ಶನಿವಾರ, ಜೂಲೈ 4, 2020
21 °C
ಇಂದಿನಿಂದ ಭಾರತ–ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್‌

ಇತಿಹಾಸ ಬರೆಯಲು ಕೊಹ್ಲಿ ಪಡೆ ಕಾತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸ ಬರೆಯಲು ಕೊಹ್ಲಿ ಪಡೆ ಕಾತರ

ಕೇಪ್‌ಟೌನ್‌: ಹೊಸ ವರ್ಷದ ಆರಂಭ ದಲ್ಲಿ ಕನಸಿನ ಮೂಟೆ ಹೊತ್ತುಕೊಂಡು ಇಲ್ಲಿಗೆ ಬಂದಿಳಿದಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಹೊಸ ಇತಿಹಾಸ ಬರೆಯುವ ಹುಮ್ಮಸ್ಸಿನಲ್ಲಿದೆ.

ತವರಿನ ಅಂಗಳದಲ್ಲಿ ಸತತ ಸರಣಿಗಳನ್ನು ಗೆದ್ದು ದಾಖಲೆಯ ಗೋಪುರ ಕಟ್ಟಿದ್ದ ಭಾರತ ತಂಡ ಈಗ ದಕ್ಷಿಣ ಆಫ್ರಿಕಾ ನೆಲದಲ್ಲಿ ತನ್ನ ಹೆಜ್ಜೆಗುರುತು ಮೂಡಿಸಿಕೊಳ್ಳುವ ತವಕದಲ್ಲಿದೆ. ಹರಿಣಗಳ ನಾಡಿನ ಎದುರಿನ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ.

ಮಹಾತ್ಮಾ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಗೌರವಾರ್ಥ ನಡೆಯುತ್ತಿರುವ ‘ಫ್ರೀಡಂ ಸರಣಿ’ ಇದಾಗಿದೆ. ಒಟ್ಟು ಮೂರು ಟೆಸ್ಟ್, ಆರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ.

2015ರಲ್ಲಿ ಭಾರತದಲ್ಲಿ ಈ ಸರಣಿ ನಡೆದಿತ್ತು. ಆಗ ಕೊಹ್ಲಿ ಬಳಗವು ಪ್ರಶಸ್ತಿ ಗೆದ್ದಿತ್ತು. ಈಗ ಟೆಸ್ಟ್‌ ಕ್ರಿಕೆಟ್‌ನ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ನಡುವಣ ಈ ಸರಣಿಯು ಕೂತಹಲದ ಗಣಿಯಾಗಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಜಯಿಸುವ ತಂಡದ ಕನಸು ಇನ್ನೂ ಸಾಕಾರಗೊಂಡಿಲ್ಲ. 1992ರಿಂದ 2013–14ರ ಅವಧಿಯಲ್ಲಿ ಭಾರತ, ಹರಿಣಗಳ ನಾಡಿನಲ್ಲಿ ಒಟ್ಟು ಆರು ಸರಣಿಗಳನ್ನು ಆಡಿದೆ. ಈ ಪೈಕಿ ಆತಿಥೇಯ ತಂಡ ಐದು ಬಾರಿ ಕಿರೀಟ ಮುಡಿಗೇರಿಸಿಕೊಂಡಿದ್ದು, ಒಂದ ರಲ್ಲಿ ಉಭಯ ತಂಡಗಳು ಪ್ರಶಸ್ತಿ ಹಂಚಿ ಕೊಂಡಿವೆ. ಈ ಅವಧಿಯಲ್ಲಿ ಆಡಿರುವ 17 ಟೆಸ್ಟ್ ಪಂದ್ಯಗಳ ಪೈಕಿ ಭಾರತ ಗೆದ್ದಿರುವುದು ಎರಡರಲ್ಲಿ ಮಾತ್ರ. ಹೀಗಾಗಿ ಈ ಬಾರಿಯೂ ವಿರಾಟ್‌ ಪಡೆಗೆ ಅಗ್ನಿಪರೀಕ್ಷೆ ಎದುರಾಗುವ ಸಾಧ್ಯತೆ ಇದೆ.

ಬ್ಯಾಟಿಂಗ್‌ ಶಕ್ತಿ: ಭಾರತ ತಂಡ ಬ್ಯಾಟಿಂಗ್‌ನಲ್ಲಿ ಬಲಯುತವಾಗಿದೆ. ಶಿಖರ್‌ ಧವನ್‌, ಮುರಳಿ ವಿಜಯ್‌, ಚೇತೇಶ್ವರ ಪೂಜಾರ, ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವೃದ್ಧಿ ಮಾನ್‌ ಸಹಾ, ಪಾರ್ಥೀವ್‌ ಪಟೇಲ್‌ ಮತ್ತು ಅಜಿಂಕ್ಯ ರಹಾನೆ  ದಿಟ್ಟ ಆಟ ಆಡಿ ತಂಡಕ್ಕೆ ನೆರವಾಗಬಲ್ಲ ಸಮರ್ಥರಾಗಿದ್ದಾರೆ. ಇವರ ಪೈಕಿ ಆಡುವ ಬಳಗದಲ್ಲಿ ಯಾರಿಗೆ ಸ್ಥಾನ ನೀಡಬೇಕೆಂಬುದು ಈಗ ಕೋಚ್‌ ರವಿಶಾಸ್ತ್ರಿ ಮತ್ತು ನಾಯಕ ಕೊಹ್ಲಿಗೆ ಸವಾಲಾಗಿದೆ.

ಆರಂಭಿಕರ ಸ್ಥಾನಕ್ಕೆ ಮುರಳಿ ವಿಜಯ್‌, ಧವನ್‌ ಮತ್ತು ಕರ್ನಾಟಕದ ರಾಹುಲ್‌ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಇವರು ಹಿಂದಿನ ಸರಣಿ ಗಳಲ್ಲಿ ಶ್ರೇಷ್ಠ ಆಟ ಆಡಿದ್ದಾರೆ. ಹೀಗಾಗಿ ಇನಿಂಗ್ಸ್‌ ಆರಂಭಿಸುವ ಅವಕಾಶ ಯಾರಿಗೆ ಸಿಗುತ್ತದೆ ಎಂಬ ಕುತೂಹಲ ಗರಿಗೆದರಿದೆ.

ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಪೂಜಾರ ಮತ್ತು ನಾಯಕ ಕೊಹ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ನಿಶ್ಚಿತ. ಹೋದ ವರ್ಷ ಟೆಸ್ಟ್‌ನಲ್ಲಿ 1000 ರನ್‌ ಗಳಿಸಿದ ಸಾಧನೆ ಮಾಡಿದ್ದ ಇವರು ಹರಿಣಗಳ ನಾಡಿನಲ್ಲೂ ರನ್‌ ಪ್ರವಾಹ ಹರಿಸುವ ಆಲೋಚನೆಯಲ್ಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಗಳಿಸಲು ರೋಹಿತ್‌, ರಹಾನೆ, ವೃದ್ಧಿ ಮಾನ್‌ ಮತ್ತು ಪಾರ್ಥೀವ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬೌಲಿಂಗ್‌ನಲ್ಲೂ ಭಾರತ ಬಲಯುತವಾಗಿದೆ. ಭುವ ನೇಶ್ವರ್‌ ಕುಮಾರ್‌, ಮಹಮ್ಮದ್‌ ಶಮಿ, ಇಶಾಂತ್‌ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ ಮತ್ತು ಉಮೇಶ್‌ ಯಾದವ್‌, ದಕ್ಷಿಣ ಆಫ್ರಿಕಾದ ಬೌನ್ಸಿ ಪಿಚ್‌ಗಳಲ್ಲಿ ಬಿರುಗಾಳಿ ವೇಗ ದಲ್ಲಿ ದಾಳಿ ನಡೆಸಬಲ್ಲರು. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಬಲವೂ ತಂಡದ ಬೆನ್ನಿಗಿದೆ. ಆರ್‌.ಅಶ್ವಿನ್‌, ಪ್ರವಾಸಿ ಪಡೆಯ ಸ್ಪಿನ್‌ ಅಸ್ತ್ರವಾಗಿದ್ದಾರೆ.

ಗೆಲುವಿನ ಓಟ ಮುಂದುವರಿಸುವ ಗುರಿ: ದಕ್ಷಿಣ ಆಫ್ರಿಕಾ ತಂಡ ಭಾರತದ ಎದುರಿನ ಸರಣಿ ಜಯದ ಓಟವನ್ನು ಮುಂದುವರಿಸುವ ವಿಶ್ವಾಸ ಹೊಂದಿದೆ.

ನಾಯಕ ಪ್ಲೆಸಿ, ಡೀನ್‌ ಎಲ್ಗರ್‌, ಹಾಶೀಮ್‌ ಆಮ್ಲಾ, ಎಬಿ ಡಿವಿಲಿಯರ್ಸ್‌, ಕ್ವಿಂಟನ್‌ ಡಿ ಕಾಕ್‌ ಅವರು ಪ್ರವಾಸಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಬಲ್ಲರು.

ಸುಮಾರು ಒಂದು ವರ್ಷ ವಿಶ್ರಾಂತಿ ಪಡೆದಿದ್ದ ಡೇಲ್‌ ಸ್ಟೇಯ್ನ್‌ ಅವರ ಸತ್ವಪರೀಕ್ಷೆಯೂ ಈ ಸರಣಿಯಲ್ಲಿ ಆಗಲಿದೆ. ಹೋದ ವರ್ಷ ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಸ್ಟೇಯ್ನ್ ದೀರ್ಘ ವಿಶ್ರಾಂತಿ ಪಡೆದಿದ್ದರು. ಮಾರ್ನ್‌ ಮಾರ್ಕೆಲ್‌, ಕಗಿಸೊ ರಬಾಡ, ಕೊಹ್ಲಿ ಪಡೆಯ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಸ್ಪಿನ್ನರ್‌ ಕೇಶವ್‌ ಮಹಾರಾಜ್‌ ಕೂಡ ಮೋಡಿ ಮಾಡಲು ಕಾಯುತ್ತಿದ್ದಾರೆ.

ಸರಣಿ ಸೋತರೂ ಅಗ್ರಸ್ಥಾನಕ್ಕಿಲ್ಲ ಕುತ್ತು

ಭಾರತ ತಂಡ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿ ಸೋತರೂ ಐಸಿಸಿ ತಂಡಗಳ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲೇ ಇರಲಿದೆ. ಎರಡನೇ ಸ್ಥಾನದಲ್ಲಿರುವ ಹರಿಣಗಳ ನಾಡಿನ ತಂಡ 3–0ರಿಂದ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದರೆ, ಭಾರತದೊಟ್ಟಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ.

‘ಭಾರತದ ಖಾತೆಯಲ್ಲಿ ಸದ್ಯ 124 ಪಾಯಿಂಟ್ಸ್‌ ಇದೆ. ಸರಣಿ ಸೋತರೆ ಇದು 118ಕ್ಕೆ ಕುಸಿಯಲಿದೆ.  111 ಪಾಯಿಂಟ್ಸ್‌ ಹೊಂದಿರುವ ಫಾಫ್‌ ಡು ಪ್ಲೆಸಿ ಪಡೆ ಮೂರೂ ಪಂದ್ಯಗಳನ್ನೂ ಗೆದ್ದರೆ ಪಾಯಿಂಟ್ಸ್‌ 118ಕ್ಕೆ ಹೆಚ್ಚಲಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಒಂದು ವೇಳೆ ಭಾರತ ತಂಡ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದರೆ, ವಿರಾಟ್‌ ಕೊಹ್ಲಿ ಪಡೆ ಒಟ್ಟು ಪಾಯಿಂಟ್ಸ್‌ ಅನ್ನು 128ಕ್ಕೆ ಹೆಚ್ಚಿಸಿಕೊಳ್ಳಲಿದೆ. ದಕ್ಷಿಣ ಆಫ್ರಿಕಾದ ಪಾಯಿಂಟ್ಸ್‌ 107ಕ್ಕೆ ಕುಸಿಯಲಿದೆ.

ತಂಡಗಳು ಇಂತಿವೆ

ಭಾರತ:
ವಿರಾಟ್‌ ಕೊಹ್ಲಿ (ನಾಯಕ), ಮುರಳಿ ವಿಜಯ್‌, ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್‌ ಶರ್ಮಾ, ವೃದ್ಧಿಮಾನ್‌ ಸಹಾ (ವಿಕೆಟ್‌ ಕೀಪರ್‌), ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ಪಾರ್ಥೀವ್‌ ಪಟೇಲ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಮಹಮ್ಮದ್‌ ಶಮಿ, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ.

ದಕ್ಷಿಣ ಆಫ್ರಿಕಾ: ಫಾಫ್‌ ಡು ಪ್ಲೆಸಿ (ನಾಯಕ), ಡೀನ್‌ ಎಲ್ಗರ್‌, ಏಡನ್‌ ಮಾರ್ಕರಾಮ್‌, ಹಾಶೀಮ್‌ ಆಮ್ಲಾ, ಎಬಿ ಡಿವಿಲಿಯರ್ಸ್‌, ತೆಂಬಾ ಬವುಮಾ, ಕ್ವಿಂಟನ್‌ ಡಿ ಕಾಕ್‌ (ವಿಕೆಟ್‌ ಕೀಪರ್‌), ತೆವುನಿಸ್‌ ಡಿ ಬ್ರ್ಯೂನ್‌, ವರ್ನಾನ್‌ ಫಿಲ್ಯಾಂಡರ್‌, ಕ್ರಿಸ್‌ ಮೊರಿಸ್‌, ಆ್ಯಂಡಿಲೆ ಪೆಹ್ಲುಕವಾಯೊ, ಕೇಶವ ಮಹಾರಾಜ್‌, ಕಗಿಸೊ ರಬಾಡ, ಡೇಲ್‌ ಸ್ಟೇಯ್ನ್‌ ಮತ್ತು ಮಾರ್ನೆ ಮಾರ್ಕೆಲ್‌.

ಅಂಪೈರ್‌ಗಳು: ಮೈಕಲ್‌ ಗೌಗ್‌ ಮತ್ತು ರಿಚರ್ಡ್‌ ಕೆಟಲ್‌ಬರೊ (ಇಬ್ಬರೂ ಇಂಗ್ಲೆಂಡ್‌).

ಟಿ.ವಿ. ಅಂಪೈರ್‌: ಪಾಲ್‌ ರೆಯಿಫೆಲ್‌ (ಆಸ್ಟ್ರೇಲಿಯಾ).

ಪಂದ್ಯದ ರೆಫರಿ: ಕ್ರಿಸ್‌ ಬ್ರಾಡ್‌ (ಇಂಗ್ಲೆಂಡ್‌).

ಆರಂಭ: ಮಧ್ಯಾಹ್ನ 2ಕ್ಕೆ.ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.