ನಮ್ಮ ಅಪ್ಪಂದಿರು ಇವರಿಗೆ ಬಿಟ್ಟಿ ಸಿಕ್ಕಿದ್ದಾರೆಯೇ?: ಎಚ್‌.ಡಿ. ಕುಮಾರಸ್ವಾಮಿ

7

ನಮ್ಮ ಅಪ್ಪಂದಿರು ಇವರಿಗೆ ಬಿಟ್ಟಿ ಸಿಕ್ಕಿದ್ದಾರೆಯೇ?: ಎಚ್‌.ಡಿ. ಕುಮಾರಸ್ವಾಮಿ

Published:
Updated:
ನಮ್ಮ ಅಪ್ಪಂದಿರು ಇವರಿಗೆ ಬಿಟ್ಟಿ ಸಿಕ್ಕಿದ್ದಾರೆಯೇ?: ಎಚ್‌.ಡಿ. ಕುಮಾರಸ್ವಾಮಿ

ಬೆಳಗಾವಿ: ‘ಎಚ್‌.ಡಿ.ಕುಮಾರಸ್ವಾಮಿ ಆಗಲೀ, ಬಿ.ಎಸ್‌. ಯಡಿಯೂರಪ್ಪ ಆಗಲೀ ಅವರ ಅಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಮ್ಮ ಅಪ್ಪಂದಿರು ಇವರಿಗೆ ಬಿಟ್ಟಿ ಸಿಕ್ಕಿದ್ದಾರೆಯೇ?’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಇಲ್ಲಿ ತಿರುಗೇಟು ನೀಡಿದರು.

‘ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ಜನರು ತೀರ್ಮಾನಿಸುತ್ತಾರೆ. ನಾವು ಮುಖ್ಯಮಂತ್ರಿ ಆಗುವುದಿಲ್ಲ ಎನ್ನುವುದು ಇವರಿಗೆ ಖಾತರಿಯಾಗಿದ್ದರೆ ಅವರ ಅಪ್ಪನ ಮೇಲೆಯೇ ಆಣೆ ಹಾಕಿಕೊಳ್ಳಲಿ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಓಲೈಕೆಯೇ ಕಾರಣ: ಹಿಂದೂಗಳ ರಕ್ಷಣೆ ಮಾಡುತ್ತೇವೆಂದು ಬಿಜೆಪಿ, ಮುಸ್ಲಿಮರ ರಕ್ಷಣೆ ಮಾಡುವುದಾಗಿ ಕಾಂಗ್ರೆಸ್ಸಿಗರು ಅವರನ್ನು ಓಲೈಸಲು ಹೊರಟಿರುವುದೇ ಮಂಗಳೂರಿನ ಇಂದಿನ ಸ್ಥಿತಿಗೆ ಕಾರಣವಾಗಿದೆ. ಅಲ್ಲಷ್ಟೇ ಮುಸ್ಲಿಮರಿಲ್ಲ. ಕಲಬುರ್ಗಿ, ಹುಬ್ಬಳ್ಳಿ, ಬೆಳಗಾವಿಯಲ್ಲೂ ಇದ್ದಾರೆ. ಆದರೆ, ಇಲ್ಲೆಲ್ಲ ಏಕೆ ಘರ್ಷಣೆಗಳಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ‘ಒಬ್ಬರು ಸೀಮೆ ಎಣ್ಣೆ ಸುರಿಯುತ್ತಾರೆ, ಇನ್ನೊಬ್ಬರು ಬೆಂಕಿ ಹಚ್ಚುತ್ತಾರೆ’ ಎಂದು ಕಿಡಿಕಾರಿದರು.

ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ: ‘ಕಳೆದ ಬಾರಿ ರಾಜ್ಯದ ಎಲ್ಲ 224 ಕ್ಷೇತ್ರಗಳ ಮೇಲೆ ಗಮನ ಹರಿಸಲು ಪ್ರಯತ್ನಿಸಿ ಕೈಸುಟ್ಟುಕೊಂಡೆ. ಆ ತಪ್ಪನ್ನು ತಿದ್ದಿಕೊಂಡು ಈ ಬಾರಿ ಬಹುಮತಕ್ಕೆ ಬೇಕಾಗಿರುವ 113 ಸ್ಥಾನಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ್ದೇನೆ. ರೈತರ ಸಂಪೂರ್ಣ ಸಾಲ ಮನ್ನಾ ಬಗ್ಗೆ ಭರವಸೆಗಳನ್ನು ನೀಡಿದ್ದೇನೆ. ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭ ಬಂದರೆ ನಾನು ಅದರಲ್ಲಿ ಭಾಗಿಯಾಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಸದ, ಸಚಿವರ ವಿರುದ್ಧ ಕ್ರಮ ಯಾಕಿಲ್ಲ?: ‘ತೀವ್ರ ಹಿಂಸಾಚಾರ ನಡೆಸುವಂತೆ ಅಮಿತ್‌ ಷಾ ಸೂಚನೆ ನೀಡಿದ್ದಾರೆಂದು ಸಾಮಾಜಿಕ ತಾಣಗಳಲ್ಲಿ ಹೇಳಿಕೆ ನೀಡಿರುವ ಸಂಸದ ಪ್ರತಾಪ್‌ ಸಿಂಹ ವಿರುದ್ಧ ರಾಜ್ಯ ಸರ್ಕಾರ ಏಕೆ ಕಠಿಣ ಕ್ರಮಕೈಗೊಳ್ಳಲಿಲ್ಲ? ಜಾಮೀನು ರಹಿತ ಸೆಕ್ಷನ್‌ಗಳಡಿ ಪ್ರಕರಣ ಏಕೆ ದಾಖಲಿಸಲಿಲ್ಲ? ಸಂವಿಧಾನ ಬದಲಾಯಿಸಬೇಕೆಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧವೂ ಕಾಂಗ್ರೆಸ್ ಸರ್ಕಾರ ಏಕೆ ಕ್ರಮಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry