ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕದಿಂದ ಬಡತನ ನಿವಾರಣೆ

ಶರಣ ಸಂಗಮ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ಅಭಿಮತ
Last Updated 4 ಜನವರಿ 2018, 12:36 IST
ಅಕ್ಷರ ಗಾತ್ರ

ಬೀದರ್: ‘ಬಸವಾದಿ ಶರಣರ ಕಾಯಕ ತತ್ವ ಪಾಲನೆಯಿಂದ ಜಗತ್ತಿನಲ್ಲಿ ಬಡತನ ನಿವಾರಣೆ ಸಾಧ್ಯವಿದೆ’ ಎಂದು ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ಅಭಿಪ್ರಾಯಪಟ್ಟರು.

ಇಲ್ಲಿಯ ಶರಣ ಉದ್ಯಾನದಲ್ಲಿ ಮಂಗಳವಾರ 217ನೇ ಶರಣ ಸಂಗಮ ಹಾಗೂ 2018ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶರಣರ ಆಚಾರ ವಿಚಾರಗಳು ವೈಚಾರಿಕ ಪ್ರಭೆಯನ್ನು ಹೊರ ಸೂಸುತ್ತವೆ. ಬಸವ ಸೇವಾ ಪ್ರತಿಷ್ಠಾನವು ಅವುಗಳನ್ನು ಉಳಿಸಿ ಬೆಳೆಸುವ ಹಾಗೂ ಸಮಾಜದಲ್ಲಿ ಶಾಶ್ವತವಾಗಿ ನೆಲೆಗೊಳಿಸುವ ಕಾರ್ಯ ಮಾಡುತ್ತಿದೆ’ ಎಂದು ಹೇಳಿದರು.

‘ಸೊನ್ನಲಾಪುರದ ಶಿವಯೋಗಿ ಸಿದ್ದರಾಮೇಶ್ವರರು ಬಸವ ಧರ್ಮದ ಧೃವತಾರೆ’ ಎಂದು ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣ ಬಣ್ಣಿಸಿದರು.

‘ಸಿದ್ದರಾಮೇಶ್ವರರ ವಚನಗಳಲ್ಲಿ ಬಸವ ಭಕ್ತಿಯು ಜಲಪಾತವಾಗಿ ಧಾರೈಸುವುದು’ ಎಂದು ಅನೇಕ ವಚನಗಳನ್ನು ಉದಾಹರಿಸಿ ಹೇಳಿದರು.

‘ಬಸವ ಭಕ್ತಿ ಎಂದರೆ ಬಸವಣ್ಣನವರ ಸಮಾಜೋಧಾರ್ಮಿಕ ಕಾರ್ಯಗಳ ವಿವರಣೆಯೇ ಆಗಿದೆ’ ಎಂದು ತಿಳಿಸಿದರು.

‘ಬಹುಜನರಿಗೆ ಹಿತವಾದ ವಚನ ಸಾಹಿತ್ಯ ಜನಮನದಲ್ಲಿ ಬಿತ್ತುವ ಜವಾಬ್ದಾರಿ ನಮ್ಮ ಮೇಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸರ್ವ ಸಮಾನವಾಗಿ ಬದುಕುವ ಅವಕಾಶ ಕಲ್ಪಿಸುವ ತತ್ವಗಳನ್ನು ಶರಣರು ನೀಡಿದ್ದೇ ನಿಜವಾದ ಮನುಕುಲದ ಸ್ವಾತಂತ್ರ್ಯ. ಅದನ್ನು ವಚನ ವಿಜಯೋತ್ಸವವೆಂದು ಪ್ರತಿ ವರ್ಷ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

ಡಾ. ಗಂಗಾಂಬಿಕೆ ಅಕ್ಕ ಮಾತನಾಡಿ, ‘ಪ್ರಪಂಚದಲ್ಲಿ ಪ್ರಚಲಿತವಾಗಿರುವ ಏಳು ಯೋಗಗಳಿಗೂ ಮಿಗಿಲಾದ ಎಂಟನೇ ಯೋಗ ಇಷ್ಟಲಿಂಗ ಯೋಗವನ್ನು ಜಗತ್ತಿಗೆ ನೀಡಿದ್ದು ಬಸವಣ್ಣ’ ಎಂದು ತಿಳಿಸಿದರು.

ಸಿಂಡಿಕೇಟ್ ಬ್ಯಾಂಕ್‌ನ ಚಂದ್ರಶೇಖರ ಪಾಟೀಲ ಷಟ್‌ಸ್ಥಲ ಧ್ವಜಾರೋಹಣ ಮಾಡಿದರು. ಡಾ. ಭಾಗೀರಥಿ ಕೊಂಡಾ ಅಧ್ಯಕ್ಷತೆ ವಹಿಸಿದ್ದರು. ಲಿಂಗಾಯತ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಪಾಟೀಲ, ಬಡ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ಕೆಎಎಸ್ ಅಧಿಕಾರಿಯಾದ ವಡಗಾಂವ್ ಗ್ರಾಮದ ಖಾಜಾ ಖಲೀಲುಲ್ಲಾ ಅವರನ್ನು ಸನ್ಮಾನಿಸಲಾಯಿತು.

ಬಸವ ಸೇವಾ ಪ್ರತಿಷ್ಠಾನದ 2018ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು.

ಬಸವರಾಜ ಜಕ್ಕಾ, ಶಿವಶಂಕರ ವಡ್ಡಿ, ಧೂಳಪ್ಪ ಬೆಲ್ದಾಳೆ, ರಾಚಯ್ಯ ಸ್ವಾಮಿ, ಸಂತೋಷ ಎಸ್.ಮಾಳೆನವರ, ಅಮೃತ ಕಂಟೆಪ್ಪ ಬಿರಾದಾರ, ಬಸವರಾಜ ಮಸ್ಕಲೆ ನಾಗೂರ(ಬಿ), ಸೋಮನಾಥ ದೇಶಮುಖ ನಾಗೂರ(ಬಿ), ವಿಜಯಲಕ್ಷ್ಮಿ ಸಾವಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಂಗಪ್ಪ ಸಾವಲೆ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT