ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಚಿಕನ್ ರುಚಿಲೋಕ!

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ದಮ್‌ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಚಿಕನ್‌ – 1ಕೆ.ಜಿ., ಅಕ್ಕಿ – 2ಕೆ.ಜಿ., ಗಟ್ಟಿಮೊಸರು – 1ಲೋಟ, ಈರುಳ್ಳಿ – 5ರಿಂದ 6, ಮೆಣಸಿನಕಾಯಿ – 8ರಿಂದ9, ಟೊಮೆಟೊ – 4, ಶುಂಠಿ – 1ಚಮಚ, ಬೆಳ್ಳುಳ್ಳಿ ಪೇಸ್ಟ್‌ – ಸ್ವಲ್ಪ, ವಾಸುಮತಿ ಎಲೆ – 2ರಿಂದ3 ಅಥವಾ ಬಾಸುಮತಿ ಅಕ್ಕಿ – 1ಕಪ್‌, ಉಪ್ಪು, ಅರಿಶಿಣಪುಡಿ, ಖಾರದ ಪುಡಿ, ಡಾಲ್ಡಾ, ಗರಂಮಸಾಲಾ, ಕೊತ್ತಂಬರಿ, ಪುದೀನಾ. 

ತಯಾರಿಸುವ ವಿಧಾನ: ಮೊದಲು ಪ್ಲೈನ್‌ ರೈಸ್‌ ರೆಡಿ ಮಾಡಿಕೊಳ್ಳಿ, ಅದರಲ್ಲಿ ಒಂದು ಕಪ್‌ ಬಾಸುಮತಿ ಅಕ್ಕಿ ಸೇರಿಸಿ ಅನ್ನ ಮಾಡಿ ಮತ್ತು ಒಂದು ಪಾತ್ರೆಯಲ್ಲಿ ಚಿಕನ್‌ ಅನ್ನು ತೊಳೆಯಿರಿ ಅದರಲ್ಲಿ ಉಪ್ಪು (ಸ್ವಲ್ಪ ಜಾಸ್ತಿ), ಅರಿಶಿಣಪುಡಿ, ಎರಡು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ. ನಂತರ ಮತ್ತೊಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ 7–8 ಚಮಚ ಎಣ್ಣೆ ಹಾಕಿ ಅದರಲ್ಲಿ ಉದ್ದಕ್ಕೆ ಹೆಚ್ಚಿರುವ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಡೀಪ್‌ ಫ್ರೈ ಮಾಡಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಹಾಕಿ. ನಂತರ ಟೊಮೆಟೊ ಹಾಕಿ ಡೀಪ್‌ ಫ್ರೈ ಮಾಡಿ, ಕೊತ್ತಂಬರಿ ಮತ್ತು ಪುದಿನಾ ಪೇಸ್ಟ್‌ ಮಾಡಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಖಾರದ ಪುಡಿ ಮತ್ತು ಅರಿಶಿಣಪುಡಿ ಎಲ್ಲವನ್ನು ಮಿಕ್ಸ್‌ ಮಾಡಿ, ಒಂದು ದೊಡ್ಡ ಲೋಟ ಮೊಸರು ಹಾಕಿ ಮಿಕ್ಸ್‌ ಮಾಡಿಕೊಳ್ಳಿ. ಎಣ್ಣೆ ಮೇಲೆ ಬಂದು ನಿಲ್ಲುವವರೆಗೆ ಬೇಯಿಸಿ, ನಂತರ ಬೇಯಿಸಿದ ಚಿಕನ್‌ ಪೀಸ್‌ಗಳನ್ನು ಫ್ರೈನಲ್ಲಿ ಹಾಕಿ, ಗರಂಮಸಾಲೆಯನ್ನು ಎರಡು ಚಮಚ ಹಾಕಿ ಕಲೆಸಿ.

ಧಮ್‌ ಕಟ್ಟುವ ವಿಧಾನ: 2–3 ಇದ್ದಲನ್ನು ತೆಗೆದುಕೊಂಡು ಒಲೆಯ ಮೇಲೆ ಇಡಿ ಅದು ಬೆಂಕಿ ಆದಾಗ ಅದನ್ನು ಒಂದು ಬಟ್ಟಲಲ್ಲಿ ತೆಗೆದುಕೊಳ್ಳಿ. ಆ ಬಟ್ಟಲನ್ನು ಅನ್ನದ ಮಧ್ಯದಲ್ಲಿಡಿ ಅದರ ಮೇಲೆ 1–2 ಚಮಚ, ಡಾಲ್ಡ ಹಾಕಿ ತಕ್ಷಣವೇ ಪಾತ್ರೆಯನ್ನು ಮುಚ್ಚಿಬಿಡಿ. ಊಟಕ್ಕೆ ಬಡಿಸುವಾಗ ತೆಗೆದುಕೊಳ್ಳಿ. ಬಿಸಿ ಬಿಸಿ ಧಮ್‌ ಬಿರಿಯಾನಿ ಸವಿಯಲು ಸಿದ್ದ.
***
ಡ್ರೈ ಚಿಕನ್‌

ಬೇಕಾಗುವ ಸಾಮಾಗ್ರಿಗಳು: ಚಿಕನ್‌ – 1/2ಕೆ.ಜಿ., ಈರುಳ್ಳಿ – 4–5, ಮೆಣಸಿನಕಾಯಿ – 7–8, ಗರಂಮಸಾಲ, ಉಪ‍್ಪು, ಖಾರದಪುಡಿ, ಎಣ್ಣೆ, ಕೊತ್ತಂಬರಿ.

ತಯಾರಿಸುವ ವಿಧಾನ: ಮೊದಲು ಒಂದು ಬಾಣಲೆಯಲ್ಲಿ ಚಿಕನ್‌ ತೆಗೆದುಕೊಂಡು ತೊಳೆಯಿರಿ. ಅದರಲ್ಲಿ ಸ್ವಲ್ಪ ಜಾಸ್ತಿ ಉಪ್ಪು, ಅರಿಶಿಣಪುಡಿ ಮತ್ತು 2–3 ಟೀ ಚಮಚ ಎಣ್ಣೆ ಹಾಕಿ ಕುದಿಸಿ, ನಂತರ ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಉದ್ದಕ್ಕೆ ಹೆಚ್ಚಿಕೊಳ್ಳಿ, ಒಂದು ಕಡಾಯಿಯನ್ನು ತೆಗೆದುಕೊಳ್ಳಿ. ಅದರಲ್ಲಿ 3–4 ಚಮಚ ಎಣ್ಣೆಹಾಕಿ, ಬಿಸಿ ಆದ ಮೇಲೆ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಅದರಲ್ಲಿ ಚಿಟಿಕೆ ಉಪ್ಪು ಹಾಗು ಖಾರದಪುಡಿ ಹಾಕಿ, ಅದರಲ್ಲಿ ಬೆಂದಿರುವ ಚಿಕನ್‌ ತುಂಡುಗಳನ್ನು ಹಾಕಿ, ನೀರು ಹಾಕಬಾರದು. ಈಗ ಮೇಲಿಂದ ಗರಂಮಸಾಲ ಮತ್ತು ಕೊತ್ತಂಬರಿ ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ. ಈಗ ಡ್ರೈ ಚಿಕನ್‌ ಸವಿಯಲು ಸಿದ್ದ.
***
ಸೋಯಾ ಚಿಕನ್

ಬೇಕಾಗುವ ಸಾಮಗ್ರಿಗಳು: ಚಿಕನ್ – 1 ಕೆ.ಜಿ., ಜೋಳದಹಿಟ್ಟು – ಅರ್ಧ ಕಪ್, ಸೋಯಾ ಸಾಸ್, ಈರುಳ್ಳಿ – 3–4, ಹಸಿಮೆಣಸಿನಕಾಯಿ – 5–6, ಟೊಮೆಟೊ ಸಾಸ್, ಉಪ್ಪು, ಎಣ್ಣೆ, ಕೊತ್ತಂಬರಿ.

ತಯಾರಿಸುವ ವಿಧಾನ: ಮೊದಲು ಚಿಕನ್ ಚೆನ್ನಾಗಿ ತೊಳೆಯಬೇಕು. ಅದರಲ್ಲಿ ಉಪ್ಪು ಹಾಕಿ. ಉಪ್ಪಿನ ಪ್ರಮಾಣ ಹೆಚ್ಚಿರಲಿ ಮತ್ತು 2 ಚಮಚ ಎಣ್ಣೆ ಹಾಕಿ ಬೇಯಿಸಲು ಇಡಿ. ನಂತರ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಉದ್ದಕ್ಕೆ ಹಚ್ಚಿಕೊಳ್ಳಿ. ಈಗ ಒಂದು ಬಾಣಲೆಯನ್ನು ತೆಗೆದುಕೊಳ್ಳಿ, ಅದರಲ್ಲಿ 4–5 ಚಮಚ ಎಣ್ಣೆ ಹಾಕಿ. ನಂತರ ಅದರಲ್ಲಿ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಈರುಳ್ಳಿ ಕೆಂಪುಬಣ್ಣಕ್ಕೆ ಬರುವ ತನಕ ಫ್ರೈ ಮಾಡಿ. ನಂತರ ಅದರಲ್ಲಿ ಸ್ವಲ್ಪ ಉಪ್ಪು ಹಾಕಿ, ಬೆಂದಿರುವ ಚಿಕನ್ ತುಂಡುಗಳನ್ನು ಹಾಕಿ ಮಿಕ್ಸ್ ಮಾಡಿ. ಒಂದು ಕಪ್‌ನಲ್ಲಿ ಎಂಟು ಟೀ ಚಮಚ ಜೋಳದಹಿಟ್ಟನ್ನು ನೀರಿನಲ್ಲಿ ಮಿಕ್ಸ್ ಮಾಡಿ, ಫ್ರೈ ರೌಂಡ್ ಖಾರವಾಗಿ ಹಾಕಿ ಮತ್ತು ಚಮಚದಿಂದ ಎಲ್ಲವನ್ನು ಕಲೆಸಿ ಗ್ರೇವಿ ತರಹ ಬರುವಷ್ಟು ಮಾತ್ರ ನೀರು ಹಾಕಿ. ಅದರಲ್ಲಿ 2–3 ಚಮಚ ಸೋಯಾ ಸಾಸ್ ಹಾಕಿ ಕುದಿಸಿ. ಕೊತ್ತಂಬರಿ ಹಾಕಿ ಮೇಲಿಂದ ಟೊಮೆಟೊ ಸಾಸ್ ಹಾಕಿ, ಸೋಯಾ ಚಿಕನ್ ರೆಡಿಯಾಗಿದೆ.
***

ಚಿಕನ್ ಚಾಕನ್

ಬೇಕಾಗುವ ಸಾಮಾಗ್ರಿಗಳು: ಚಿಕನ್ – /12ಕೆ.ಜಿ., ಹಸಿಮೆಣಸಿನಕಾಯಿ – 5–6, ಉಪ್ಪು, ಎಣ್ಣೆ, ಕೊತ್ತಂಬರಿ, ಆರೆಂಜ್ ಫುಡ್ ಕಲರ್, ಕರಿಬೇವು.

ತಯಾರಿಸುವ ವಿಧಾನ: ಮೊದಲು ಚಿಕನ್ ಅನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಚೆನ್ನಾಗಿ ತೊಳೆಯಬೇಕು. ನಂತರ ಒಂದು ಮಿಕ್ಸಿಯಲ್ಲಿ ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿಯನ್ನು ಸೇರಿಸಿ ಮಿಕ್ಸಿ ಮಾಡಬೇಕು. ಸ್ವಲ್ಪ ದಪ್ಪವಾಗಿಯೇ ಮಾಡಿ ನಂತರ ಬಾಣಲೆಯಲ್ಲಿ ಉಪ್ಪು ಮತ್ತು ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ, ಅದಕ್ಕೆ ಒಂದು ಅಥವಾ ಎರಡು ಟೀ ಚಮಚ ಎಣ್ಣೆಯನ್ನು ಹಾಕಿ. ಸ್ವಲ್ಪ ಆರೆಂಜ್ ಫುಡ್ ಕಲರ್ ಹಾಕಿ ಚೆನ್ನಾಗಿ ಎಲ್ಲವನ್ನು ಕಲಸಿ 20 ನಿಮಿಷ ಬೇಯಿಸಲಿಡಿ ನಂತರ, ಇನ್ನೊಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ 4 ಚಮಚ ಎಣ್ಣೆ ಹಾಕಿ ಬಿಸಿ ಆದ ಕರಿಬೇವು ಹಾಕಿ, ನಂತರ ಬೇಯಿಸಿದ ಚಿಕನ್‌ನ ತುಂಡುಗಳನ್ನು ಮಾತ್ರ ಹಾಕಿ. ನೀರು ಹಾಕಬಾರದು. ಸ್ವಲ್ಪ ಬಿಸಿಯಾದ ನಂತರ ಗ್ಯಾಸ್ ಆಫ್ ಮಾಡಿ ಚಿಕನ್ ಚಾಕನ್ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT