ಬುಧವಾರ, ಆಗಸ್ಟ್ 5, 2020
21 °C

ರೇರಾ: ನೋಂದಣಿಯಾಗದ 780 ಯೋಜನೆ ಪತ್ತೆ

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ರೇರಾ: ನೋಂದಣಿಯಾಗದ 780 ಯೋಜನೆ ಪತ್ತೆ

ಬೆಂಗಳೂರು: ನಿವೇಶನ, ಫ್ಲ್ಯಾಟ್ ಖರೀದಿಸುವವರ ರಕ್ಷಣೆಗಾಗಿ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೇರಾ) ಅಡಿ, ರಾಜ್ಯದಲ್ಲಿ ನಿರ್ಮಾಣ ಹಂತದಲ್ಲಿರುವ 780 ಯೋಜನೆಗಳು ನೋಂದಣಿ ಮಾಡಿಕೊಂಡಿಲ್ಲ.

ಇವುಗಳಲ್ಲಿ ಹೆಚ್ಚು ಯೋಜನೆಗಳು ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳಲ್ಲಿವೆ. ಆನಂತರದ ಸ್ಥಾನದಲ್ಲಿ ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ– ಧಾರವಾಡಗಳಿವೆ. ನೋಂದಣಿ ಮಾಡಿಕೊಳ್ಳದ ಯೋಜನೆಗಳ ಡೆವಲಪರ್ಸ್ (ಬಿಲ್ಡರ್ಸ್), ಪ್ರಮೋಟರ್ಸ್‌ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ರೇರಾ ಪ್ರಾಧಿಕಾರ ತೀರ್ಮಾನಿಸಿದೆ.

‘ನೋಂದಣಿ ಮಾಡಿಕೊಳ್ಳದ ಯೋಜನೆಗಳ ಸಂಪೂರ್ಣ ವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಇವುಗಳಿಗೆ ಸಂಬಂಧಿಸಿದ ವಿಚಾರಣೆ ಮುಂದುವರಿದಿದೆ. ಹೀಗಾಗಿ, ಈ ಯೋಜನೆಗಳ ಪ್ರಮೋಟರ್ಸ್‌ ಜೊತೆ ವ್ಯವಹರಿಸಿದರೆ ಅದಕ್ಕೆ ಗ್ರಾಹಕರೇ ಹೊಣೆಯಾಗಬೇಕಾಗುತ್ತದೆ’ ಎಂದು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌ ಎಚ್ಚರಿಕೆ ನೀಡಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ಗೃಹ ನಿರ್ಮಾಣ ಸಹಕಾರ ಸಂಘಗಳೂ (ಹೌಸಿಂಗ್‌ ಕೋ– ಆಪರೇಟಿವ್‌ ಸೊಸೈಟಿ) ರೇರಾ ವ್ಯಾಪ್ತಿಯಡಿ ನೋಂದಣಿ ಮಾಡಿಕೊಳ್ಳಬೇಕು. ಈವರೆಗೆ, ಜ್ಞಾನಗಂಗಾ ಹೌಸಿಂಗ್‌ ಸೊಸೈಟಿ, ಸರ್ಕಾರಿ ನೌಕರರ ಹೌಸಿಂಗ್‌ ಕೋ– ಆಪರೇಟಿವ್‌ ಸೊಸೈಟಿ ಮತ್ತು ಟೆಲಿಕಾಂ ಸೆಂಟ್ರಲ್‌ ಗವರ್ನಮೆಂಟ್‌ ಹೌಸಿಂಗ್‌ ಸೊಸೈಟಿ ಎಂಬ ಮೂರು ಗೃಹ ನಿರ್ಮಾಣ ಸಹಕಾರ ಸಂಘಗಳು ಮಾತ್ರ ನೋಂದಣಿ ಮಾಡಿಕೊಂಡಿವೆ ಎಂದು ಮಾಹಿತಿ ನೀಡಿದರು.

‘ರೇರಾ ಸೆಕ್ಷನ್‌ 2ರಲ್ಲಿ ಯಾರು ಪ್ರಮೋಟರ್ಸ್‌ ಎಂಬ ಬಗ್ಗೆ ವಿವರಣೆ ಇದೆ. ಈ ಕಾಯ್ದೆಯಡಿ ಗೃಹ ನಿರ್ಮಾಣ ಸಹಕಾರ ಸಂಘಗಳೂ ಬರುತ್ತವೆ ಎನ್ನುವ ಅಂಶವೂ ಸೇರಿದೆ. ಅಲ್ಲದೆ, ವಿವಿಧ ರಾಜ್ಯಗಳಲ್ಲಿ ರೇರಾ ಸಂಬಂಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಆದೇಶದಡಿ ರಚನೆಯಾದ ಮುಂಬೈ– ಹೈಕೋರ್ಟ್‌ ದ್ವಿಸದಸ್ಯ ಪೀಠ ಡಿ. 6ರಂದು ಸ್ಪಷ್ಟ ತೀರ್ಪು ನೀಡಿದೆ’ ಎಂದರು.

‘ಪ್ರಾಧಿಕಾರದಲ್ಲಿ ಯಾರೆಲ್ಲ ನೋಂದಣಿ ಮಾಡಿಕೊಳ್ಳಬೇಕು ಎಂಬ ಬಗ್ಗೆಯೂ ಕಾಯ್ದೆ ಮತ್ತು ಮುಂಬೈ ಹೈಕೋರ್ಟ್‌ ಪೀಠ ನೀಡಿದ ತೀರ್ಪು ಸ್ಪಷ್ಟವಾಗಿ ತಿಳಿಸಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಕಾನೂನು ಬಾಹಿರ ವ್ಯವಹಾರಕ್ಕೆ ರೇರಾ ಸಂಪೂರ್ಣ ಕಡಿವಾಣ ಹಾಕಲಿದೆ. ಈ ಕ್ಷೇತ್ರದಲ್ಲಿ ಹಣ ಹೂಡುವ ಗ್ರಾಹಕರ ಹಿತವನ್ನೂ ಕಾಯಲಿದೆ’ ಎಂದು ವಿವರಿಸಿದರು.

ನಿಯಮ ಉಲ್ಲಂಘಿಸಿದ ಗೃಹ ನಿರ್ಮಾಣ ಸಹಕಾರ ಸಂಘಗಳಿಂದಲೂ ಕಾನೂನು ಪ್ರಕಾರ ಒಟ್ಟು ಯೋಜನಾ ವೆಚ್ಚದ ಶೇ 10ರಷ್ಟು ಹಣ ಲೆವಿಯಾಗಿ ವಸೂಲು ಮಾಡಲು ಅವಕಾಶವಿದೆ.

ರಿಯಲ್‌ ಎಸ್ಟೇಟ್‌ ಏಜೆಂಟರು ಈ ಕಾಯ್ದೆ ವ್ಯಾಪ್ತಿಗೆ ಬರುತ್ತಿದ್ದು, ಅವರ ನೋಂದಣಿಯೂ ಕಡ್ಡಾಯ. ಈ ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದು.

ವಂಚಿತರಿಂದ ಪ್ರಾಧಿಕಾರಕ್ಕೆ ದೂರು

ಮನೆ, ಫ್ಲ್ಯಾಟ್, ನಿವೇಶನ ಖದೀದಿಸಿದ ಅನೇಕರು ವಂಚನೆಗೆ ಒಳಗಾಗಿರುವ ಬಗ್ಗೆ ಸಾಕಷ್ಟು ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ನೋಂದಣಿಯಾದ ಯೋಜನೆಗಳಲ್ಲಿ ಬಂಡವಾಳ ಹೂಡಿ ವಂಚನೆಗೆ ಒಳಗಾದರೆ ಪ್ರಾಧಿಕಾರ ರಕ್ಷಣೆ ನೀಡಲಿದೆ.

ರೇರಾದಡಿ ರೂಪಿಸಿರುವ ನಿಯಮಗಳಿಂದ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಕಾಲಮಿತಿ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಬಿಲ್ಡರ್‍ಗಳಿಗೆ ನೆರವಾದಂತೆ ಗ್ರಾಹಕರಿಗೂ ಇದರಿಂದ ಅನುಕೂಲವಾಗಲಿದೆ.

ಯೋಜನೆಯ ಶೇ 10ರಷ್ಟು ದಂಡ, ಜೈಲು ಶಿಕ್ಷೆ

ಕನಿಷ್ಠ 500 ಚದರ ಮೀಟರ್ ವಿಸ್ತೀರ್ಣ ಅಥವಾ 8 ಫ್ಲ್ಯಾಟ್ ಇರುವ ಎಲ್ಲ ವಸತಿ ಯೋಜನೆಗಳಿಗೆ ರೇರಾ ಅನ್ವಯಿಸುತ್ತದೆ. ಪ್ರಾಧಿಕಾರಕ್ಕೆ ಅಗತ್ಯ ದಾಖಲೆಗಳಲ್ಲಿ ಯಾವುದೇ ದಾಖಲೆಗಳನ್ನು ನೀಡದೆ ಇದ್ದರೆ ಅಥವಾ ನಿಯಮ ಪಾಲಿಸದಿದ್ದರೆ ಅಂಥ ಏಜೆಂಟ್ ಮತ್ತು ಡೆವಲಪರ್ಸ್‌ಗಳಿಗೆ ನಿರ್ದಿಷ್ಟ ಯೋಜನೆಯ ಶೇ 10ರಷ್ಟು ದಂಡ ಮತ್ತು ತಲಾ ಒಂದು ಮತ್ತು ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಕಪಿಲ್‌ ಮೋಹನ್‌ ಎಚ್ಚರಿಕೆ ನೀಡಿದರು.

ಪ್ರಾಧಿಕಾರದಲ್ಲಿ ನೋಂದಣಿ ಮಾಡದ ಹೊರತು ಡೆವಲಪರ್ಸ್‌ಗಳು ಯೋಜನೆಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಈಗಾಗಲೇ ಶೇ 60ಕ್ಕಿಂತ ಹೆಚ್ಚು ಕಟ್ಟಿ ಮುಗಿಸಿರುವ ಕಟ್ಟಡಗಳಿಗೆ ವಿನಾಯಿತಿ ನೀಡಲಾಗಿದೆ. ಹೊಸತಾಗಿ ಆರಂಭಗೊಂಡಿರುವ ಮತ್ತು ಇನ್ನು ಮುಂದೆ ಆರಂಭವಾಗುವ ಎಲ್ಲ ಯೋಜನೆಗಳಿಗೆ ರೇರಾ ಅನ್ವಯಿಸುತ್ತದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.