ಬುಧವಾರ, ಜೂಲೈ 8, 2020
23 °C

ಮೋರಿಯಲ್ಲಿ ಮಹಿಳೆ ಶವ: ಕೊಲೆ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋರಿಯಲ್ಲಿ ಮಹಿಳೆ ಶವ: ಕೊಲೆ ಶಂಕೆ

ಬೆಂಗಳೂರು: ನೀರಿನ ಮೋಟರ್ ಚಾಲೂ ಮಾಡಿ ಬರುವುದಾಗಿ ಮನೆಯಿಂದ ಹೊರ ಹೋಗಿದ್ದ ಭಾಗ್ಯಮ್ಮ (49) ಎಂಬುವರು, ಹೆಗ್ಗನಹಳ್ಳಿ ಸಮೀಪದ ಶಿವಾನಂದನಗರದ ರಾಜಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

‘ಆಸ್ತಿ ವಿಚಾರಕ್ಕೆ ನನ್ನ ಮಲತಾಯಿ ಹಾಗೂ ಅವರ ಮಕ್ಕಳೇ ನನ್ನ ತಾಯಿಯನ್ನು ಕೊಂದಿದ್ದಾರೆ’ ಎಂದು ಮೃತರ ಮಗ ಶ್ರೀನಿವಾಸ್ ದೂರಿದ್ದಾರೆ. ಆದರೆ, ಈ ಆರೋಪ ನಿರಾಕರಿಸಿರುವ ಮಲತಾಯಿ ದೊಡ್ಡಮ್ಮ, ‘ಭಾಗ್ಯಮ್ಮ ಕಾಲು ಜಾರಿ ಮೋರಿಗೆ ಬಿದ್ದಿರಬಹುದು. ಅವರ ಸಾವಿಗೂ, ನಮಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ. ರಾಜಗೋಪಾಲನಗರ ಪೊಲೀಸರು ಸದ್ಯ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.

ಪುತ್ರ ಶ್ರೀನಿವಾಸ್ ಜತೆ ಶಿವಾನಂದ ನಗರದಲ್ಲಿ ನೆಲೆಸಿದ್ದ ಭಾಗ್ಯಮ್ಮ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೋಟರ್ ಚಾಲೂ ಮಾಡಲು ಹೊರಗೆ ಬಂದಿದ್ದರು. ಅರ್ಧ ತಾಸು ಕಳೆದರೂ ತಾಯಿ ವಾಪಸಾಗದಿದ್ದಾಗ, ಅವರನ್ನು ಹುಡುಕಿಕೊಂಡು ಮಗ ಸಹ ಹೊರ ಬಂದಿದ್ದರು. ಆಗ ರಾಜಕಾಲುವೆಯಲ್ಲಿ ಶವ ಪತ್ತೆಯಾಗಿದ್ದು, ಶ್ರೀನಿವಾಸ್ ಸ್ಥಳೀಯರ ನೆರವಿನಿಂದ ದೇಹವನ್ನು ಮೇಲೆತ್ತಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಆಸ್ತಿ ವಿವಾದ: ‘ನನ್ನ ತಂದೆ ಚಡ್ಡಿತಿಮ್ಮಯ್ಯ ಮೊದಲು ದೊಡ್ಡಮ್ಮ ಎಂಬುವರನ್ನು ಮದುವೆಯಾಗಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ. ನನ್ನ ತಾಯಿ ಅವರಿಗೆ ಎರಡನೇ ಹೆಂಡತಿ. ತಮ್ಮ ಹೆಸರಿನಲ್ಲಿದ್ದ ಎಂಟು ಮನೆಗಳು ಹಾಗೂ ಒಂದು ಎಕರೆ ಜಮೀನನ್ನು ಇಬ್ಬರು ಪತ್ನಿಯರಿಗೂ ಸಮನಾಗಿ ಹಂಚಿದ ತಂದೆ, 10 ವರ್ಷಗಳ ಹಿಂದೆ ಮನೆ ಬಿಟ್ಟು ಹೋದರು. ಅವರು ಎಲ್ಲಿದ್ದಾರೆ ಎಂಬುದು ಈಗಲೂ ಗೊತ್ತಿಲ್ಲ’ ಎಂದು ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ತಿ ಹಂಚಿಕೆ ವಿಚಾರಕ್ಕೆ ಮಲತಾಯಿ ಮಕ್ಕಳು ಇತ್ತೀಚೆಗೆ ಜಗಳ ಪ್ರಾರಂಭಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ನಾವು ದಾವೆ ಹೂಡಿದೆವು. ವಿಚಾರಣೆ ಪೂರ್ಣಗೊಂಡು ಅರ್ಧ ಎಕರೆ ಜಮೀನು ನನ್ನ ತಾಯಿಯ ಪಾಲಿಗೆ ಬಂತು. ಇದರಿಂದ ಮಲತಾಯಿ ಹಾಗೂ ಮಕ್ಕಳು ಕುಪಿತಗೊಂಡಿದ್ದರು.’

‘ಅದೇ ದ್ವೇಷದಲ್ಲಿ ಮಧ್ಯಾಹ್ನ ತಾಯಿಯ ಕೈ–ಕಾಲುಗಳನ್ನು ತಿರುವಿ ಕೊಂದಿದ್ದಾರೆ. ನಂತರ ದೇಹವನ್ನು ರಾಜಕಾಲುವೆಗೆ ಎಸೆದಿದ್ದಾರೆ. ಹೀಗಾಗಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಂತೆ ಕೋರಿ ಪೊಲೀಸರಿಗೆ ದೂರು ಕೊಟ್ಟಿದ್ದೇವೆ’ ಎಂದು ಶ್ರೀನಿವಾಸ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.