ಗುರುವಾರ , ಆಗಸ್ಟ್ 13, 2020
27 °C

ಜಾಗತಿಕ ತಲ್ಲಣಗಳಿಗೆ ವ್ಯಂಗ್ಯದ ಬಹುರೂಪ

ದಯಾನಂದ Updated:

ಅಕ್ಷರ ಗಾತ್ರ : | |

ಜಾಗತಿಕ ತಲ್ಲಣಗಳಿಗೆ ವ್ಯಂಗ್ಯದ ಬಹುರೂಪ

ನಿಜವಾದ ಕಲಾವಿದ ಕಣ್ಣೆದುರಿನ ತಲ್ಲಣಗಳಿಗೆ ಕಲೆಯ ರೂಪ ಕೊಡದೆ ಸುಮ್ಮನೆ ಕೂರಲಾರ ಎಂಬ ಮಾತಿದೆ. ಇದೇ ಮಾತನ್ನು ಚೀನಾದ ವ್ಯಂಗ್ಯಚಿತ್ರಕಾರ ಲಿಯು ಕಿಯಾಂಗ್ ಅವರಿಗೂ ಅನ್ವಯಿಸಬಹುದು. ಅಕ್ಷರಗಳ ವಿವರಗಳಿಲ್ಲದೆ ವ್ಯಂಗ್ಯಚಿತ್ರಗಳ ಮೂಲಕವೇ ಎಲ್ಲವನ್ನೂ ಹೇಳುವ ಅಪರೂಪದ ವ್ಯಂಗ್ಯಚಿತ್ರಕಾರರಲ್ಲಿ ಲಿಯು ಕಿಯಾಂಗ್ ಕೂಡಾ ಒಬ್ಬರು.

ಈ ಅಪರೂಪದ ಕಲಾವಿದರ 50 ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ. ಜಾಗತಿಕ ತಲ್ಲಣಗಳಿಗೆ ಲಿಯು ಕಿಯಾಂಗ್ ಸ್ಪಂದಿಸಿರುವ ವ್ಯಂಗ್ಯಚಿತ್ರಗಳು 13 ದಿನಗಳ ಕಾಲ ನಗರದಲ್ಲಿ ಪ್ರದರ್ಶನ ಕಾಣಲಿವೆ.

‘ಚೀನಾದ ವ್ಯಂಗ್ಯಚಿತ್ರಕಾರರೊಬ್ಬರ ವ್ಯಂಗ್ಯಚಿತ್ರಗಳು ನಮ್ಮ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು. ಲಿಯು ಕಿಯಾಂಗ್ ಚೀನಾ ದೇಶದ ಒಬ್ಬ ಪ್ರತಿಭಾವಂತ ವ್ಯಂಗ್ಯಚಿತ್ರಕಾರ. ಅವರ ವ್ಯಂಗ್ಯಚಿತ್ರಗಳು ನೇರವಾಗಿ ನೋಡುಗರ ಹೃದಯ ತಟ್ಟುತ್ತವೆ’ ಎಂಬುದು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ. ನರೇಂದ್ರ ಅವರ ಮಾತು.



ಲಿಯು ಕಿಯಾಂಗ್

‘ಲಿಯು ಕಿಯಾಂಗ್ ಅವರ ಬಹುತೇಕ ವ್ಯಂಗ್ಯಚಿತ್ರಗಳಲ್ಲಿ ಅಕ್ಷರಗಳ ವಿವರವಿಲ್ಲ. ಯುರೋಪಿಯನ್‌ ವ್ಯಂಗ್ಯಚಿತ್ರಕಾರರಂತೆ ಚೀನಾದ ವ್ಯಂಗ್ಯಚಿತ್ರಕಾರರೂ ಚಿತ್ರ ಮತ್ತು ಬಣ್ಣಗಳ ಮೂಲಕವೇ ತಮ್ಮ ಸಂದೇಶವನ್ನು ಸಮರ್ಥವಾಗಿ ದಾಟಿಸುತ್ತಾರೆ. ಇಂತಹ 50 ವಿಶಿಷ್ಟ ವ್ಯಂಗ್ಯಚಿತ್ರಗಳನ್ನು ಪ್ರದರ್ಶನಕ್ಕೆ

ಆಯ್ಕೆ ಮಾಡಿದ್ದೇವೆ’ ಎನ್ನುತ್ತಾರೆ ಅವರು.

ಲಿಯು ಕಿಯಾಂಗ್ ಸ್ವಂತ ಶ್ರಮದಿಂದ ವರ್ಣಚಿತ್ರಕಲೆಯನ್ನು ಕಲಿತವರು. 2014ರಲ್ಲಿ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ ಅವರಿಗೆ ಕಳೆದ ವರ್ಷ ‘ಮಾಯಾ ಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಸ್ಪರ್ಧೆ’ಯಲ್ಲಿ ದ್ವಿತೀಯ ಬಹುಮಾನ ಲಭಿಸಿದೆ. ಅನೇಕ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ಅವರ ವ್ಯಂಗ್ಯಚಿತ್ರಗಳಿಗೆ ಬಹುಮಾನ ಸಂದಿದೆ.



ಲಿಯು ಕಿಯಾಂಗ್ ರಚಿಸಿರುವ ಹನಿ ನೀರನ್ನು ಭಾಗ ಮಾಡಿ ಮಕ್ಕಳಿಗೆ ಕೊಡಲು ಕತ್ತಿ ಹಿಡಿದು ನಿಂತಿರುವ ತಾಯಿಯ ಚಿತ್ರ ಭೀಕರ ಭವಿಷ್ಯವನ್ನು ಕಣ್ಣ ಮುಂದೆ ನಿಲ್ಲಿಸುವಂತಿದೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕಾದ ಅಗತ್ಯ ಹಾಗೂ ವಿಶ್ವಶಾಂತಿಯ ಆಶಯ ಇನ್ನೂ ಸಾಕಾರವಾಗದಿರುವ ದುರಂತವನ್ನು ಅವರ ಪಾರಿವಾಳದ ಚಿತ್ರ ಸಮರ್ಥವಾಗಿ ನಿರೂಪಿಸುತ್ತದೆ. ವಿಶ್ವಸಂಸ್ಥೆಯ ಲಾಂಛನದೊಂದಿಗೆ ಹಸಿವಿನ ಬೇಗೆಯನ್ನು ಹಿಡಿದಿಡುವ ಚಿತ್ರ ಮನಕಲಕುವಂತಿದೆ.

ಜನವರಿ 6ರಿಂದ 20ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಪ್ರದರ್ಶನವಿರಲಿದೆ. ಭಾನುವಾರ ಪ್ರದರ್ಶನವಿರುವುದಿಲ್ಲ‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.