ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡನ ಜತೆ ರಾರಾಜಿಸಲು ಶಿವರಾಜ್‌ ರೆಡಿ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

‘ನನಗೊಬ್ಬ ಮಗ ಇದ್ದಾನೆ. ನಾನೂ ಹಿಂದೊಮ್ಮೆ ಒಂದು ನಾಯಿ ಸಾಕಿದ್ದೆ. ಆದರೆ, ನಾಯಿ ಮತ್ತು ಮನುಷ್ಯನ ನಡುವೆ ಎಂಥ ಸಂಬಂಧ ಬೆಳೆಯಬಹುದು. ನಾಯಿಯೂ ನಮಗೆ ಮಗುವಾಗಬಲ್ಲದು ಎಂಬುದು ತಿಳಿದಿದ್ದು ಈಗಲೇ’

–ಪಂಚಿಂಗ್‌ ಡೈಲಾಗ್ಸ್‌, ಟೈಮಿಂಗ್‌ ಕಾಮಿಡಿ ಮೂಲಕವೇ ಪರಿಚಿತರಾಗಿದ್ದ ಶಿವರಾಜ್‌ ಕೆ.ಆರ್‌. ಪೇಟೆ ಅಂದು ಹಾಸ್ಯ ಮಾಡುವ ಮೂಡಿನಲ್ಲಿದ್ದಂತಿರಲಿಲ್ಲ. ಹಿಂದಿನ ದಿನ ರಾತ್ರಿಯೆಲ್ಲ ಚಿತ್ರೀಕರಣದಲ್ಲಿ ಪಾಲ್ಗೊಂಡು ಬಂದ ದಣಿವೂ ಅವರ ಮುಖದಲ್ಲಿತ್ತು. ಅಷ್ಟೇ ಅಲ್ಲ, ತಾವು ನಾಯಕನಾಗಿ ನಟಿಸುತ್ತಿರುವ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳುತ್ತೇನೆ ಎಂಬುದರ ಸೂಚನೆಯೂ ಅವರ ಮಾತಿನಲ್ಲಿತ್ತು.

ಅಂದಹಾಗೆ, ಈ ಚಿತ್ರಕ್ಕೆ ನಾನು ನಾಯಕ ನಟ ಅಲ್ಲ ಎಂಬುದನ್ನೇ ಅವರು ತಮ್ಮ ಮಾತಿನುದ್ದಕ್ಕೂ ಒತ್ತಿ ಒತ್ತಿ ಹೇಳುತ್ತಿದ್ದರು. ‘ಇದರಲ್ಲಿ ಕಥೆಯೇ ಮುಖ್ಯ. ನಮ್ಮ ಗುಂಡ ಈ ಚಿತ್ರದ ನಾಯಕ. ನಾನು ಪ್ರಧಾನ ಪಾತ್ರದಲ್ಲಿ ನಟಿಸಿದ್ದೇನೆ ಅಷ್ಟೆ’ ಎನ್ನುವುದು ಅವರ ವಿನಯದ ಮಾತು. ಗುಂಡ ಎಂದರೆ ಎಂದರೆ ಮತ್ಯಾರೂ ಅಲ್ಲ. ಅದು ಈ ಚಿತ್ರದಲ್ಲಿ ನಟಿಸಿರುವ ನಾಯಿ!

ಶಿವರಾಜ್‌ ಒಳಗಿನ ಹಾಸ್ಯಗಾರನನ್ನು ಕೆಣಕುವ ಉದ್ದೇಶದಿಂದಲೇ ‘ಈ ಚಿತ್ರದ ಶೀರ್ಷಿಕೆಯನ್ನು ನಾನು ಮತ್ತು ಗಂಡ’ ಅಂತಲೂ ಓದಿಕೊಳ್ಳಬಹುದೇ?’ ಎಂದು ಕೇಳಿದರೆ ಸುಮ್ಮನೆ ನಕ್ಕರು. ‘ಹಾಗೆ ಹೇಳೋಕೆ ಇದು ಗಂಡ–ಹೆಂಡತಿ ಕಥೆ ಅಲ್ಲವೇ ಅಲ್ಲ. ನಾನು ಮತ್ತೆ ನಾಯಿ ನಡುವಿನ ಕಥೆ ಇದು. ಆದ್ದರಿಂದ ಇದು ನಾನು ಮತ್ತು ಗುಂಡ ಅನ್ನುವುದೇ ಸರಿ’ ಎನ್ನುತ್ತಾರೆ ಅವರು.

‘ನಾನು ಮತ್ತು ಗುಂಡ ವಿಭಿನ್ನವಾದ ಕಥೆ. ಸಿನಿಮಾ ನೋಡಿಕೊಂಡು ಹೊರಗೆ ಬಂದ ಯಾವ ಮನುಷ್ಯನೂ ನಾಯಿ ಕಂಡರೆ ಇನ್ನೊಮ್ಮೆ ಕಲ್ಲು ಹೊಡೆಯಲಿಕ್ಕೆ ಹೋಗುವುದಿಲ್ಲ. ಬದಲಿಗೆ ತನ್ನ ಮನೆಯಲ್ಲಿಯೂ ಒಂದು ನಾಯಿಯನ್ನು ಸಾಕಬೇಕು ಎಂದು ಅವನಿಗೆ ಅನಿಸುತ್ತದೆ’ ಚಿತ್ರ ಉಂಟು ಮಾಡಬಹುದಾದ ಪರಿಣಾಮದ ಬಗ್ಗೆ ವಿಶ್ವಾಸದಿಂದಲೇ ಮಾತನಾಡುತ್ತಾರೆ.

ಇದು ಬರೀ ಅನಿಸಿಕೆಯಲ್ಲ. ಸ್ವಂತ ಅನುಭವದ ಮಾತು. ‘ನಾನು ಇತ್ತೀಚೆಗೆ ಗುಂಡನನ್ನು ನಾಯಿ ಎಂದು ಹೇಳಲೇ ಸಾಧ್ಯವಾಗುತ್ತಿಲ್ಲ. ಅವನು, ಇವನು, ಯಾಕಿಂಗಾಡ್ತಿದಾನೆ? ಅಂತಲೇ ಮಾತಾಡುತ್ತೇನೆ. ನನ್ನ ಬದುಕಿನ ಒಂದು ಭಾಗವೇ ಆಗಿಬಿಟ್ಟಿದಾನೆ ಗುಂಡ. ಇಂಥದೊಂದು ಬಾಂಧವ್ಯ ಬೆಳೆಯುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಈಗ ಅವನೂ ನನ್ನ ಕಂಡರೆ ಬಾಲ ಅಲ್ಲಾಡಿಸ್ಕೊಂಡು ಓಡಿಬಂದ್ಬಿಡ್ತಾನೆ. ಈ ಚಿತ್ರಕ್ಕಾಗಿಯೇ ಹುಟ್ಟಿದ ಥರ ಇದಾನೆ ಅವನು’ ಎಂದು ಕ್ಯಾಮೆರಾದಾಚೆಗೂ ವಿಸ್ತರಿಸಿಕೊಂಡ ಗುಂಡನ ಜತೆಗಿನ ಸಂಬಂಧದ ಕುರಿತು ಶಿವರಾಜ್‌ ಹೇಳಿಕೊಳ್ಳುತ್ತಾರೆ.

ಈ ಕಥೆ ರಘು ಹಾಸನ ಅವರದು. ನಿರ್ದೇಶನದಲ್ಲಿ ಅವರಿಗೆ ಇನ್ನೂ ಮೂರು ಜನ ಕೈಜೋಡಿಸಿದ್ದಾರೆ. ರಘು ಅವರ ‘ಗಾಂಧಿಗಿರಿ‘ ಸಿನಿಮಾದಲ್ಲಿ ಶಿವರಾಜ್‌ ಒಂದು ದೃಶ್ಯದಲ್ಲಿ ನಟಿಸಿದ್ದರು. ನಂತರ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ವಿಜೇತರಾಗಿ ಬಂದಾಗ ಅವರ ಪ್ರತಿಭೆಯ ಬಗ್ಗೆ ರಘು ಅಚ್ಚರಿ ವ್ಯಕ್ತಪಡಿಸಿದ್ದರು. ಅಷ್ಟಕ್ಕೆ ಸುಮ್ಮನಾಗಲಿಲ್ಲ. ಈ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡರು. ಕಥೆ ತುಂಬ ಇಷ್ಟವಾದರೂ ಇಂಥದ್ದೊಂದು ಪಾತ್ರದಲ್ಲಿ ನಾನು ನಟಿಸಬಲ್ಲೆನಾ? ಎಂಬ ಪ್ರಶ್ನೆ ಶಿವರಾಜ್‌ ಅವರನ್ನು ಕಾಡಿತ್ತು. ಈ ಪ್ರಶ್ನೆಗೆ ‘ಖಂಡಿತ ಸಾಧ್ಯವಿದೆ. ನೀನು ಮಾಡಬಲ್ಲೆ ಎಂಬ ವಿಶ್ವಾಸ ನನಗಿದೆ’ ಎಂದು ಧೈರ್ಯ ತುಂಬಿದವರು ರಘು ಅವರೇ.

ಈಗ ‘ನಾನು ಮತ್ತು ಗುಂಡ’ ಸಿನಿಮಾದ ಇನ್ನೈದು ದಿನಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ‘ಇದುವರೆಗೆ ನನ್ನ ಹಾಸ್ಯವನ್ನಷ್ಟೇ ನೋಡಿದ್ದಿರಿ. ಆದರೆ, ಈ ಸಿನಿಮಾದಲ್ಲಿ ಅದೇ ಶಿವರಾಜ್‌ ಇಂಥದ್ದೊಂದು ಪಾತ್ರ ನಿಭಾಯಿಸಬಲ್ಲನಲ್ಲವೇ ಎಂದು ಅಚ್ಚರಿಪಡುತ್ತೀರಿ’ ಎಂದು ಖುಷಿಯಿಂದಲೇ ಅವರು ಹೇಳಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಶಿವರಾಜ್‌ ಹೆಂಡತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇಡೀ ಚಿತ್ರದಲ್ಲಿ ಬಳಕೆಯಾಗಿರುವುದು ಹಾಸನದ ಪ್ರಾದೇಶಿಕ ಕನ್ನಡ. ‘ಹಾಸನ’ ಈ ಚಿತ್ರಕ್ಕೊಂದು ಭಾವವಲಯವಾಗಿಯೂ ಕೆಲಸ ಮಾಡಿದೆ. ಯಾಕೆಂದರೆ ಶಿವರಾಜ್‌ ಹಾಸನದವರು. ನಿರ್ದೇಶಕ ರಘು ಸಹ ಹಾಸನದವರೇ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಶರತ್‌ ಚಕ್ರವರ್ತಿಯೂ ಹಾಸನದವರು. ಇದರಿಂದ ಕೆಲಸ ಹೆಚ್ಚು ಸುಲಭವಾಗಿ ನಡೆದಿದೆ. ಇದು ಚಿತ್ರದ ಒಟ್ಟಾರೆ ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ ಎನ್ನುತ್ತಾರೆ ಶಿವರಾಜ್‌.

‘ಐರಾವತ’ ಸಿನಿಮಾದಲ್ಲಿ ದರ್ಶನ್‌ ಜತೆ ಕಾಣಿಸಿಕೊಂಡಿದ್ದ ನಾಯಿಯನ್ನೇ ಈ ಚಿತ್ರದಲ್ಲಿಯೂ ಬಳಸಿಕೊಳ್ಳಲಾಗಿದೆ. ‘ಮೊದಮೊದಲು ಗುಂಡನನ್ನು ನೋಡಿ ಭಯ ಆಗುತ್ತಿತ್ತು. ನನಗಿಂತ ತೂಕ ಜಾಸ್ತಿ ಇರುವ ಹಾಗಿದೆ. ಬಾಯಿ ಹಾಕಿಬಿಟ್ರೆ ಮುಕ್ಕಾಲ್‌ ಕೆ.ಜಿ. ಮಾಂಸ ಒಟ್ಗೆ ಎಳ್ಕಂಡು ಬಿಡ್ತದೆ’ ಎಂದು ಭಯವಾಗ್ತಿತ್ತು. ಆದರೆ, ಗುಂಡ ತುಂಬ ಫ್ರೆಂಡ್ಲಿ. ಜತೆಗೆ ಯಾರೂ ಇಲ್ಲ ಅಂದ್ರೆ ಡಲ್‌ ಆಗಿಬಿಡುತ್ತಾನೆ’ ಎಂದು ಗುಂಡನ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಾರೆ. ಇದರ ಜತೆಗೆ ಇನ್ನೊಂದು ನಾಯಿಮರಿಯೂ ಚಿತ್ರದಲ್ಲಿದೆ.

‘ಹಾಸ್ಯ, ಕೌಟುಂಬಿಕ ಭಾವನೆಗಳು, ಪ್ರಾಣಿ ಪ್ರೀತಿ, ಇಂಥ ಪ್ರಾಣಿಗಳು ಒಂದು ಕುಟುಂಬದಲ್ಲಿ ಎಂಥ ಪಾತ್ರವಹಿಸುತ್ತವೆ ಎಂಬುದನ್ನೆಲ್ಲ ಈ ಸಿನಿಮಾದಲ್ಲಿ ಹೇಳಲಾಗಿದೆ. ಹಾಗೆಯೇ ಇಂಥ ಪ್ರಾಣಿಗಳನ್ನೇ ಇಟ್ಟುಕೊಂಡು ಕೆಲವೊಂದು ದಂಧೆಗಳೂ ನಡೆಯುತ್ತಿರಬಹುದು. ಆ ಎಳೆಯೂ ಇದೆ. ಇದು ನಮ್ಮ ಪಕ್ಕದ ಬೀದಿಯಲ್ಲಿ ನಡೆಯುತ್ತಿದೆ. ತೆರೆಯ ಮೇಲೆ ನಡೆಯುತ್ತಿರುವುದಕ್ಕೆ ತಕ್ಷಣ ಎದ್ದು ಹೋಗಿ ಪ್ರತಿಕ್ರಿಯಿಸಬೇಕು ಎನಿಸುವಂಥ ಕಥೆ’ ಎಂದು ಸಿನಿಮಾದ ಚೌಕಟ್ಟಿನ ಕುರಿತು ವಿವರಿಸುತ್ತಾರೆ.

ನೀವು ಹಾಸ್ಯದ ಮೂಲಕವೇ ಪರಿಚಿತರು. ಈ ಚಿತ್ರದ ಭಾವನಾತ್ಮಕ ದೃಶ್ಯಗಳಲ್ಲಿ ನಟಿಸುವುದು ಕಷ್ಟ ಎನಿಸಲಿಲ್ಲವೇ? ಎಂಬ ಪ್ರಶ್ನೆಗೆ ಶಿವರಾಜ್‌, ‘ನಾನೊಬ್ಬ ಕಲಾವಿದ’ ಎಂದು ಉತ್ತರಿಸುತ್ತಾರೆ. ‘ಈ ಸಿನಿಮಾದಲ್ಲಿ ಕಥೆಯೇ ನಾಯಕ. ಅದು ಬಿಟ್ಟರೆ ಗುಂಡನೇ ಹೀರೊ. ನಾನೊಬ್ಬ ಪಾತ್ರಧಾರಿ. ಇಲ್ಲಿ ಹಾಸ್ಯ ಇರುತ್ತದೆ. ಆದರೆ, ನಾನು ಹಾಸ್ಯಗಾರ ಅಲ್ಲ ಈ ಚಿತ್ರದಲ್ಲಿ. ಅಲ್ಲದೇ ಯಾವಾಗಲೂ ನಗಿಸುತ್ತಿರುವವನೊಬ್ಬ ಅತ್ತುಬಿಟ್ಟರೆ ಅದು ಜನರನ್ನು ಹೆಚ್ಚು ಕಾಡುತ್ತದೆ’ ಎಂದು ತಮ್ಮ ಮಾತನ್ನು ಇನ್ನಷ್ಟು ವಿಸ್ತರಿಸುತ್ತಾರೆ.

‘ಜನರು ನನ್ನನ್ನು ಹಾಸ್ಯನಟನನ್ನಾಗಿ ಗುರ್ತಿಸಿದ್ದಾರೆ. ಹಾಸ್ಯನಟನಾಗಿಯೇ ಮುಂದುವರಿಯುತ್ತೇನೆ. ಮಧ್ಯದಲ್ಲಿ ಇಂಥ ಭಿನ್ನ ಪಾತ್ರಗಳು ದೊರೆತರೆ ಖಂಡಿತ ಮಾಡುತ್ತೇನೆ’ ಎನ್ನುವ ಶಿವರಾಜ್‌ ಕೈಯಲ್ಲೀಗ, ‘ಅಯೋಗ್ಯ’, ‘ಯಾನ’, ‘ಕಿಸ್‌’, ‘ಜಂತರ್‌ ಮಂತರ್‌’ ಸೇರಿದಂತೆ ಹಲವು ಅವಕಾಶಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT