ಬುಧವಾರ, ಆಗಸ್ಟ್ 5, 2020
21 °C

ಸಚಿವರ ಕಚೇರಿ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ ಅತಿಥಿ ಉಪನ್ಯಾಸಕರು ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಿಂದ ಬೈಕ್‌ ರ‍್ಯಾಲಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂಭಾಗಕ್ಕೆ ಬಂದು ಪ್ರತಿಭಟನೆ ನಡೆಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕನ್ನೇಶ್ವರ ಮಾತನಾಡಿ, ‘ರಾಜ್ಯದ 411 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ 13 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಈ ವರೆಗೂ ಸೇವಾ ಭದ್ರತೆ ನೀಡಿಲ್ಲ. ಅವರು ಕಡಿಮೆ ವೇತನದಲ್ಲಿ ದುಡಿಯುತ್ತಿರುವುದು ಶೋಚನೀಯ. ಆದ್ದರಿಂದ, ಎಲ್ಲರಿಗೂ ಸೇವಾ ಭದ್ರತೆ ಒದಗಿಸಬೇಕು’‘ ಎಂದು ಒತ್ತಾಯಿಸಿದರು.

ರಾಜು ಕೆಂಬಾವಿ ಮಾತನಾಡಿ, ‘ದೆಹಲಿ ಸರ್ಕಾರವು 16 ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಅಷ್ಟೇ ಅಲ್ಲದೇ, ನಮ್ಮ ರಾಜ್ಯ ಸರ್ಕಾರವು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಾಲೇಜುಗಳ ಹೊರಗುತ್ತಿಗೆ ಉಪ ನ್ಯಾಸಕರು, ದಿನಗೂಲಿ ನೌಕರರು, ಗುತ್ತಿಗೆ ವೈದ್ಯರು, ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರು ಪೌರ ಕಾರ್ಮಿಕರು, ಜೆಒಸಿ ನೌಕರರು ಹಾಗೂ ಉಪನ್ಯಾಸಕರನ್ನು ಕಾಯಂ ಮಾಡಿಗೊಳ್ಳಲು ನಿರ್ಧರಿಸಿದೆ’ ಎಂದರು.

ಕಾಯಮಾತಿಯ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರೂ ಈ ತನಕ ಪ್ರಯೋಜನವಾಗಿಲ್ಲ. ಆದರೂ ಉಪನ್ಯಾಸಕರಾದ ನಾವು ಸಹನೆಯಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ಮುಂದಿನ ದಿನಗಳಲ್ಲಿ ನಮ್ಮ ಪ್ರತಿಭಟನೆ ಉಗ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಎಚ್ಚರಿಕೆಯನ್ನು ನೀಡಿದರು.

2017–18ನೇ ಸಾಲಿಗೆ ಒಟ್ಟು 2,160 ಸಹಪ್ರಧ್ಯಾಪಕರನ್ನು ನೇಮಕ ಮಾಡಿಕೊಂಡಿದ್ದರಿಂದ, ಒಟ್ಟು 4,320 ಅತಿಥಿ ಉಪನ್ಯಾಸಕರು ನೇಮಕಾತಿಯಿಂದ ಹೊರೆಗೆ ಹೋಗಬೇಕಾಯಿತು. ಇವರನ್ನೇ ನಂಬಿದ ಕುಟುಂಬಗಳು ಬೀದಿಪಾಲಾಗಿವೆ ಎಂದರು.

ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಕೆ.ಪಾಟೀಲ. ವಿಭಾಗೀಯ ಜಂಟಿ ಕಾರ್ಯದರ್ಶಿ ವಸಂತಗೌಡ ಪಾಟೀಲ್‌, ಡಾ.ಪ್ರಕಾಶ ಅಮರದ, ಪ್ರಶಾಂತ ಎಚ್‌., ಶ್ರೀಮತಿ ಮಳ್ಳಿಮಠ, ವಿಮಲಾ ಶೆಟ್ಟರ್, ಗಿರೀಶ್ ಎಂ. ಹಾಗೂ ಶಂಭುಲಿಂಗ ದೇವಸೂರ ಇದ್ದರು.

* * 

ಇತರ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಕಾಯಂ ಮಾಡಿರುವ ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರ ಬಗ್ಗೆ ಮಾತ್ರ ಮಲತಾಯಿ ಧೋರಣೆ ತೋರುತ್ತಿದೆ.

ರಾಜು ಕೆಂಬಾವಿ

ಅತಿಥಿ ಉಪನ್ಯಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.