ಮಂಗಳವಾರ, ಆಗಸ್ಟ್ 11, 2020
23 °C

ಹೆಣ್ಣುಮಕ್ಕಳ ಶಿಕ್ಷಣಕ್ಕೆ ದಾರಿ ದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಣ್ಣುಮಕ್ಕಳ ಶಿಕ್ಷಣಕ್ಕೆ ದಾರಿ ದೀಪ

ವಿಜಯಪುರ: ಮನುವಾದಿಗಳ ವಿರೋಧದ ನಡುವೆಯೂ ಸಾವಿತ್ರಿಬಾ ಫುಲೆ ದೇಶದಲ್ಲಿ ಮೊಟ್ಟ ಮೊದಲು ಪ್ರತ್ಯೇಕ ಹೆಣ್ಣುಮಕ್ಕಳ ಶಾಲೆ ಆರಂಭಿಸಿ ದಾರಿದೀಪವಾಗಿದ್ದಾರೆ ಎಂದು ರಾಯಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಡಾ.ವಿ.ನಾ.ರಮೇಶ್ ಹೇಳಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಾವಿತ್ರಿಬಾ ಫುಲೆ ಅವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮನುವಾದಿಗಳು ಮಹಿಳೆಯರಿಗೆ, ಶೋಷಿತರಿಗೆ ನಿಷೇಧಿಸಿದ ಶಿಕ್ಷಣ ಹಕ್ಕನ್ನು ಸಾವಿತ್ರಿಬಾ ಫುಲೆ ಅವರು ಪುಣೆಯಲ್ಲಿ ಪ್ರತ್ಯೇಕ ಹೆಣ್ಣು ಮಕ್ಕಳ ಶಾಲೆಯನ್ನು ಆರಂಭಿಸಿ, ವಿದ್ಯೆ ಕಲಿಯುವಂತೆ ಮಾಡಿದ್ದಾರೆ ಎಂದು ಸ್ಮರಿಸಿದರು.

‘ಅಂದು ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಹೇಳಿಕೊಡದೆ ಹೋಗಿದ್ದರೆ ನಮ್ಮ ಸ್ಥಿತಿ ಯಾವ ಮಟ್ಟದಲ್ಲಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ’ ಎಂದರು.

ಮುಖ್ಯಶಿಕ್ಷಕಿ ಚಂದ್ರಮುಖಿ ರಮೇಶ್ ಮಾತನಾಡಿ ಸಾವಿತ್ರಿಬಾ ಫುಲೆ ಭಾರತದ ಪ್ರಥಮ ಶಿಕ್ಷಕಿ ಮಾತ್ರವಲ್ಲ. ವಿಶ್ವದ ಮಾತೆ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರ ಉದ್ಧಾರಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮಹಿಳೆ ವಿರುದ್ಧ ಇರುವ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ನಡೆಸಿದರು ಎಂದರು.

ಜಾತಿ, ಧರ್ಮ, ವರ್ಗ ಭೇದ ಮಾಡದೆ ಎಲ್ಲರಿಗೂ ಅಕ್ಷರದೂಟ ಉಣಬಡಿಸಿದ ಅವರ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆ ಎಂದು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಯೋಜಕಿ ಎಚ್.ಭಾರತಿ ಮಾತನಾಡಿ, ಬಾಲ್ಯ ವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯಗಳಂತಹ ಪಿಡುಗು ತೊಲಗಿಸಲು ಮೊದಲು ಮಹಿಳೆ ಶಿಕ್ಷಣವಂತಳಾಗಬೇಕು ಎಂದರು.

‘ಅವರ ಜೀವನ ಸಾಧನೆಗಳ ಬಗ್ಗೆ ತಿಳಿದುಕೊಂಡು ಅವರಲ್ಲಿನ ಒಳ್ಳೆಯ ಗುಣ, ತತ್ವ ಆದರ್ಶಗಳನ್ನು ನಾವೂ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ. ಜಾತಿ, ಮತ, ಧರ್ಮ, ಬಡವ, ಶ್ರೀಮಂತ ಎನ್ನುವ ತಾರತಮ್ಯ ಇಲ್ಲದೆ ಎಲ್ಲರೂ ಈ ನಾಡಿನ ಶ್ರೇಯಸ್ಸಿಗೆ ಶ್ರಮಿಸಬೇಕು’ ಎಂದು ಹೇಳಿದರು.

ಸಾವಿತ್ರಿಬಾ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಶಿಕ್ಷಕಿ ವಿಜಯಜ್ಯೋತಿ. ಗಾಯಿತ್ರಿ, ಸಹಾಯಕಿ ನೇತ್ರಾವತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.