ಬಂದಿದೆ. ಜನಸಂಖ್ಯೆ ಹಾಗೂ ಭೌಗೋಳಿಕ ಅಂಶದ ಆಧಾರದ ಮೇಲೆ ವಿಂಗಡಣೆ ಮಾಡಬೇಕು’ ಎಂದು ಕುಂದುಕೊರತೆ ಹೋರಾಟ ಸಮಿತಿ ಅಧ್ಯಕ್ಷ ಸಿದ್ರಾಮಯ್ಯ ಹಾವೇರಿಮಠ ಹಾಗೂ ಉಪಾಧ್ಯಕ್ಷ ನಜೀರ್ ಡಂಬಳ ಒತ್ತಾಯಿಸಿದರು.

‘ಮಾಡಳ್ಳಿ, ಯಳವತ್ತಿ ಹಾಗೂ ಯತ್ತಿನಹಳ್ಳಿ ಗ್ರಾಮಸ್ಥರು ಶಿರಹಟ್ಟಿ ತಾಲ್ಲೂಕಿಗೆ ಸೇರಲು ಒಲವು ವ್ಯಕ್ತಪಡಿಸಿರುವುದನ್ನು ಅಧಿಕಾರಿಗಳು ಗಮನಿಸಬೇಕು’ ಎಂದರು. ಪಟ್ಟಣದಲ್ಲಿರುವ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆದಷ್ಟು ಬೇಗ ದುರಸ್ತಿ ಮಾಡಿಸಬೇಕು’ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಸಿ.ಕೆ. ಮುಳಗುಂದ ಹಾಗೂ ಅಕ್ಬರ ಯಾದಗಿರಿ ಮನವಿ ಸಲ್ಲಿಸಿದರು.

‘ಘಟಕ ನಿರ್ವಹಣೆ ಮಾಡುತ್ತಿದ್ದವರಿಗೆ ನೋಟಿಸ್‌ ನೀಡಲಾಗಿದೆ. ಹರಿಪುರದಲ್ಲಿ ಶೀಘ್ರವೇ ಘಟಕ ಕಾರ್ಯಾರಂಭ ಮಾಡಲಿದೆ’ ಎಂದು ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಸಭೆಗೆ ಮಾಹಿತಿ ನೀಡಿದರು. ತಹಶೀಲ್ದಾರ್ ಎ.ಡಿ.ಅಮರಾವದಗಿ, ತಾಲ್ಲೂಕು ಪಂಚಾಯ್ತಿ ಇ.ಒ ಆರ್.ವೈ.ಗುರಿಕಾರ, ಮಾಜಿ ಲೋಕಸಭಾ ಸದಸ್ಯ ಐ.ಜಿ.ಸನದಿ ಇದ್ದರು.

ನೀರು, ರಸ್ತೆ, ನರೇಗಾ ಕುರಿತು ದೂರು

ರೋಣ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ಕುಡಿಯುವ ನೀರು, ರಸ್ತೆ, ಉದ್ಯೋಗ ಖಾತ್ರಿ ಯೋಜನೆ, ಸೇರಿ ಹಲವು ಸಮಸ್ಯೆ ಬಗೆಹರಿಸುವಂತೆ ಮಂಗಳವಾರ ಇಲ್ಲಿ ನಡೆದ ಜನಸ್ಪಂದನೆ ಸಭೆಯಲ್ಲಿ ಉಪವಿಭಾಗಾಧಿಕಾರಿಮಂಜುನಾಥ ಅವರಿಗೆ ಮನವಿ ಮಾಡಿದರು.

ಸವಡಿ ಗ್ರಾಮಸ್ಥರು ಮನವಿ ಸಲ್ಲಿಸಿ, ‘ಬೆಳವಣಕಿ ಗ್ರಾಮದಲ್ಲಿ ನಿವೇಶನಗಳಿಗಾಗಿ ಜಾಗ ನಿಗದಿಪಡಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿ ಯಾವುದೇ ರೀತಿಯಾದ ದಾಖಲಾತಿ ನೀಡಿಲ್ಲ’ ಎಂದು ದೂರಿದರು.

ವಕೀಲ ಎಂ.ಎಸ್.ಹಡಪದ ಮಾತನಾಡಿ, ‘ಗಜೇಂದ್ರಗಡದಲ್ಲಿ 22 ಮತ್ತು 23ನೇ ವಾರ್ಡನಲ್ಲಿ 1976ರಲ್ಲಿಯೇ ಮತ್ತಿಕಟ್ಟಿ ಅವರು ಶಾಸಕರಿದ್ದಾಗ ಫಲಾ

ನುಭವಿಗಳಿಗೆ ನಿವೇಶನದ ಹಕ್ಕುಪತ್ರ ನೀಡಿದ್ದಾರೆ. ಆದರೆ, ದಾಖಲೆಗಳು ಇಲ್ಲದ ಕಾರಣ ಆ ಜಾಗವು ಕೊಳಗೇರಿಯಾಗಿ ಬದಲಾಗಿದೆ’ ಎಂದರು. ‘ಈ ಕುರಿತು ಲಿಖಿತ ಅರ್ಜಿ ನೀಡುವಂತೆ ಉಪವಿಭಾಗ ಅಧಿಕಾರಿ ಸೂಚಿಸಿದರು.

ಬೆಳವಣಕಿ ಗ್ರಾಮದ ರೈತ ಬಿ.ಬಿ.ಚರಡಿಮಾತನಾಡಿ, ‘ಬೆಳೆಹಾನಿ ಪರಿಹಾರ ಇದುವರೆಗೂ ಬಂದಿಲ್ಲ’ ಎಂದರು. ತಹಶೀಲ್ದಾರ್ ಶಿವಲಿಂಗ ಪ್ರಭುವಾಲಿ, ತಾಲ್ಲೂಕ ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿ ಎಂ.ವಿ.ಚಳಗೇರಿ, ಅಜಿತ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.