ಶನಿವಾರ, ಆಗಸ್ಟ್ 8, 2020
23 °C

‘ದಿಂಗಾಲೇಶ್ವರರಿಗೆ ತೋಂಟದ ಶ್ರೀಗಳ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಮತ್ತು ನಾಗನೂರಿನ ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವುದಾಗಿ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾಡಿರುವ ಆರೋಪಕ್ಕೆ’ ತೋಂಟದಾರ್ಯ ಮಠದ ಭಕ್ತರ ವೇದಿಕೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ಷೇಪ, ಆಕ್ರೋಶ ವ್ಯಕ್ತಪಡಿಸಿತು. ಕ್ರಿಮಿನಲ್‌ ಹಿನ್ನೆಲೆಯ ಇಂಥವರ ಮಾತಿಗೆ ತೋಂಟದ ಶ್ರೀಗಳು ಉತ್ತರಿಸಬೇಕಾಗಿಲ್ಲ ಎಂದು ಪ್ರತಿಪಾದಿಸಿದರು.

‘ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕೆಂದು ಬೆಂಬಲಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡು, ಇದು ಹೀಗೆಯೇ ಮುಂದುವರಿದರೆ ತಮಗೆ ಹಾಗೂ ತಮ್ಮಂತ ವೈದಿಕಶಾಹಿ ಮನಸ್ಸು ಹೊಂದಿರುವ ಸ್ವಾಮೀಜಿಗೆ ಅಸ್ತಿತ್ವ ಇಲ್ಲವೆಂದು ಭಾವಿಸಿ ದಿಂಗಾಲೇಶ್ವರರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ತೋಂಟದ ಶ್ರೀ ಮತ್ತು ನಾಗನೂರು ಶ್ರೀಗಳ ವಿರುದ್ಧ ಮಾತನಾಡುವ ಯಾವುದೇ ಅರ್ಹತೆ ಇಲ್ಲ’ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಪಂಚಮಸಾಲಿ ಸಂಘದ ಅಧ್ಯಕ್ಷ ಪ್ರಭಣ್ಣ ಹುಣಶಿಕಟ್ಟಿ ಎಚ್ಚರಿಕೆ ನೀಡಿದರು.

‘ದಿಂಗಾಲೇಶ್ವರರ ನಡೆ– ನುಡಿಯನ್ನು ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಯಾವ ವಿಷಯದಲ್ಲೂ ಆ ವ್ಯಕ್ತಿ ಸರಿ ಇಲ್ಲ. ಹೀಗಿರುವ ಅವರು ಸಚಿವ ವಿನಯ ಕುಲಕರ್ಣಿ, ಬಸವರಾಜ ಹೊರಟ್ಟಿ, ಎಂ.ಬಿ. ಪಾಟೀಲ ಹಾಗೂ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮುಂದುವರಿಸಿದರೆ ಸರಿಯಾಗಿ ಬುದ್ಧಿ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ದಿಂಗಾಲೇಶ್ವರ ಅವರನ್ನು ಸ್ವಾಮೀಜಿ ಎನ್ನಲು ನಾಚಿಕೆಯಾಗುತ್ತದೆ. ಅವರ ಇಡೀ ಇತಿಹಾಸವೇ ತಿಳಿದಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಈಗಿನ ಸ್ವಾಮಿಗಳನ್ನು ಕೆಳಗಿಳಿಸಿ, ಆ ಮಠದ ಪೀಠಾಧಿಪತಿ ಆಗಲು ಸಂಚು ರೂಪಿಸಿ ವಿಫಲವಾಗಿದ್ದನ್ನು ಜನ ಮರೆತಿಲ್ಲ. ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸದ ಈ ವ್ಯಕ್ತಿಯ ಒಂದೊಂದೇ ಪ್ರಕರಣಗಳನ್ನು ಕೆದಕುತ್ತಾ ಹೋದರೆ, ಇವರು ಸ್ವಾಮಿ ಆಗುವುದಕ್ಕಿಂತ ಭೂಗತ ಲೋಕದಲ್ಲಿ ಹೆಸರು ಮಾಡಬಹುದಿತ್ತೇನೊ ಎಂಬ ಸಂಶಯ ಹುಟ್ಟುತ್ತದೆ. ಅವರೊಬ್ಬ ಖಾವಿ ಧರಿಸಿದ ಕ್ರಿಮಿನಲ್‌’ ಎಂದು ಬಾಲೇಹೊಸೂರು ದಲಿತ ದೌರ್ಜನ್ಯ ವಿರೋಧಿ ಒಕ್ಕೂಟದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಆರೋಪಿಸಿದರು.

‘ಇವರ ಅವ್ಯವಹಾರದ ಬಗ್ಗೆ ರಾಣೆಬೆನ್ನೂರ ನ್ಯಾಯಾಲಯದಲ್ಲಿ ಪ್ರಕರಣಗಳು ಉಳಿದಿವೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಬಾಲೇಹೊಸೊರಿನಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಆ ಎಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ವರ್ಷಗಟ್ಟಲೆ ತಲೆಮರೆಸಿಕೊಂಡು ಜಾಮೀನು ಪಡೆದು ಹೊರಬಂದಿರುವ ಇವರು ನೆಪ ಮಾತ್ರಕ್ಕೆ ಸ್ವಾಮಿಯಾಗಿದ್ದಾರೆ. ಇವರಿಗೆ ಆತ್ಮಸಾಕ್ಷಿ ಇದ್ದರೆ ತಮ್ಮ ಯೋಗ್ಯತೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ’ ಎಂದರು.

ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ ‘ದಿಂಗಾಲೇಶ್ವರ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಲಿಂಗಾಯತರಿಗೆ ಷಡ್ಯಂತ್ರವನ್ನು ಪರಿಚಯಿಸಿದ ಶ್ರೇಯಸ್ಸು ದಿಂಗಾಲೇಶ್ವರರಿಗೆ ಸಲ್ಲುತ್ತದೆ’ ಎಂದು ಎಸ್.ಎಸ್. ಕಳಸಾಪುರಶೆಟ್ಟರ ಅಭಿಪ್ರಾಯಪಟ್ಟರು.

ಬಸವದಳದ ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ, ಮುರುಘರಾಜೇಂದ್ರ ಬಡ್ನಿ ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ವಿರೂಪಾಕ್ಷಪ್ಪ ಬಳ್ಳೊಳ್ಳಿ, ಬಸವಕೇಂದ್ರದ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಡಾ. ಜಿ.ಬಿ ಪಾಟೀಲ, ವೀರಣ್ಣ ಬೇವಿನಮರದ, ಕೆ.ಎಸ್. ಚೆಟ್ಟಿ, ದಾನಯ್ಯ ಗಣಾಚಾರಿ, ಮಲ್ಲಿಕಾರ್ಜುನ ಐಲಿ, ದಾನಪ್ಪ ತಡದಸ, ಸಿದ್ಧಲಿಂಗಯ್ಯ ಹಿರೇಮಠ, ಶಿವಕುಮಾರ ರಾಮನಕೊಪ್ಪ, ಶರೀಪ್ ಬಿಳಿಯಲಿ, ಜಗದೀಶ ವೀರಾಪುರ, ಡಾ. ಲೋಕೇಶ, ಪ್ರೊ.ನಿಂಗಪ್ಪ ಪೂಜಾರ, ರಮೇಶ ಕಡೆಮನಿ, ಎನ್.ಎಂ. ತಳವಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.