ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಬೆಳೆ: ಮಾದರಿಯಾದ ರೈತ

ಸಾವಯವ ಕೃಷಿ ಪದ್ಧತಿಯಲ್ಲಿ ದೊಡ್ಡ ಬೈರ ನೆಲ್ಲು ಭತ್ತದ ಬೆಳೆ ಬೆಳೆದ ಬೈರಕೂರು ಗ್ರಾಮದ ರೈತ ಹನುಮಪ್ಪ
ಅಕ್ಷರ ಗಾತ್ರ

ನಂಗಲಿ: ಇಲ್ಲಿನ ಬೈರಕೂರು ಗ್ರಾಮದ ರೈತ ಹನುಮಪ್ಪ ಸಾವಯವ ಕೃಷಿ ಪದ್ಧತಿಯಲ್ಲಿ ದೊಡ್ಡ ಬೈರ ನೆಲ್ಲು ಭತ್ತವನ್ನು ಸಮೃದ್ಧವಾಗಿ ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ.

ಎರಡು ಎಕರೆ ಭೂಮಿಯಲ್ಲಿ ದೊಡ್ಡ ಬೈರ ನೆಲ್ಲು ಭತ್ತವನ್ನು ಸೊಂಪಾಗಿ ಬೆಳೆದಿರುವುದರಿಂದ ನೋಡುಗರ ಕಣ್ಣಿಗೆ ಖುಷಿ ತಂದಿದ್ದು, ಸಾವಯವ ಮಾದರಿಯಲ್ಲಿ ಬೆಳೆದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಈ ಭಾಗದಲ್ಲಿ ಮಳೆ ಬಂದು ಕೆರೆಗಳು ತುಂಬಿ ಸುಮಾರು ವರ್ಷ ಕಳೆದಿದ್ದವು. ಆದರೆ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಕೆರೆ ಕುಂಟೆಗಳು ತುಂಬಿ ಹರಿದಿತ್ತು. ಇದನ್ನು ಮನಗಂಡ ರೈತ ಹನುಮಪ್ಪ ಎರಡು ಎಕರೆಯಲ್ಲಿ ದೊಡ್ಡ ಬೈರ ನೆಲ್ಲು ಭತ್ತದ ತಳಿ ಚೆಲ್ಲಿದ್ದು, ಸೊಂಪಾಗಿ ಫಸಲು ಬಂದಿದೆ.

‘ನಾನು ಸುಮಾರು ವರ್ಷಗಳಿಂದ ದೊಡ್ಡ ಬೈರನೆಲ್ಲು ಭತ್ತ ಚೆಲ್ಲುತ್ತಿದ್ದೇನೆ. ಮನೆಯಲ್ಲಿ ಒಂಭತ್ತು ಮಂದಿ ಇರುವ ನಾವು ಬೈರ ನೆಲ್ಲಿನಿಂದ ತಯಾರಿಸುವ ಊಟೋಪಚಾರ ಬಿಟ್ಟು ಇದುವರೆಗೂ ಯಾವುದೇ ಅಕ್ಕಿಯನ್ನು ಊಟಕ್ಕಾಗಿ ಬಳಸಿಲ್ಲ’ ಎಂದು ರೈತ ಹನುಪಂತಪ್ಪ ತಿಳಿಸಿದರು.

ಬೈರ ನೆಲ್ಲು ಬತ್ತದ ಬಳಕೆಯಿಂದ ಇದುವರೆಗೂ ಕಾಯಿಲೆ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ಅದರಲ್ಲಿರುವ ಔಷಧೀಯ ಗುಣಗಳು. ಸಾವಯವ ಕೃಷಿ ಪದ್ಧತಿಯಲ್ಲಿಯೇ ನಾನು ಎಲ್ಲ ವ್ಯವಸಾಯದ ಬೆಳೆಗಳನ್ನು ಬೆಳೆಯುತ್ತಿದ್ದೇನೆ ಎಂದು ಹರುಷ ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ಈ ಬೈರನೆಲ್ಲು ಭತ್ತ ಬೆಳೆಯುತ್ತಿದ್ದೇನೆ. ನಾನು ಬೆಳೆದ ಈ ಭತ್ತವನ್ನು ಮಾರುವುದಿಲ್ಲ. ಬದಲಾಗಿ ಎಷ್ಟೇ ಬೆಳೆದರು ಸ್ವಂತಕ್ಕೆ ಬಳಸಿಕೊಳ್ಳುತ್ತೇವೆ. ಜತೆಗೆ ಸುತ್ತಮುತ್ತಲ ನಡೆಯುವ ಮದುವೆಗಳಿಗೆ, ಶುಭ ಸಮಾರಂಭ ಹಾಗೂ ಪೂಜೆ ಪುನಸ್ಕಾರಗಳಿಗೆ ಕೊಡುತ್ತೇನೆ. ಜತೆಗೆ ಕೆಲವರು ಭತ್ತ ಚೆಲ್ಲಲ್ಲು ತೆಗೆದುಕೊಂಡು ಹೋಗುತ್ತಾರೆ. ನಾನು ಬೆಳೆಯುವ ಭತ್ತವನ್ನು ಈ ರೀತಿಯಲ್ಲಿ ಬೇರೆ ಬೇರೆ ಕಾರ್ಯಗಳಿಗೆ ಬಳಕೆ ಆಗುತ್ತಿರುವುದರಿಂದ ಸಂತೃಪ್ತಿ ಸಿಗುತ್ತಿದೆ ಎಂದು ಹೇಳುತ್ತಾರೆ.

‘ಸಾವಯವ ಕೃಷಿಯನ್ನೇ ನಂಬಿಕೊಂಡಿರುವ ರೈತ ಹನುಮಂತಪ್ಪ ಭತ್ತದ ಈ ಗದ್ದೆಗೆ ಯಾವುದೇ ರಾಸಾಯನಿಕ ಗೊಬ್ಬರವನ್ನಾಗಲಿ, ಔಷಧವನ್ನಾಗಲಿ ಸಿಂಪಡಿಸಿಲ್ಲ. ಬದಲಾಗಿ ಕೇವಲ ತಿಪ್ಪೆ ಗೊಬ್ಬರ, ಕುರಿಗಳ ಸಗಣಿ, ಎಕ್ಕೆ ಗಿಡಗಳ ಎಲೆ ಹಾಗೂ ಮರಗಳಿಂದ ಉದುರುವ ಎಲೆಗಳ ಸುರುಗನ್ನು ಭತ್ತ ಚೆಲ್ಲುವ ಮೊದಲು ಭೂಮಿಯಲ್ಲಿ ಹಾಕಿ ಉಳುಮೆ ಮಾಡಿದ್ದಾರೆ. ಆ ಕಾರಣ ಭತ್ತದ ಫಸಲು ಸೊಂಪಾಗಿ ಬಂದಿದೆ’ ಎಂದು ಪಕ್ಕದ ಗ್ರಾಮದ ರೈತ ಶ್ರೀನಿವಾಸ್ ಹೇಳುತ್ತಾರೆ.

ಭತ್ತ ಚೆಲ್ಲುವ ಸಂಪ್ರದಾಯ

ಭೂಮಿ ಉಳುಮೆ ಮಾಡಿದ ನಂತರ ಮಳೆ ಬರುವುದನ್ನು ನೋಡಿಕೊಂಡು ಭತ್ತ ಚೆಲ್ಲಲು ಶುರು ಮಾಡುತ್ತೇವೆ. ಚೆಲ್ಲುವ ದಿನ ನಮ್ಮ ಮನೆಯವರು ಎಲ್ಲರೂ ಹೊಸ ಬಟ್ಟೆ ಧರಿಸಿ ಗದ್ದೆಯ ಬಳಿ ಹಿಂದಿನ ವರ್ಷಗಳಲ್ಲಿ ಬೆಳೆದಿರುವ ಭತ್ತದಿಂದ ಊಟ ತಯಾರಿಸುತ್ತೇವೆ. ಅಲ್ಲಿಗೆ ಬರುವ ಎಲ್ಲರಿಗೂ ಊಟ ಬಡಿಸಿ ನಂತರ ಒಣ ಗದ್ದೆಯಲ್ಲಿ ಭತ್ತ ಚೆಲ್ಲುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದು, ಆ ದಿನ ನಮ್ಮ ಮನೆಯವರಿಗೆ ಹಬ್ಬದ ವಾತಾವರಣದಂತಿರುತ್ತದೆ ಎಂದು ರೈತ ಹನುಮಪ್ಪ ಹೇಳುತ್ತಾರೆ.

*

‘ಯಾವುದೇ ವಿಧವಾದ ಗೊಬ್ಬರ ಮತ್ತು ಔಷಧ ಹಾಕದೆ ಬೆಳೆ ಬೆಳೆದು ಸಮೃದ್ಧವಾಗಿ ಫಸಲು ಬರುವ ಹಾಗೆ ಮಾಡಿರುವ ಈ ರೈತನ ಸಾಧನೆಯನ್ನು ಎಲ್ಲರೂ ಮೆಚ್ಚಬೇಕು
 –ಶ್ರೀನಿವಾಸ್, ರೈತ

*

ಹೈಬ್ರಿಡ್ ತಳಿಗಳ ವ್ಯಾಮೋಹ ಕ್ಕೆ ಒಳಗಾಗಿರುವ ರೈತರಿಗೆ ನಮ್ಮ ದೇಸಿ ತಳಿಗಳ ಬಗ್ಗೆ ಇಲಾಖೆಯವರು ಮಾರ್ಗದರ್ಶನ ನೀಡಿ ನಮ್ಮ ಕೃಷಿ ಪದ್ಧತಿ ಉಳಿಸಬೇಕು.

–ಹನುಮಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT