ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಹಕಾರಿ ಸಂಘ ಬಲವರ್ಧನೆಗೆ ಕ್ರಮ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಹೇಳಿಕೆ
Last Updated 4 ಜನವರಿ 2018, 7:05 IST
ಅಕ್ಷರ ಗಾತ್ರ

ಶಿರಸಿ: ವಿಶೇಷ ತರಬೇತಿ ನೀಡುವ ಮೂಲಕ ರಾಜ್ಯದಲ್ಲಿರುವ ಮಹಿಳಾ ಸಹಕಾರಿ ಸಂಘಗಳ ಬಲವರ್ಧನೆಗೆ ಪ್ರಯತ್ನಿಸಲಾಗುತ್ತಿದೆ ಜೊತೆಗೆ, ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಮಹಿಳೆಯರನ್ನು ಕರೆತರುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಮಹಿಳಾ ಸಹಕಾರ ಮಹಾಮಂಡಳ, ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಜಂಟಿ ಆಶ್ರಯದಲ್ಲಿ ಬುಧವಾರ ಇಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಆಯ್ದ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ಮಾಡುವವರಲ್ಲಿ ನಿಷ್ಠುರತೆ ಬೇಕು. ಸಾಲ ನೀಡುವಾಗಿನ ಧಾರಾಳತೆ ವಸೂಲಿ ಮಾಡುವಾಗ ಇರದೇ, ನಿಷ್ಠುರತೆ ಬೆಳೆಸಿಕೊಂಡು ಸಾಧನೆ ಮಾಡಬೇಕು. ಆಗ ಸಹಕಾರಿ ಸಂಘಗಳ ಜೊತೆಗೆ ಸಹಕಾರಿ ಕ್ಷೇತ್ರವೂ ಬೆಳೆಯುತ್ತದೆ ಎಂದರು.

30 ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಮಹಾಮಂಡಳವು ಎಲ್ಲ ವಿಭಾಗಗಳ ಪುನಶ್ಚೇತನಕ್ಕೆ ಪಣತೊಟ್ಟಿದೆ. ಮಹಿಳೆಯರನ್ನು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸುವ ಉದ್ದೇಶದಿಂದ ಸ್ವ ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ದೇಶದ ಆರ್ಥಿಕ ಭದ್ರಬುನಾದಿ ಸಹಕಾರ ವ್ಯವಸ್ಥೆಯಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರು.

ರಾಜ್ಯದ ಎಂಟು ತರಬೇತಿ ಕೇಂದ್ರಗಳಲ್ಲಿ ಸಹಕಾರ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ವರ್ಷ 1000 ವಿದ್ಯಾರ್ಥಿಗಳು ಡಿಪ್ಲೊಮಾ ಕೋರ್ಸ್ ಮುಗಿಸಿ ಹೊರಬರುತ್ತಿದ್ದಾರೆ. ಮಹಾಮಂಡಳ ಹೊರ ತರುವ ಪತ್ರಿಕೆಗೆ 13ಸಾವಿರ ಪ್ರಸರಣ ಹೊಂದಿದೆ. ಇದನ್ನು 25ಸಾವಿರಕ್ಕೆ ಹೆಚ್ಚಿಸುವ ಗುರಿ ಇದೆ ಎಂದು ತಿಳಿಸಿದರು.

ಟಿ.ಎಸ್.ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿ ಕ್ಷೇತ್ರಕ್ಕೆ ಮಹಿಳೆಯರು ಬಂದರೆ ಕ್ಷೇತ್ರದ ಏಳ್ಗೆ ಸಾಧ್ಯ. ಸ್ವ ಸಹಾಯ ಸಂಘದಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ಸಹಕಾರಿ ಕ್ಷೇತ್ರದಲ್ಲೂ ಕಾಣಬೇಕು. ಶೋಷಣೆರಹಿತ ಸೇವೆಗೆ ಸಹಕಾರಿ ಕ್ಷೇತ್ರವನ್ನು ಬಳಸಿಕೊಳ್ಳಬೇಕು ಎಂದರು.

ಮಹಾಮಂಡಳದ ನಿರ್ದೇಶಕರಾದ ಶಿವನಗೌಡ ಬಿರಾದಾರ, ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕ ಜೆ.ಎಸ್.ಜಯಪ್ರಕಾಶ ಇದ್ದರು. ಸಹಕಾರಿ ಯೂನಿಯನ್ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣುನಾರಾಯಣ ಭಟ್ಟ ಸ್ವಾಗತಿಸಿದರು. ಹಾಲಪ್ಪ ಕೋಡಿಹಳ್ಳಿ ನಿರೂಪಿಸಿದರು. ಸಮನ್ವಯಾಧಿಕಾರಿ ವೀಣಾ ನಾಗೇಶ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಮಾನವ ಸಂಪನ್ಮೂಲ ಅಭಿವೃದ್ಧಿ ವ್ಯಕ್ತಿತ್ವ ವಿಕಸನದ ಕುರಿತು ಸಿದ್ದುಯಾಪಲ್ ಪರವಿ, ಮಹಿಳಾ ಸಬಲೀಕರಣ ಮತ್ತು ಸಹಕಾರದ ಕುರಿತು ಸಾಧನಾ ಪೋಟೆ, ಸಹಕಾರ ಸಂಘಗಳ ಕಾಯ್ದೆ ಹಾಗೂ ಕಾನೂನಿನ ಮುಖ್ಯಾಂಶಗಳ ಬಗ್ಗೆ ಎಸ್.ಎನ್. ಅರುಣಕುಮಾರ ಉಪನ್ಯಾಸ ನೀಡಿದರು.

ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುವ ಪ್ರವೃತ್ತಿ ಬೆಳೆಸಿ ಕೊಳ್ಳಬೇಕು. ಮಹಿಳೆಯ ಸಹಕಾರ ಮನೋಭಾವವೇ ಶ್ರೇಯೋಭಿವೃದ್ಧಿಗೆ ಕಾರಣವಾಗಿದೆ.

–ವಿಜಯನಳಿನಿ ರಮೇಶ, ನಿವೃತ್ತ ಪ್ರಾಧ್ಯಾಪಕಿ

*

ಮಹಿಳಾ ಶಕ್ತಿ ಗುರುತಿಸುವ ಕಾರ್ಯವಾಗಬೇಕು. ಸರ್ಕಾರದಿಂದ ಎಲ್ಲರಿಗೂ ಉದ್ಯೋಗ ಒದಗಿಸಲು ಸಾಧ್ಯವಿಲ್ಲ. ಸಹಕಾರಿ ಕ್ಷೇತ್ರದಲ್ಲಿ ತೊಡಗಿದರೆ ಉದ್ಯೋಗ ಕೊರತೆ ನೀಗಿಸಬಹುದು

–ಆರ್‌.ಕೆ. ಪಾಟೀಲ, ಮಹಾಮಂಡಳದ ನಿರ್ದೇಶಕ

*

ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಲು ವಿಪುಲ ಅವಕಾಶಗಳಿವೆ. ಈ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಬೇಕು

–ಜಿ.ಟಿ. ಹೆಗಡೆ ತಟ್ಟೀಸರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ

*

ಪುರುಷ ಪ್ರಧಾನವಾದ ಸಹಕಾರಿ ಕ್ಷೇತ್ರದಲ್ಲಿ ಇಂದು ಮಹಿಳೆಯರ ಕ್ರಿಯಾಶೀಲತೆ ಹಾಗೂ ಸಹಭಾಗಿತ್ವ ಹೆಚ್ಚಬೇಕಾದ ಅನಿವಾರ್ಯತೆ ಇದೆ.

–ಜಿ.ಟಿ.ಹೆಗಡೆ ತಟ್ಟೀಸರ- ಸಹಕಾರಿ ಧುರೀಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT