ಮಂಗಳವಾರ, ಆಗಸ್ಟ್ 4, 2020
22 °C
ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಆರೋಪ

ಜಿಲ್ಲೆಯಲ್ಲಿ ಅತಿಕ್ರಮಣದಾರರ 41ಸಾವಿರ ಅರ್ಜಿ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ಅತಿಕ್ರಮಣದಾರರ 41ಸಾವಿರ ಅರ್ಜಿ ತಿರಸ್ಕೃತ

ಶಿರಸಿ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕುಪತ್ರ ಪಡೆಯಲು ಬಯಸಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಈವರೆಗೆ 41,169 ಅರ್ಜಿಗಳು ತಿರಸ್ಕೃತಗೊಂಡಿವೆ. ಇನ್ನು ಒಂದು ತಿಂಗಳಲ್ಲಿ ಕಾಯ್ದೆ ಅನುಷ್ಠಾನ ಚುರುಕುಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಜನಪ್ರತಿನಿಧಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಒಟ್ಟು 85,819 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಬುಡಕಟ್ಟು ಜನಾಂಗದ 3569, ಸಮೂಹ ಉದ್ದೇಶದ 3388, ಪಾರಂಪರಿಕ ಅರಣ್ಯವಾಸಿಗಳ 78,862 ಅರ್ಜಿಗಳು ಸೇರಿವೆ. ನಗರ ಪ್ರದೇಶದ 11,202 ಅರ್ಜಿಗಳು ಸಹ ಇವೆ. ತಿರಸ್ಕೃತಗೊಂಡಿರುವ ಅರ್ಜಿಗಳಲ್ಲಿ 1350 ಬುಡಕಟ್ಟು ಜನಾಂಗಕ್ಕೆ ಸೇರಿದರೆ, 2262 ಸಮೂಹದ ಅರ್ಜಿಗಳು, ಇನ್ನುಳಿದ 37,558 ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಸೇರಿದವು ಆಗಿವೆ’ ಎಂದರು.

ಅರಣ್ಯ ಹಕ್ಕು ಕಾಯ್ದೆ ಜಾರಿಗೊಂಡು ದಶಕ ಕಳೆದರೂ ಇಲ್ಲಿಯವರೆಗೆ ಜಿಲ್ಲೆಯಲ್ಲಿ 2852 ಜನರಿಗೆ ಹಕ್ಕುಪತ್ರ ದೊರೆತಿದೆ. ಒಟ್ಟು ಪ್ರಮಾಣದಲ್ಲಿ ಶೇ 3.32 ಮಾತ್ರ ಹಕ್ಕುಪತ್ರ ಲಭಿಸಿದೆ. ಅವುಗಳಲ್ಲಿ 1331 ಪರಿಶಿಷ್ಟ ಪಂಗಡ, 1127 ಸಮೂಹ ಹಾಗೂ 384 ಪಾರಂಪರಿಕ ಅರಣ್ಯವಾಸಿಗಳು ಒಳಗೊಂಡಿದ್ದಾರೆ. ಅರಣ್ಯವಾಸಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಡಳಿತಕ್ಕೆ ಒಂದು ತಿಂಗಳು ಕಾಲಾವಕಾಶ ನೀಡಲಾಗುವುದು. ಈ ಅವಧಿಯ ಒಳಗೆ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಜಿಲ್ಲೆಯ ಎಲ್ಲೆಡೆ ಹೋರಾಟ ನಡೆಸಲಾಗುವುದು. ಮುಂಡಗೋಡ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ಅರ್ಜಿ ವಿಲೇವಾರಿ ಪ್ರಮಾಣ ಮಂದಗತಿಯಲ್ಲಿದೆ ಎಂದು ಆರೋಪಿಸಿದರು.

ತಿರಸ್ಕೃತಗೊಂಡಿರುವ ಅರ್ಜಿದಾರರಿಗೆ ಮೇಲ್ಮನವಿ ಸಲ್ಲಿಸಲು ಸಹಕರಿಸುವ ಕಾರಣ ನೀಡಿ ಕೆಲವು ಸಂಘಟನೆಗಳು ಅತಿಕ್ರಮಣದಾರರಿಂದ ಹಣ ವಸೂಲು ಮಾಡುತ್ತಿರುವುದು ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ’ಈ ವಿಷಯ ನಮ್ಮ ಅರಿವಿಗೆ ಬಂದಿಲ್ಲ. ನಾವು ಸಾರ್ವಜನಿಕವಾಗಿ ಯಾವುದೇ ಹಣ ಪಡೆದಿಲ್ಲ. ಮೇಲ್ಮನವಿ ಸಲ್ಲಿಸಲು ಅತಿಕ್ರಮಣದಾರರಿಗೆ ಉಚಿತವಾಗಿ ನೆರವು ನೀಡಿದ್ದೇವೆ’ ಎಂದರು. ವೆಂಕಟೇಶ ಬೈಂದೂರು, ತಿಮ್ಮಪ್ಪ ನಾಯ್ಕ ಇದ್ದರು.

ತಾಲ್ಲೂಕು – ತಿರಸ್ಕೃತಗೊಂಡಿರುವ ಅರ್ಜಿ ಸಂಖ್ಯೆ

ಭಟ್ಕಳ – 6887

ಶಿರಸಿ – 5673

ಹೊನ್ನಾವರ – 5617

ಕುಮಟಾ – 5063

ಸಿದ್ದಾಪುರ – 3767

ಯಲ್ಲಾಪುರ – 2976

ಅಂಕೋಲಾ – 2889

ಜೊಯಿಡಾ – 2516

ಕಾರವಾರ – 2311

ಹಳಿಯಾಳ – 2199

ಮುಂಡಗೋಡ – 1281

*

ರಾಜಕೀಯ ಒತ್ತಡದಿಂದಾಗಿ ಮುಂಡಗೋಡ ಮತ್ತು ಯಲ್ಲಾಪುರ ತಾಲ್ಲೂಕುಗಳಲ್ಲಿ ತಿರಸ್ಕೃತಗೊಂಡಿರುವ ಅರ್ಜಿಗಳು ವಿಲೇವಾರಿ ಆಗದಿರುವ ಅನುಮಾನ ಮೂಡಿದೆ.

–ಎ.ರವೀಂದ್ರ ನಾಯ್ಕ, ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.