ಬುಧವಾರ, ಜೂಲೈ 8, 2020
23 °C

ವಿರೋಧದ ನಡುವೆಯೂ ಶೌಚಾಲಯ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರೋಧದ ನಡುವೆಯೂ ಶೌಚಾಲಯ ತೆರವು

ಗುಳೇದಗುಡ್ಡ: ತಾಲ್ಲೂಕಿನ ಕೋಟೆಕಲ್ಲ ಗ್ರಾಮದ ಹುಚ್ಚೇಶ್ವರ ಮಠದ ರಸ್ತೆಯಲ್ಲಿ ಬರುವ ಮಹಿಳೆಯರ ಶೌಚಾಲಯ ಕಟ್ಟಡವನ್ನು ಅಲ್ಲಿನ ಮಹಿಳೆಯರ ಪ್ರತಿಭಟನೆಯ ನಡುವೆಯೂ ಗ್ರಾಮ ಪಂಚಾಯ್ತಿಯವರು ಯಂತ್ರದ ಮೂಲಕ ಗುರುವಾರ ಶೌಚಾಲಯ ಕಟ್ಟಡ ತೆರವುಗೊಳಿಸಿದರು.

ಗ್ರಾಮ ಪಂಚಾಯ್ತಿ ಅಧಿಕಾರಿಗಳು ಯಂತ್ರದ ಮೂಲಕ ಶೌಚಾಲಯ ಕಟ್ಟಡ ತೆರವುಗೊಳಿಸಲು ಮುಂದಾದಾಗ ಅಲ್ಲಿನ ಮಹಿಳೆಯರು ನಾಗವ್ವ ಕುರಿ, ಸಿದ್ದವ್ವ ಶಿರೂರ, ಸಂಗವ್ವ ಯಲ್ಲಪ್ಪ ಬಡಿಗೇರ, ಜಯಶ್ರೀ ಹಡಪದ ಅವರು ಸೇರಿದಂತೆ ಹಲವರು ವಿರೋಧಿಸಿದರು. ‘ಶೌಚಾಲಯ ಕಟ್ಟಡ ತೆರವು ಗೊಳಿಸಿದರೆ ನಾವು ಶೌಚಾಲಯಕ್ಕೆ ಎಲ್ಲಿಗೆ ಹೋಗಬೇಕು. ನಮ್ಮ ಮನೆ ಸಣ್ಣದಿವೆ. ಶೌಚಾಲಯ ಕಟ್ಟಡ ಮಾಡಿಕೊಳ್ಳಲಿಕ್ಕೆ ಮನೆಯಲ್ಲಿ ಜಾಗ ಇಲ್ಲ. ನಮಗೆ ಶೌಚಾಲಯಕ್ಕೆ ಬೇರೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಮಹಿಳೆಯರು ಪಿಡಿಒ ಅವರಲ್ಲಿ ಬೇಡಿಕೊಂಡರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ರೆಹಮಾನ್‌ ಯಳ್ಳಿಗುತ್ತಿ ಮಾತನಾಡಿ, ‘ಗ್ರಾಮದ ಹುಚ್ಚೇಶ್ವರ ಮಠಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ಶೌಚಾಲಯ ಇರುವುದರಿಂದ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಶೌಚಾಲಯ ಕಟ್ಟಡ ತೆರವುಗೊಳಿಸಿದ ಜಾಗದಲ್ಲಿ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸ್ವ–ಸಹಾಯ ಸಂಘಗಳಿಗೆ ಶೆಡ್‌ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

ಪಂಚಾಯ್ತಿ ಪಿಡಿಒ ಸಾವಿತ್ರಿ ಮಾಶ್ಯಾಳ ಮಾತನಾಡಿ, ‘ಗ್ರಾಮದಲ್ಲಿ ಮನೆಗೊಂದು ಶೌಚಾಲಯ ಕಟ್ಟಿಕೊಳ್ಳಲು ಪಂಚಾಯ್ತಿಯಿಂದ ಅನುದಾನ ಕೊಟ್ಟಿದೆ. ಈ ಭಾಗದಲ್ಲಿ ಎಲ್ಲ ಮನೆಗಳಲ್ಲಿ ಶೌಚಾಲಯ ಕಟ್ಟಿಕೊಂಡಿದ್ದಾರೆ. ಶೌಚಾಲಯ ಇಲ್ಲದವರು ಶೌಚಾಲಯ ಕಟ್ಟಿಕೊಳ್ಳಬೇಕು. ಈ ಸಾರ್ವಜನಿಕ ಶೌಚಾಲಯ ತೆರವುಗೊಳಿಸುತ್ತೇವೆ ಎಂದು ಈಗಾಗಲೇ ಕಳೆದ 3–4 ತಿಂಗಳ ಹಿಂದಯೇ ಎಲ್ಲರಿಗೂ ಮೌಖಿಕವಾಗಿ ತಿಳಿಸಲಾಗಿದೆ ಎಂದು ಹೇಳಿದರು.

ಶೌಚಾಲಯ ತೆರುವು ತೊಳಿಸಲು ಪಂಚಾಯ್ತಿ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಮಹಿಳೆಯರು ತಕರಾರು ತೆಗೆಯಲು ಮುಂದಾದರು. ಆಗ ಪಂಚಾಯ್ತಿ ಅಧಿಕಾರಿಗಳು ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಕರೆಸಿದರು. ಪೊಲೀಸ್ ಬಂದೋಬಸ್ತ್‌ನಲ್ಲಿ ಶೌಚಾಲಯ ಕಟ್ಟಡವನ್ನು ಯಂತ್ರದ ಮೂಲಕ ತೆರುವುಗೊಳಿಸಿದರು. ಗ್ರಾಮ ಪಂಚಾಯ್ತಿ ಸದಸ್ಯರು ದೇವರಾಜ ಮಂತ್ರಿ, ಉಮಾ ತಳವಾರ, ಲಕ್ಷ್ಮೀಂಬಾಯಿ ಸೀತಿಮನಿ, ಮಲ್ಲಪ್ಪ ಆಲೂರ, ಹನಮಂತ ಕುಂದರಗಿ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.