ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಪ್ಪಾಜಿ ಜಾತ್ರೆ: ಪಂಕ್ತಿಸೇವೆಗೆ ಭರದ ಸಿದ್ಧತೆ

Last Updated 5 ಜನವರಿ 2018, 9:13 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯ ನಾಲ್ಕನೆಯ ದಿನವಾದ ಶುಕ್ರವಾರ ನಡೆಯಲಿರುವ ಪಂಕ್ತಿಸೇವೆಗೆ ಭರದ ಸಿದ್ಧತೆ ನಡೆದಿದೆ. ಜಾತ್ರೆಯ ಆಚರಣೆಯಲ್ಲಿ ಅತಿ ಪ್ರಾಮುಖ್ಯ ಪಡೆದಿರುವ ಪಂಕ್ತಿಸೇವೆಯಲ್ಲಿ ಪಾಲ್ಗೊಳ್ಳಲು ವಿವಿಧ ಊರುಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಜಾತ್ರೆಯಲ್ಲಿ ಪ್ರಾಣಿಬಲಿಗೆ ಅವಕಾಶ ನೀಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಜಾತ್ರೆಗೆ ಪ್ರವೇಶ ಕಲ್ಪಿಸುವ ರಸ್ತೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ವಾಹನಗಳಲ್ಲಿನ ಸಾಮಾನು ಸರಂಜಾಮುಗಳನ್ನು ಪರಿಶೀಲಿಸುತ್ತಿದ್ದಾರೆ. ಕೆಲವು ವಾಹನಗಳಲ್ಲಿ ದೊರೆತ ಮದ್ಯದ ಬಾಟಲಿಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡರು.

ಕುಟುಂಬದವರು, ಸಂಬಂಧಿ ಕರು ಮತ್ತು ಸ್ನೇಹಿತರ ಜತೆ ತಂಡೋಪತಂಡವಾಗಿ ಬರುತ್ತಿರುವ ಭಕ್ತರು ಗದ್ದಿಗೆಯ ಆವರಣದಿಂದ ದೂರದ ಜಮೀನು, ಬಯಲು ಮುಂತಾದೆಡೆ ಬಿಡಾರಗಳನ್ನು ಹೂಡುತ್ತಿದ್ದಾರೆ.

ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುವ ಪಂಕ್ತಿಸೇವೆಯಲ್ಲಿ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳು ಅಡುಗೆ ತಯಾರಿಸಿ ಸಿದ್ದಪ್ಪಾಜಿ ಗದ್ದಿಗೆ, ಕಂಡಾಯ, ಬಿರುದುಗಳಿಗೆ ಎಡೆ ಅರ್ಪಿಸುತ್ತಾರೆ. ಬಳಿಕ ಎಲ್ಲರೂ ಒಟ್ಟಿಗೆ ಕುಳಿತು ಸಹಪಂಕ್ತಿ ಭೋಜನ ಮಾಡುತ್ತಾರೆ.

ಭಕ್ತರಲ್ಲಿ ಗೊಂದಲ: ಕೆಲವು ವರ್ಷಗಳಿಂದ ಪಂಕ್ತಿಸೇವೆಯ ಆಚರಣೆಗೆ ವಿರೋಧ ವ್ಯಕ್ತವಾಗಿದ್ದು, ಪದ್ಧತಿ ಹೆಸರಿನಲ್ಲಿ ಪ್ರಾಣಿಬಲಿ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಹೈಕೋರ್ಟ್‌ ಆದೇಶದಂತೆ ಪ್ರಾಣಿಬಲಿ ನಿಷೇಧಕ್ಕೆ ಮುಂದಾಗಿತ್ತು. ಕಾಯ್ದೆ ಉಲ್ಲಂಘಿಸದಂತೆ ಮಾಂಸಾಹಾರ ಸೇವನೆ ನಡೆಸಲು ಅನುವು ಮಾಡಿಕೊಡುವಂತೆ ಹೈಕೋರ್ಟ್‌ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.

ಈ ಬಾರಿ ಕೂಡ ಜಿಲ್ಲಾಡಳಿತ ಪ್ರಾಣಿಬಲಿ ನಿಷೇಧವನ್ನು ಕಟ್ಟುನಿಟ್ಟಾಗಿ ತರುವ ಉದ್ದೇಶದಿಂದ ಜಾತ್ರೆಯ ಆವರಣದಲ್ಲಿ ಪ್ರಾಣಿಗಳನ್ನು ತರುವುದಕ್ಕೆ ನಿರ್ಬಂಧ ವಿಧಿಸಿದೆ. ಇದು ಜನರಲ್ಲಿ ಗೊಂದಲ ಮೂಡಿಸಿದೆ. ಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶ ನೀಡದೆ ಇರುವಾಗ ಪಂಕ್ತಿಸೇವೆ ನಡೆಸುವುದು ಹೇಗೆ ಎನ್ನುವುದು ಭಕ್ತರ ಪ್ರಶ್ನೆ.

ಕ್ಷೀಣಿಸಿದ ಜನರ ಸಂಖ್ಯೆ: ಚಂದ್ರಮಂಡಲದ ದಿನ ಕಳೆದ ವರ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಜನಸಾಗರ ಹರಿದುಬಂದಿತ್ತು. ಧರೆಗೆ ದೊಡ್ಡವರ ಸೇವೆ ಮತ್ತು ಮುಡಿಸೇವೆಯ ದಿನಗಳಂದು ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂತು. ಪ್ರಾಣಿಬಲಿ ನಿಷೇಧದ ಆದೇಶದ ಕಾರಣ ಪಂಕ್ತಿಸೇವೆಯ ಸಂಭ್ರಮವೂ ಕುಂದುವ ಸಾಧ್ಯತೆ ಇದೆ ಎನ್ನುವುದು ಜನರ ಅಭಿಪ್ರಾಯ.

‘ಧಾರ್ಮಿಕ ನಂಬಿಕೆಯ ಮೇಲೆ ಅಧಿಕಾರಿಗಳು ಈ ರೀತಿ ನಿರ್ಬಂಧ ಹೇರಿದರೆ ತೀವ್ರ ಬೇಸರವಾಗುತ್ತದೆ. ಇದು ಹೀಗೆಯೇ ಮುಂದುವರಿದರೆ ಮುಂದೆ ಜಾತ್ರೆಯೇ ಮರೆಯಾಗುವಂತೆ ಆಗಬಹುದು’ ಎಂದು ಟಿ. ನರಸೀಪುರದ ಭಕ್ತ ಮಾದಪ್ಪ ಕಳವಳ ವ್ಯಕ್ತಪಡಿಸಿದರು.

‘ಪಂಕ್ತಿಸೇವೆಗೆ ಭಂಗವಿಲ್ಲ’: ‘ದೇವಸ್ಥಾನದ ಆವರಣದಲ್ಲಿ ಎಲ್ಲಿಯೂ ಪ್ರಾಣಿಬಲಿ ನಡೆಯುವುದಿಲ್ಲ. ಹೀಗಿರುವಾಗ ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ನಿರ್ಬಂಧ ಸಡಿಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ’ ಎಂದು ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್‌. ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನರು ತಾರ್ಕಿಕವಾಗಿ ಚಿಂತಿಸುವುದಿಲ್ಲ. ಅವರಲ್ಲಿ ಇರುವುದು ಭಕ್ತಿಯ ಭಾವನೆ. ಅದಕ್ಕೆ ಅಡ್ಡಿಪಡಿಸ ಬಾರದು. ಇಂತಹ ವೇಳೆ ಸಮಸ್ಯೆಗಳು ಉದ್ಭವಿಸಿದರೆ ಅದಕ್ಕೆ ಜಿಲ್ಲಾಡಳಿತ ಹೊಣೆಯಾಗುತ್ತದೆ. ಹೈಕೋರ್ಟ್‌ ಆದೇಶಕ್ಕೆ ಧಕ್ಕೆಯಾಗದಂತೆ ಮತ್ತು ಜಿಲ್ಲಾಡಳಿತಕ್ಕೂ ತೊಂದರೆಯಾಗದಂತೆ ಪಂಕ್ತಿಸೇವೆ ಈ ಬಾರಿ ಕೂಡ ಸಾಂಗವಾಗಿ ನಡೆಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT