ರೆಹಮಾನ್‌ ಮನಗೆದ್ದ ಇಟಗಿ ಪೋರ!

7

ರೆಹಮಾನ್‌ ಮನಗೆದ್ದ ಇಟಗಿ ಪೋರ!

Published:
Updated:
ರೆಹಮಾನ್‌ ಮನಗೆದ್ದ ಇಟಗಿ ಪೋರ!

ಚೆನ್ನೈನ ಸ್ಟುಡಿಯೊವೊಂದರಲ್ಲಿ ತಮಿಳು ಭಾಷೆಯಲ್ಲಿ ಸುಮಧುರ ಕಂಠದಿಂದ ಕನ್ನಡ ನಾಡಿನ ಅಪ್ಪಟ ಗ್ರಾಮೀಣ ಪ್ರತಿಭೆ ಹಾಡುತ್ತಿದ್ದರೆ ಇಡೀ ಪ್ರೇಕ್ಷಕ ವೃಂದ ತಲೆದೂಗುತ್ತಿತ್ತು. ತೀರ್ಪುಗಾರರು ಈ ಬಾಲಕನ ಕಂಠಕ್ಕೆ ಮನಸೋತು ಪ್ರಶಂಸೆಯ ಸುರಿಮಳೆಗೈದಿದ್ದರು. ತಮಿಳು ಭಾಷಿಕರನ್ನು ಮೋಡಿ ಮಾಡಿದ ಆ ಬಾಲಕನ ಹೆಸರು ವಿಶ್ವಪ್ರಸಾದ ಮಲ್ಲಿಕಾರ್ಜುನ ಗಾಣಗಿ.

ಹದಿಮೂರು ವರ್ಷದ ಈ ಪೋರನ ಹುಟ್ಟೂರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಇಟಗಿ. ಈತನಲ್ಲಿನ ಸಂಗೀತ ಪ್ರತಿಭೆಗೆ ದಕ್ಷಿಣ ಭಾರತದ ಚಲನಚಿತ್ರ ಉದ್ಯಮದಲ್ಲಿ ಅವಕಾಶಗಳ ಬಾಗಿಲು ತೆರೆದಿದೆ. ನಾಡಿನಾದ್ಯಂತ ಈ ಬಾಲಕನ ಖ್ಯಾತಿ ಪಸರಿಸುತ್ತಿದೆ. ಜೀ ತಮಿಳು ವಾಹಿನಿಯಲ್ಲಿ ಪ್ರಸಾರಗೊಂಡ ಸರಿಗಮಪ ಲಿಟ್ಲ್‌ಚಾಂಪ್ಸ್‌ ಕಾರ್ಯಕ್ರಮದಲ್ಲಿ ವಿಜಯಿಯಾಗುವ ಮೂಲಕ ವಿಶ್ವಪ್ರಸಾದ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕನಾಗುವ ಅವಕಾಶ ಗಿಟ್ಟಿಸಿಕೊಂಡಿದ್ದಾನೆ.

ಸ್ಪರ್ಧೆಯ ತೀರ್ಪುಗಾರರಾಗಿದ್ದ ಗಾಯಕ ಶ್ರೀನಿವಾಸ್ ಅವರು ಈ ಎಳೆಯ ಪ್ರತಿಭೆಯನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರಿಗೆ ಪರಿಚಯಿಸಿಕೊಟ್ಟರು. ಆ ನಂತರ ಅವನ ಅದೃಷ್ಟದ ಬಾಗಿಲು ತೆರೆಯಿತು. ರೆಹಮಾನ್ ಅವರೇ ತಾವು ಸಂಗೀತ ನಿರ್ದೇಶಿಸಿರುವ ಎರಡು ತಮಿಳು ಹಾಗೂ ಒಂದು ತೆಲುಗು ಸಿನಿಮಾದಲ್ಲಿ ಹಿನ್ನೆಲೆ ಗಾಯಕನಾಗಿ ಹಾಡಲು ಈ ಗ್ರಾಮೀಣ ಪ್ರತಿಭೆಗೆ ಅವಕಾಶ ಕಲ್ಪಿಸಿದರು.

‘ಸಚಿನ್ ಬಿಲಿಯನ್‌ ಡ್ರೀಮ್ಸ್’ ತಮಿಳು ಚಲನಚಿತ್ರದ ಟೈಟಲ್ ಹಾಡು ಹಾಗೂ ‘ಮರ್ಸೆಲ್’ ತಮಿಳು ಮತ್ತು ತೆಲುಗು ಚಿತ್ರಕ್ಕೆ ವಿಶ್ವಪ್ರಸಾದ ಹಾಡಿದ್ದಾನೆ. ಹಾಗೆಯೇ, ತೆಲುಗು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ ಕೂಡ ವಿಶ್ವಪ್ರಸಾದನ ಮಧುರ ಕಂಠಕ್ಕೆ ಮನಸೋತು ‘ಜೈ ಲವ ಕುಶ’ ತೆಲುಗು ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದಾರೆ. ತಮಿಳು ಸಂಗೀತ ನಿರ್ದೇಶಕ ನರೇನ್ ಬಾಲಕುಮಾರ ಅವರು ಸಹ ‘ಮಿಂಡೂಮ್’ ತಮಿಳು ಚಿತ್ರದಲ್ಲಿ ಹಾಡಲು ಅವಕಾಶ ನೀಡಿರುವುದು ವಿಶ್ವಪ್ರಸಾದನ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ವಿಶ್ವಪ್ರಸಾದ ಬೀಡಿ ಗ್ರಾಮದ ಹೋಲಿಕ್ರಾಸ್ ಕಾನ್ವೆಂಟ್‌ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ. ತಂದೆ ಮಲ್ಲಿಕಾರ್ಜುನ ಮತ್ತು ತಾಯಿ ಗಿರಿಜಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುಟುಂಬಕ್ಕೆ ಸಂಗೀತದ ಯಾವುದೇ ಹಿನ್ನೆಲೆ ಇಲ್ಲ. ನಾಲ್ಕು ವರ್ಷವಿದ್ದಾಗಲೆ ವಿಶ್ವಪ್ರಸಾದಗೆ ಸಂಗೀತದ ಗೀಳು ಬೆಳೆಯಿತು. ಸಂಗೀತದತ್ತ ಒಲವು ತೋರಿದ ಪುತ್ರನಿಗೆ ಪೋಷಕರಿಂದಲೂ ಪ್ರೋತ್ಸಾಹ ದೊರೆಯಿತು. ಅವನಲ್ಲಿ ಸುಪ್ತವಾಗಿದ್ದ ಪ್ರತಿಭೆಗೆ ಸೂಕ್ತ ಮಾರ್ಗದರ್ಶನವೂ ಸಿಕ್ಕಿತು. ಬಳಿಕ ಕಲಿಕೆಯ ಉತ್ಸಾಹ, ಶ್ರಮದಿಂದ ಸಂಗೀತ ಲೋಕ ಆತನನ್ನು ಕೈಬೀಸಿ ಕರೆದಿದ್ದು ಈಗ ಇತಿಹಾಸ.

ನಾಲ್ಕು ವರ್ಷದಿಂದ ಬೆಳಗಾವಿಯ ಗುರುರಾಜ ಮಿರಜಕರ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡುತ್ತಿದ್ದಾನೆ. ಶಿಕ್ಷಕರಾದ ಬಾಬು ಭಜಂತ್ರಿ ಮತ್ತು ನಾದ ಸುಧಾ ಸಂಗೀತ ಶಾಲೆಯ ಟಿ.ಎನ್‌. ಸತ್ಯನಾರಾಯಣ ಅವರು ಈತನಿಗೆ ಸುಗಮ ಸಂಗೀತ ಕಲಿಸಿದ್ದಾರೆ. ಹುಟ್ಟೂರಿನಿಂದ 40 ಕಿ.ಮೀ. ದೂರದ ಬೆಳಗಾವಿಗೆ ಪ್ರತಿ ಶನಿವಾರ ಹಾಗೂ ಭಾನುವಾರ ಸಂಗೀತಾಭ್ಯಾಸಕ್ಕೆ ತೆರಳಬೇಕು.

ಹುಟ್ಟೂರಿನಿಂದ 40 ಕಿ.ಮೀ. ದೂರದ ಬೆಳಗಾವಿಗೆ ಪ್ರತಿ ಶನಿವಾರ ಹಾಗೂ ಭಾನುವಾರ ಸಂಗೀತಾಭ್ಯಾಸಕ್ಕೆ ತೆರಳಬೇಕು. ವಿಶ್ವಪ್ರಸಾದ ನಾಡಿನಾದ್ಯಂತ ಸಂಗೀತ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮನರಂಜಿಸಿದ್ದಾನೆ. 2015 ರಲ್ಲಿ ಬೆಳಗಾವಿಯಲ್ಲಿ ನಡೆದ ‘ಉತ್ತರ ಕರ್ನಾಟಕ ಸ್ಟಾರ್‌ ಸಿಂಗರ್‌ ಇನ್ ಬೆಳಗಾವಿ’ ಕಾರ್ಯಕ್ರಮದಲ ಜೂನಿಯರ್‌ ವಿಭಾಗದಲ್ಲಿ ಈತ ಪ್ರಥಮ ಸ್ಥಾನ ಪಡೆಯುವ ಮೂಲಕ ಈತನ ಗೆಲುವಿನ ಯಾತ್ರೆ ಆರಂಭವಾಯಿತು. 2015ರ ಡಿಸೆಂಬರ್‌ನಲ್ಲಿ ‘ಈ ಟಿವಿ’ ಕನ್ನಡ ವಾಹಿನಿಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ವಪ್ರಸಾದ ಗಾಯಕ ಎಸ್‌.ಪಿ. ಬಾಲಸುಬ್ರಮಣ್ಯ ಅವರ ಮೆಚ್ಚುಗೆಗೆ ಪಾತ್ರನಾಗಿದ್ದ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಆತನ ಹಿರಿಮೆ.

2016 ರಲ್ಲಿ ಮುಂಬೈನಲ್ಲಿ ‘ಆ್ಯಂಡ್’ ವಾಹಿನಿ ನಡೆಸಿದ ‘ದಿ ವಾಯ್ಸ್ ಇಂಡಿಯಾ ಕಿಡ್ಸ್’ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ವಪ್ರಸಾದ ಅಂತಿಮ ಹಂತದ ತಲುಪಿದ. ರಾಷ್ಟ್ರಮಟ್ಟದಲ್ಲಿ ನಡೆದ ಈ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಸಂಗೀತ ಕ್ಷೇತ್ರದ ಕುಸುಮಗಳು ಅಲ್ಲಿ ಸೇರಿದ್ದವು. ಈ ಸ್ಪರ್ಧೆಗೆ ದೇಶಾದ್ಯಂತ 100ಕ್ಕೂ ಹೆಚ್ಚು ಬಾಲಸ್ಪರ್ಧಿಗಳ ಧ್ವನಿ ಪರೀಕ್ಷೆ ನಡೆಸಿ 18 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇವರಲ್ಲಿ ವಿಶ್ವಪ್ರಸಾದ ಸೇರಿದಂತೆ ನಾಲ್ವರು ಮಾತ್ರ ಕರ್ನಾಟಕದವರಿದ್ದರು ಎಂಬುದು ವಿಶೇಷ.

ಈ ಕಾರ್ಯಕ್ರಮದ ಬಳಿಕ 2017ರಲ್ಲಿ ಜೀ ತಮಿಳು ವಾಹಿನಿ ನಡೆಸಿದ ಸರಿಗಮಪ ಲಿಟ್ಲ್‌ ಚಾಂಪ್ಸ್‌ ಕಾರ್ಯಕ್ರಮ ಬಾಲಕನಿಗೆ ಹೊಸ ದಿಕ್ಕು ತೋರಿತು. ಇಲ್ಲಿ ವಿಶ್ವಪ್ರಸಾದ ಸಂಗೀತ ದಿಗ್ಗಜರ ಗಮನಸೆಳೆದ. ಭಾಷೆ ತಿಳಿಯದಿದ್ದರೂ ತಮಿಳು ಹಾಡುಗಳ ಮೂಲಕ ರಂಜಿಸಿ ನಿರ್ಣಾಯಕರು ಮತ್ತು ಜನರ ಅಪಾರ ಮೆಚ್ಚುಗೆ ಗಳಿಸಿದ. ಈ ಕಾರ್ಯಕ್ರಮದಲ್ಲಿ ವಿಜೇತನಾದ ವಿಶ್ವಪ್ರಸಾದ ಚೆನ್ನೈನಲ್ಲಿ ₹ 40 ಲಕ್ಷ ಮೌಲ್ಯದ ಫ್ಲ್ಯಾಟ್‌ ಅನ್ನು ಬಹುಮಾನವಾಗಿ ಪಡೆದಿದ್ದಾನೆ. ಈಗ ಜೀ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಟ್ಲ್‌ಚಾಂಪ್ಸ್‌ ಸ್ಪರ್ಧೆಯಲ್ಲೂ ಗಾನಸುಧೆ ಹರಿಸುತ್ತಿದ್ದಾನೆ.

ಸಂಗೀತದ ಜತೆಗೆ ಚಿತ್ರಕಲೆ, ಕರಾಟೆ, ಚೆಸ್ ಈತನಿಗೆ ಅಚ್ಚುಮೆಚ್ಚು. ಮುಂಬೈನಲ್ಲಿ 2017ರಲ್ಲಿ ನಡೆದ ನ್ಯಾಷನಲ್‌ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಕೂಡ ಮುಡಿಗೇರಿಸಿಕೊಂಡಿದ್ದಾನೆ.

‘ಎಲ್ಲರೂ ನನ್ನನ್ನು ಗುರುತಿಸಬೇಕು. ಆಸ್ಕರ್‌ ಪ್ರಶಸ್ತಿ ಪಡೆಯಬೇಕು ಎನ್ನುವುದು ನನ್ನ ಗುರಿ. ಈ ಗುರಿ ಸಾಧಿಸಲು ಗುರುಗಳು, ಪೋಷಕರು ಮಾರ್ಗದರ್ಶನ ಮಾಡುತ್ತಿದ್ದಾರೆ. ಎಂಜಿನಿಯರಿಂಗ್‌ ಶಿಕ್ಷಣ ‍ಪಡೆಯುವ ಜತೆಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆ ಇದೆ’ ಎನ್ನುತ್ತಾನೆ ವಿಶ್ವಪ್ರಸಾದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry