ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಪೇಟೆ: ಶಾಸಕರಿಗೆ ಟಿಕೆಟ್‌ ತಪ್ಪುವ ಭೀತಿ?

Last Updated 5 ಜನವರಿ 2018, 5:56 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಪೇಟೆ ಶಾಸಕ ನಾರಾಯಣಗೌಡ ಅವರಿಗೆ ಜೆಡಿಎಸ್‌ ಟಿಕೆಟ್‌ ತಪ್ಪುವ ಭೀತಿ ಎದುರಾಗಿದ್ದು ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಕ್ಷೇತ್ರದಲ್ಲಿ ದಟ್ಟವಾಗಿದೆ.

ಕ್ಷೇತ್ರದಲ್ಲಿ ನಾರಾಯಣಗೌಡರಿಗೆ ಟಿಕೆಟ್‌ ತಪ್ಪಿಸುವ ಕಸರತ್ತುಗಳು ಜೋರಾಗೇ ನಡೆಯುತ್ತಿವೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಜೊತೆಗೆ ಉತ್ತಮ ಸಂಪರ್ಕ ಹೊಂದಿರುವ ಮಾಜಿ ಶಾಸಕ ಬಿ.ಪ್ರಕಾಶ್‌, ಕ್ಷೇತ್ರದಲ್ಲಿ ಜನ ಬೆಂಬಲ ಹೊಂದಿರುವ ಬಿ.ಎಲ್‌.ದೇವರಾಜು, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬಕ್ಕೆ ಹತ್ತಿರವಾಗಿರುವ ಬಸ್‌ ಕೃಷ್ಣೇಗೌಡ ಮುಂತಾದವರು ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದು ನಾರಾಯಣಗೌಡರಿಗೆ ಈ ಬಾರಿ ಟಿಕೆಟ್‌ ಪಡೆಯುವುದು ಬಿಸಿತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಅವರು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ ಎಂದು ಕ್ಷೇತ್ರದ ಜನರು ಬಣ್ಣಿಸುತ್ತಾರೆ.

‘ನಾರಾಯಣಗೌಡರಿಗೆ ನಾನೇ ರಾಜಕೀಯ ಗುರು, ಅವರನ್ನು ನಾನೇ ರಾಜಕೀಯಕ್ಕೆ ಕರೆ ತಂದೆ. ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್‌ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ’ ಎಂದು ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತಿರುವ ಬಸ್‌ ಕೃಷ್ಣೇಗೌಡ ಶಾಸಕರ ಆಸೆಗೆ ತಣ್ಣೀರು ಸುರಿಯಲು ಮುಂದಾಗಿದ್ದಾರೆ. ಜೊತೆಗೆ ಚಂದ್ರಶೇಖರ ಸ್ವಾಮೀಜಿಯ ಪೂರ್ವಾಶ್ರಮದ ಸಂಬಂಧಿಯೂ ಆಗಿರುವ ಕೃಷ್ಣೇಗೌಡ, ದೇವೇಗೌಡರ ಕುಟುಂಬದ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಇವು ಟಿಕೆಟ್‌ ಪಡೆಯಲು ಸಹಾಯವಾಗಲಿದೆ ಎಂದು ಕೃಷ್ಣೇಗೌಡರ ಬೆಂಬಲಿಗರು ಹೇಳುತ್ತಾರೆ.

ಮುಂಬೈನಲ್ಲಿ ನಡೆದದ್ದೇನು?
ಮುಂಬೈನಲ್ಲಿ ವ್ಯವಹಾರ ನಡೆ ಸುವ ಶಾಸಕರಾದ ಎನ್‌.ಚಲುವರಾಯ ಸ್ವಾಮಿ, ಜಮೀರ್‌ ಅಹಮದ್ ಹಾಗೂ ನಾರಾಯಣಗೌಡರು ಮೊದಲಿನಿಂದಲೂ ಗೆಳೆಯರು. ಕಳೆದ ತಿಂಗಳು ಮುಂಬೈ ಕುರುಬರ ಸಂಘ ಏರ್ಪಡಿಸಿದ್ದ ಕನಕದಾಸ ಜಯಂತಿಯಲ್ಲಿ ಈ ಮೂವರೂ ಶಾಸಕರು ಒಂದೇ ವೇದಿಯಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪಾಲ್ಗೊಂಡು ಜಯಂತಿ ಉದ್ಘಾಟಿಸಿದ್ದಾರೆ. ನಾರಾಯಣಗೌಡರು ಮುಖ್ಯಮಂತ್ರಿಗಳಿಗೆ ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿದ್ದಾರೆ. ನಾಲ್ವರೂ ನಾಯಕರು ಮುಂಬೈನಲ್ಲಿ ಸಭೆ ನಡೆಸಿ ಕೆ.ಆರ್‌.ಪೇಟೆ ಕ್ಷೇತ್ರದಿಂದ ನಾರಾಯಣಗೌಡರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

‘ಮುಂಬೈನಲ್ಲಿ ಮುಖ್ಯಮಂತ್ರಿ ಸಿದ್ದರಾಯಮ್ಮ, ಚಲುವರಾಯಸ್ವಾಮಿ ಅವರನ್ನು ಭೇಟಿಯಾಗಿದ್ದು ನಿಜ. ಕನಕದಾಸ ಜಯಂತಿಗೆ ಅವರಂತೆ ನಾನೂ ಅತಿಥಿಯಾಗಿ ಪಾಲ್ಗೊಂಡಿದ್ದೆ. ಆದರೆ ರಾಜಕೀಯವಾಗಿ ಯಾವ ಚರ್ಚೆಯೂ ನಡೆಯಲಿಲ್ಲ. ಕಾಂಗ್ರೆಸ್‌ಗೆ ಹೋಗುವ ಅಗತ್ಯ ನನಗಿಲ್ಲ. ಕಾಂಗ್ರೆಸ್‌ ಮುಖಂಡರನ್ನು ಜೆಡಿಎಸ್‌ಗೆ ಕರೆತರುವ ಶಕ್ತಿ ನನ್ನಲ್ಲಿ ಇದೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿ. ಕೆ.ಆರ್‌.ಪೇಟೆಯಲ್ಲಿ ನನ್ನ ಟಿಕೆಟ್‌ ಭದ್ರವಾಗಿದ್ದು ಯಾವ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಶಾಸಕ ನಾರಾಯಣಗೌಡ ತಿಳಿಸಿದರು.

‘ಕಾಂಗ್ರೆಸ್‌ನಲ್ಲಿ ಗೆಲ್ಲುವ ಪ್ರಬಲ ಅಭ್ಯರ್ಥಿಗಳು ಇರುವಾಗ ನಾರಾಯಣಗೌಡರು ನಮ್ಮ ಪಕ್ಷಕ್ಕೆ ಅಗತ್ಯ ಇಲ್ಲ. ಕ್ಷೇತ್ರದಲ್ಲಿ ಶಾಸಕರು ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಜೆಡಿಎಸ್‌ನಿಂದ ಟಿಕೆಟ್‌ ಕೈ ತಪ್ಪುವ ಭೀತಿ ಎದುರಾಗಿದೆ. ಹೀಗಾಗಿ ಅವರು ಕ್ಷೇತ್ರದಲ್ಲಿ ಇಲ್ಲಸಲ್ಲದ ಸುದ್ದಿ ಹರಡಿಸುತ್ತಿದ್ದಾರೆ.’ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ತಿಳಿಸಿದರು.

ಕಾಂಗ್ರೆಸ್‌ ಆಕಾಂಕ್ಷಿಗಳು: ಕೆ.ಬಿ.ಚಂದ್ರಶೇಖರ್‌ ಅವರೇ ಅಭ್ಯರ್ಥಿ ಎಂದು ಹೇಳಲಾಗುತ್ತಿದೆಯಾದರೂ ಪಕ್ಷದ ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಹಣಕಾಸು ನಿಗಮದ ಅಧ್ಯಕ್ಷರಾಗಿರುವ ಎಂ.ಡಿ.ಕೃಷ್ಣಮೂರ್ತಿ ಕಾಂಗ್ರೆಸ್‌ ಟಿಕೆಟ್‌ಗಾಗಿ ರಾಜ್ಯ ಮುಖಂಡರಿಗೆ ಒತ್ತಡ ತಂದಿದ್ದಾರೆ. ಬೆಂಗಳೂರಿನಲ್ಲಿ ಲೆಕ್ಕ ಪರಿಶೋಧಕರಾಗಿರುವ, ಸಂತೇಬಾಚಹಳ್ಳಿ ಹೋಬಳಿಯ ಸಿಂಗನಹಳ್ಳಿ ಗ್ರಾಮದ ಕಿರಣ್‌ಕುಮಾರ್‌  ಟಿಕೆಟ್‌ಗಾಗಿ ಅವಿರತ ಶ್ರಮಿಸುತ್ತಿದ್ದಾರೆ.

ಈಗಾಗಲೇ ನಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ಇವರ ಜೊತೆಗೆ ತಾಲ್ಲೂಕು ಘಟಕದ ಅಧ್ಯಕ್ಷ ಕಿಕ್ಕೇರಿ ಸುರೇಶ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರಕುಮಾರ್‌ ಟಿಕಟರ್‌ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಅಕ್ಕನ ಮಗ ಸಿಂಧಘಟ್ಟ ಅರವಿಂದ್‌, ಬೂಕಳ್ಳಿ ಮಂಜು, ಕೆ.ಜೆ.ವಿಜಯ್‌ ಕುಮಾರ್‌, ದೇವೇಗೌಡ ಮುಂತಾದವರು ಆಕಾಂಕ್ಷಿಯಾಗಿದ್ದಾರೆ. ಆದರೆ ಖ್ಯಾತ ವ್ಯಕ್ತಿಯೊಬ್ಬರನ್ನು ಬೇರೆಡೆಯಿಂದ ಕರೆತಂದು ಅಭ್ಯರ್ಥಿ ಯನ್ನಾಗಿಸುವ ಸುಳಿವನ್ನು ಬಿಜೆಪಿ ಮುಖಂಡರು ನೀಡಿದ್ದಾರೆ.

ರಾಜಕಾರಣ ಎಂ.ಕೃಷ್ಣೇಗೌಡರ ಕ್ಷೇತ್ರವಲ್ಲ

ನಿವೃತ್ತ ಪ್ರಾಚಾರ್ಯ ಪ್ರೊ.ಎಂ.ಕೃಷ್ಣೇಗೌಡ ಕೆ.ಆರ್‌.ಪೇಟೆ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿ ವಿವಿಧೆಡೆ ಹರಿದಾಡುತ್ತಿದೆ. ಆದರೆ ಅದನ್ನು ಕೃಷ್ಣೇಗೌಡರು ನಿರಾಕರಿಸುತ್ತಾರೆ.

‘ರಾಜಕಾರಣ ನನ್ನ ಆಸಕ್ತಿಯ ಕ್ಷೇತ್ರವಲ್ಲ. ವಿಚಾರ, ಹಾಸ್ಯ, ಹರಟೆ, ಸಂಗೀತ, ಸಾಹಿತ್ಯ ನನ್ನ ಆಸಕ್ತಿ. ಯಾರು ಈ ಸುಳ್ಳು ಸುದ್ದಿಯನ್ನು ಹರಡಿಸಿದರೋ ನನಗೆ ಗೊತ್ತಿಲ್ಲ. ಅಷ್ಟಕ್ಕೂ ಪಾಂಡಪುರ ನನ್ನ ತಾಲ್ಲೂಕು. ಇಂತಹ ಸುದ್ದಿಗಳಿಂದ ನನಗೊಂದು ಹೊಸ ಹಾಸ್ಯ ಹುಟ್ಟಿಕೊಂಡಿತಷ್ಟೇ’ ಎಂದು ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT