ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಳ ಕಾಳಜಿ ಮಾಡುವ ದಂಪತಿ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಕಲ್ಲು ಹೊಡೆಯುವುದನ್ನು ಬಿಡಿ, ಬಿಸ್ಕತ್‌ ಪ್ಯಾಕ್ ಹಿಡಿ’ ಎಂಬ ಘೋಷಣೆಯೊಂದಿಗೆ ಬೀದಿನಾಯಿಗಳ ರಕ್ಷಣಾ ಅಭಿಯಾನವೊಂದು ನಗರದಲ್ಲಿ ಆರಂಭವಾಗಿದೆ. ಸುಶಾಂತ್‌ ಅಜ್ನಿಕರ್ ಮತ್ತು ಅವರ ಪತ್ನಿ ಅನಿತಾ ಈ ಅಭಿಯಾನದ ರೂವಾರಿಗಳು.

‘ಮನುಷ್ಯನಲ್ಲಿರುವ ಮೃಗೀಯ ವರ್ತನೆ ಎಚ್ಚರಗೊಳ್ಳುವುದು ಬೀದಿನಾಯಿಗಳನ್ನು ಕಂಡಾಗ. ಕೆಲವರು ಭಯಬೀತರಾಗಿ ಓಡಿದರೆ, ಮತ್ತೆ ಕೆಲವರು ಕೋಪದಲ್ಲಿ ಕಲ್ಲು ಕೈಗೆತ್ತಿಕೊಳ್ಳುತ್ತಾರೆ. ಇದಕ್ಕೆ ಬದಲಾಗಿ ಆ ನಾಯಿಗಳಿಗಾಗಿ ಕೇವಲ 5 ನಿಮಿಷ ಹಾಗೂ ₹5 ವಿನಿಯೋಗಿಸಿ ಇದರಿಂದಾಗಿ ಉತ್ತಮ ಸಹವರ್ತಿಗಳು ಸಿಗುತ್ತಾರೆ’ ಎನ್ನುವುದು ಅನಿತಾ ಅನುಭವದ ಮಾತು.

ಮುಂಬೈ ಮೂಲದ ಸುಶಾಂತ್‌ ಹಾಗೂ ಅನಿತಾ ಸದ್ಯ ನಗರದ ಎಚ್‌ಎಸ್‌ಆರ್‌ ಬಡಾವಣೆಯ ನಿವಾಸಿಗಳು. ಸುಶಾಂತ್‌, ನಗರದ ಖಾಸಗಿ ಕಂಪೆನಿ ಉದ್ಯೋಗಿ. ಬೈಕ್‌ ಸವಾರಿಯಲ್ಲಿ ಅತೀವ ಆಸಕ್ತಿ ಹೊಂದಿರುವ ಸುಶಾಂತ್ ಬೆಂಗಳೂರಿನಿಂದ ಲಖನೌಗೆ ಬೈಕ್‌ನಲ್ಲಿ ಪ್ರಯಾಣಿಸಿದ್ದರು. ತಮ್ಮ ಪ್ರಯಾಣದ ಮಾರ್ಗದುದ್ದಕ್ಕೂ ಜನರಿಗೆ ಪ್ರಾಣಿ ಪ್ರೀತಿಯ ಬಗ್ಗೆ ತಿಳಿಹೇಳಿದರು. ಅದರಲ್ಲಿ ಬೀದಿನಾಯಿಗಳ ರಕ್ಷಣೆ ಬಗ್ಗೆ ಹೆಚ್ಚು ವಿಚಾರಗಳನ್ನು ಹಂಚಿಕೊಂಡರು. ನಾಯಿಗಳು ಕಂಡಲ್ಲಿ ಐದು ರೂಪಾಯಿಯ ಬಿಸ್ಕತ್‌ ಪ್ಯಾಕ್ ಖರೀದಿಸಿ ಬೀದಿನಾಯಿಗಳಿಗೆ ತಿನ್ನಿಸಿದರಂತೆ. ಇದರಿಂದ ಪ್ರೇರಣೆ ಪಡೆದ ಅನೇಕರು ತಮ್ಮನ್ನು ಅನುಸರಿಸಿದರು ಎಂದು ನೆನಪಿಸಿಕೊಳ್ಳುತ್ತಾರೆ ಸುಶಾಂತ್‌.

‘ಜನರ ಪ್ರತಿಕ್ರಿಯೆ, ಪ್ರೋತ್ಸಾಹ ನಾಯಿಗಳ ಬಗೆಗಿದ್ದ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿತು. ನಂತರದ ದಿನಗಳಲ್ಲಿ ಇದೊಂದು ಅಭಿಯಾನವಾಗಿ ಬೆಳೆಯಿತು. ಪಾವ್ಸ್‌ ಆಫ್ ಇಂಡಿಯಾ ಎಂಬ ತಂಡ ರಚನೆಗೂ ಕಾರಣವಾಯಿತು’ ಎನ್ನುತ್ತಾರೆ ಸುಶಾಂತ್‌.

‍‘ಪಾವ್ಸ್‌ ಆಫ್‌ ಇಂಡಿಯಾ’ ಸಮಾನ ಮನಸ್ಕರ ತಂಡ. ಇದರಲ್ಲಿ ಸುಶಾಂತ್‌ ಹಾಗೂ ಅನಿತಾ ಅವರ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಅಕ್ಕಪಕ್ಕದ ಮನೆಯವರು ಸ್ವಯಂ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ. ಬೀದಿನಾಯಿಗಳನ್ನು ದತ್ತು ಪಡೆದು ಪೋಷಿಸುವುದು, ಅನಾರೋಗ್ಯ ಪೀಡಿತ ನಾಯಿಗಳಿಗೆ ಚಿಕಿತ್ಸೆ ನೀಡುವುದು, ಸಾರ್ವಜನಿಕರಿಗೆ ಬೀದಿನಾಯಿಗಳ ಕುರಿತು ಜಾಗೃತಿ ಕಾರ್ಯಾಗಾರಗಳನ್ನು ನಡೆಸುವುದು ಸಂಸ್ಥೆಯ ಪ್ರಮುಖ ಚಟುವಟಿಕೆಗಳು.

ನೆಚ್ಚಿನ ಬೈಕ್‌ ಪ್ರಯಾಣದ ಮೂಲಕ ಬೀದಿನಾಯಿಗಳ ಬಗೆಗಿನ ಹಗೆತನ ಮತ್ತು ಅಲಕ್ಷ್ಯವನ್ನು ಹೋಗಲಾಡಿಸುವುದು ದೇಶಿ ತಳಿಯ ನಾಯಿಗಳನ್ನು ಸಂರಕ್ಷಿಸಲು ಪ್ರೇರೇಪಿಸುವುದು ಮತ್ತು ಜನರಲ್ಲಿ ಪ್ರಾಣಿ ಪ್ರೀತಿ ಮೂಡಿಸುವ ಉದ್ದೇಶ ಈ ದಂಪತಿಗಿದೆ. ರಸ್ತೆ ಅಪಘಾತಗಳಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವ ಬೀದಿ ನಾಯಿಗಳು, ವಿವಿಧ ರೋಗಗಳಿಂದ ಬಳಲುವ ನಾಯಿಗಳನ್ನು ದತ್ತು ಪಡೆಯುವ ಕಾರ್ಯದಲ್ಲಿ ಅವರು ಸಕ್ರಿಯರಾಗಿದ್ದಾರೆ. ಜಿಗಣಿ ಸಮೀಪದ ಕುರುಡು ನಾಯಿಯೊಂದನ್ನು ರಕ್ಷಿಸಿ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ದೇಶದ ವಿವಿಧೆಡೆಗಳಲ್ಲಿ ಸಂರಕ್ಷಿಸಿದ ‘ಜೊಂಬಿ’ ಮತ್ತು ‘ಲುಲು’ ಎಂಬ ನಾಯಿಗಳನ್ನು ಅವರು ಸಾಕುತ್ತಿದ್ದಾರೆ. ಸ್ತನ ಕ್ಯಾನ್ಸರ್‌ ಇರುವ ಹಾಗೂ ಕಾಲು ಮುರಿದ ನಾಯಿಗಳಿಗೆ ಸ್ವತಃ ಆರೈಕೆ ಮಾಡಿದ್ದಾರೆ. ವಿದೇಶಿ ತಳಿಯ ನಾಯಿಗಳ ಸಾಕಲು ಲಕ್ಷಾಂತರ ರೂಪಾಯಿ ವ್ಯಯಿಸುವ ಪ್ರಾಣಿಪ್ರಿಯರು ದೇಶಿಯ ನಾಯಿಗಳ ಸಂರಕ್ಷಣೆಗೆ ಕನಿಷ್ಠ ₹5 ಭರಿಸಲಿ ಎನ್ನುವುದು ಇವರ ಆಶಯ.

ಸದ್ಯ ಅವರ ‘5 ನಿಮಿಷ 5 ರೂಪಾಯಿ’ ಪರಿಕಲ್ಪನೆ ಸಾಕಾರಗೊಂಡಿದೆ. ಇತ್ತೀಚೆಗೆ ನೇಪಾಳಕ್ಕೆ ಬೈಕ್‌ ಪ್ರವಾಸ ಕೈಗೊಂಡಾಗಲೂ ಮಾರ್ಗದುದ್ದಕ್ಕೂ ದೇಶಿ ನಾಯಿಗಳ ಸಂರಕ್ಷಣೆಯ ಮಹತ್ವವನ್ನು ಸಾರಿದ್ದರು. ವಿವಿಧ ಕಾರ್ಯಾಗಾರಗಳನ್ನು ನಡೆಸಿ ನಾಯಿಗಳಿಗೆ ಚಿಕಿತ್ಸೆ ನೀಡುವ ವಿಧಾನ, ರಕ್ಷಿಸುವ ಬಗೆಯನ್ನು ವಿವರಿಸಿದ್ದರು. 

ವ್ಯವಸ್ಥಿತವಾದ ಆಶ್ರಯತಾಣ ನಿರ್ಮಿಸಿ, ಬೀದಿನಾಯಿಗಳನ್ನು ರಕ್ಷಿಸುವ ಗುರಿ ಈ ದಂಪತಿಗಿದೆ. ಅಲ್ಲಿನ ನಾಯಿಗಳನ್ನು ನೋಡಿಕೊಳ್ಳಲು ನಿರಾಶ್ರಿತ ನಿರುದ್ಯೋಗಿಗಳನ್ನು ನೇಮಿಸಿಕೊಂಡು ಉದ್ಯೋಗ ನೀಡುವುದು ಅವರ ಯೋಜನೆ.

ಸಂಪರ್ಕಕ್ಕೆ:www.facebook.com/pawsofindia

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT