ಸೋಮವಾರ, ಆಗಸ್ಟ್ 3, 2020
25 °C
ಗವಿಮಠದ ಆವರಣದಲ್ಲಿ ಗಮನ ಸೆಳೆದ ಫಲ, ಪುಷ್ಪ ಪ್ರದರ್ಶನ, ಮಾರಾಟ

ಗವಿಮಠದ ಮಂಟಪ, ತೆಪ್ಪೋತ್ಸವ ಪ್ರಧಾನ ಆಕರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗವಿಮಠದ ಮಂಟಪ, ತೆಪ್ಪೋತ್ಸವ ಪ್ರಧಾನ ಆಕರ್ಷಣೆ

ಕೊಪ್ಪಳ: ಗವಿಮಠದ ಆವರಣದಲ್ಲಿ ಬುಧವಾರ ಉದ್ಘಾಟನೆಗೊಂಡ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ಫಲಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.

ಈ ಬಾರಿ ಗವಿಮಠದ ಕೆರೆಯ ನಡುವಿನ ಮಂಟಪ ಹಾಗೂ ತೆಪ್ಪೋತ್ಸವ ಮಾದರಿ ರೂಪಿಸಿರುವುದು ವಿಶೇಷ. ಕೆರೆಯ ನಡುವೆ ಇಳಿಬಿಟ್ಟ ಆಲದ ಬಳ್ಳಿಗಳ ನಡುವೆ ನೀರು ಸುರಿಯುವ ನೋಟ, ಮಧ್ಯೆ ಇತ್ತೀಚೆಗೆ ನಡೆದ ತೆಪ್ಪೋತ್ಸವದ ತೆಪ್ಪದ ಮಾದರಿ ಗಮನ ಸೆಳೆಯುತ್ತಿದೆ.

ಕೆರೆ ನಡುವಿನ ಮಂಟಪ ರಚನೆಗೆ 50 ಸಾವಿರ ಗುಲಾಬಿ ಹೂಗಳನ್ನು ಬಳಸಲಾಗಿದೆ. ಗುಲಾಬಿ, ಡಾರ್ಕ್ ಪಿಂಕ್‍, ಕೆಂಪು, ಬಿಳಿ ಹಾಗೂ ಹಳದಿ ಗುಲಾಬಿಗಳನ್ನು ಬಳಸಲಾಗಿದೆ. 1 ಕ್ವಿಂಟಲ್‍ ಚೆಂಡು ಹೂ ಬಳಸಲಾಗಿದೆ. ಅಲ್ಲದೇ ಜರ್ಬೇರಾ, ಕಾರ್ಸಿನಿಸಿಯನ್‍, ಸಿಲಾಜಿ...ಹೀಗೆ 20 ವಿವಿಧ ಬಗೆಯ ಹೂಗಳನ್ನು ಬಳಸಲಾಗಿದೆ.

'ಪ್ರತಿದಿನ 20ರಿಂದ 30 ಸಾವಿರ ಹೂಗಳನ್ನು ಬದಲಿಸಲಾಗುತ್ತದೆ. ಹೂಗಳ ತಾಜಾತನವನ್ನು ಕಾಯ್ದುಕೊಳ್ಳಲಾಗುತ್ತದೆ. ಈ ಹೂಗಳಿಗೆ ಮಾತ್ರ ₹ 2ರಿಂದ 3 ಲಕ್ಷ ವ್ಯಯಿಸಲಾಗಿದೆ. ಇಡೀ ಪ್ರದರ್ಶನಕ್ಕೆ ಸುಮಾರು ₹ 7 ಲಕ್ಷದಷ್ಟು ವೆಚ್ಚವಾಗಿದೆ. ಹಲವು ಪ್ರಾತ್ಯಕ್ಷತೆಗಳನ್ನೂ ಇಲ್ಲಿ ಇರಿಸಲಾಗಿದೆ' ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಿಳಿಸಿದರು.

ಅಣಬೆ ಉತ್ಪನ್ನಗಳ ಮಾರಾಟ: ಹುಲಿಗಿಯ ರೈತರು ಬೆಳೆದ ಅಣಬೆ ಪ್ರಾತ್ಯಕ್ಷಿಕೆ ಹಾಗೂ ಮಾರಾಟ ಮತ್ತು ಅಣಬೆಯ ತಿನಿಸುಗಳ ರುಚಿಯನ್ನು ಜಾತ್ರೆಗೆ ಬಂದವರು ಸವಿಯಬಹುದು.

‘ಇಂಥ ಖಾದ್ಯಗಳನ್ನು ತಯಾರಿಸಲು ಸ್ಥಳೀಯರಿಗೆ ತರಬೇತಿ ನೀಡಲಾಗುತ್ತದೆ. ಅಣಬೆಯಲ್ಲಿ ಎಲ್ಲ ಪೋಷಕಾಂಶಗಳು ಇವೆ. ಜೇನು ಕೃಷಿಯ ಪ್ರಾತ್ಯಕ್ಷಿಕೆ ಮತ್ತು ಉತ್ಪನ್ನಗಳ ಮಾರಾಟ ಇದೆ’ ಎಂದು ಕೃಷ್ಣ ಮಾಹಿತಿ ನೀಡಿದರು.

ರೈತರು ಬೆಳೆದ ದ್ರಾಕ್ಷಿ, ದಾಳಿಂಬೆ, ಬಾಳೆ ಹಣ್ಣು, ಕಲ್ಲಂಗಡಿ ಹೀಗೆ ವಿವಿಧ ಹಣ್ಣು, ತರಕಾರಿಗಳಿಂದ ವಿವಿಧ ಕಲಾಕೃತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮುಖ ಭಾವ ಕೆತ್ತಲಾಗಿದೆ. ಇವು ಶಿವಮೊಗ್ಗದ ಕಲಾವಿದ ಹರೀಶ್‍ ಅವರ ಕೃತಿಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.