ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವ ನಾಳೆಯಿಂದ

ಗತ ವೈಭವಕ್ಕೆ ಮರಳಿದ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಲರವ: ಇನ್ಫೊಸಿಸ್‌ ಫೌಂಡೇಷನ್‌ ಸಹಯೋಗ
Last Updated 4 ಜನವರಿ 2018, 9:41 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡು ಮತ್ತೆ ತನ್ನ ಹಳೇ ವೈಭವಕ್ಕೆ ಮರಳಿದ್ದು ಜ. 5ರಿಂದ 7ರವರೆಗೆ ಇನ್ಫೊಸಿಸ್‌ ಫೌಂಡೇಷನ್‌ ಆಶ್ರಯದಲ್ಲಿ 3ನೇ ವರ್ಷದ ಪುಲಿಗೆರೆ ಉತ್ಸವ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಂಗೀತ, ನೃತ್ಯ, ಚಿತ್ರ ಸಂಭ್ರಮಗಳ ಸಾಂಸ್ಕೃತಿಕ ಸಂಭ್ರಮ ಮೇಳೈಸಲಿದ್ದು ನಾಡಿನ ಪ್ರಖ್ಯಾತ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ಸಂಕ್ಷಿಪ್ತ ಇತಿಹಾಸ: 11ನೇ ಶತಮಾನದ ನಯನ ಮನೋಹರ ಸೋಮೇಶ್ವರ ದೇವಾಲಯ ಸುಂದರ ಶಿಲ್ಪಕಲಾ ವೈಭವ ಹೊಂದಿದೆ. ದೇವಸ್ಥಾನದ ಸುತ್ತ ಕಲ್ಲಿನಿಂದ ನಿರ್ಮಿಸಿದ ಬೃಹತ್‌ ರಕ್ಷಣಾ ಗೋಡೆ ಇದೆ. ಚಾಲುಕ್ಯ ಶಿಲ್ಪಕಲಾ ಶೈಲಿಯಲ್ಲಿರುವ ದೇವಾಲಯಕ್ಕೆ ಪೂರ್ವ, ದಕ್ಷಿಣ ಹಾಗೂ ಉತ್ತರ ದಿಕ್ಕುಗಳಲ್ಲಿ ಪ್ರವೇಶದ್ವಾರಗಳಿವೆ. ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಮುಖಮಂಟಪಗಳಿಂದ ದೇವಸ್ಥಾನ ಕಂಗೊಳಿಸುತ್ತಿದೆ.

ಗರ್ಭಗುಡಿಯಲ್ಲಿ ಶಿವಶರಣ ಆದಯ್ಯ ಪ್ರತಿಷ್ಠಾಪಿಸಿದ ಶಿವ–ಪಾರ್ವತಿಯರ ಮೂರ್ತಿ ನೋಡುಗರ ಗಮನ ಸೆಳೆಯುತ್ತದೆ. ಶಿವ– ಪಾರ್ವತಿಯರಿಬ್ಬರು ನಂದಿಯ ಮೇಲೆ ಲೋಕ ಸಂಚಾರ ಹೊರಟಿರುವುದು ಈ ಮೂರ್ತಿಯ ವಿಶೇಷ. ದೇವಸ್ಥಾನದ ಒಳಾವರಣದಲ್ಲಿರುವ ಲಜ್ಜಾ ಗೌರಿ ಮೂರ್ತಿ ಅಪರೂಪದ ಶಿಲ್ಪಕಲಾಕೃತಿ ಆಗಿದ್ದು ಭಾರತದ ಕೆಲವೇ ದೇವಸ್ಥಾನಗಳಲ್ಲಿ ಈ ಮೂರ್ತಿಗಳು ಇವೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಪ್ರತಿ ವರ್ಷದ ಮೇ ತಿಂಗಳಿನ ಕೊನೆ ವಾರದಲ್ಲಿ ಐದು ದಿನ ಬೆಳಿಗ್ಗೆ ಸೂರ್ಯನ ಹೊಂಬಣ್ಣದ ಕಿರಣಗಳು ನೇರವಾಗಿ ಗರ್ಭ ಗುಡಿಯಲ್ಲಿನ ಶಿವ–ಪಾರ್ವತಿಯರ ಮೂರ್ತಿ ಮೇಲೆ ಬೀಳುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.

ಇಂಥ ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯ ಶಿಥಿಲಾವಸ್ಥೆ ತಲುಪಿತ್ತು. ಇದನ್ನರಿತ ಬೆಂಗಳೂರಿನ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲು ನಿರ್ಧರಿಸಿದರು. ಅವರ ಪ್ರಯತ್ನದ ಫಲವಾಗಿ ಅಂದಾಜು ₹ 5.5 ಕೋಟಿ ವೆಚ್ಚದಲ್ಲಿ ದೇಗುಲ ಜೀರ್ಣೋದ್ಧಾರಗೊಂಡಿದ್ದು ತನ್ನ ಗತವೈಭವವನ್ನು ಮರಳಿ ಪಡೆದಿದೆ.

ದೇವಸ್ಥಾನದ ಹಿಂಭಾಗದಲ್ಲಿರುವ ಬೃಹತ್‌ ಕಲ್ಲಿನ ಬಾವಿಯನ್ನು ವಿಶೇಷವಾಗಿ ಸಂರಕ್ಷಿಸಲಾಗಿದೆ. ದೇವಸ್ಥಾನದ ಜೀರ್ಣೋದ್ಧಾರದ ನಂತರ ಸುಧಾಮೂರ್ತಿ ಅವರು ಪುಲಿಗೆರೆ ಉತ್ಸವದ ಹೆಸರಿನಲ್ಲಿ ದೇಗುಲದ ಆವರಣದಲ್ಲಿ ಸಂಗೀತ, ನೃತ್ಯ, ಚಿತ್ರ ಸಂಭ್ರಮಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ 3ನೇ ವರ್ಷದ ಪುಲಿಗೆರೆ ಉತ್ಸವ ಜ. 5ರಿಂದ 7ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT