ಮಂಗಳವಾರ, ಆಗಸ್ಟ್ 11, 2020
26 °C
ಸಂಯೋಜಿತ ಕಾಲೇಜುಗಳಿಗೆ ಬೆಂಗಳೂರು ವಿಶ್ವವಿದ್ಯಾಲಯದ ಸುತ್ತೋಲೆ

ಚಿನ್ನದ ಪದಕ ಬೇಕಿದ್ದರೆ ₹500 ಪಾವತಿಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನದ ಪದಕ ಬೇಕಿದ್ದರೆ ₹500 ಪಾವತಿಸಿ!

ಬೆಂಗಳೂರು: ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳು ಚಿನ್ನದ ಪದಕ ನೀಡುತ್ತವೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯಲ್ಲಿ ಚಿನ್ನದ ಪದಕ ಬೇಕಿದ್ದಲ್ಲಿ ವಿದ್ಯಾರ್ಥಿಗಳು ಹಣ ಪಾವತಿಸಬೇಕು! ವಿಶ್ವವಿದ್ಯಾಲಯ ಈ ಸಂಬಂಧ ತನ್ನ ಸಂಯೋಜಿತ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು ವಿ.ವಿ 53ನೇ ಘಟಿಕೋತ್ಸವದಲ್ಲಿ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ. ಚಿನ್ನದ ಪದಕ ಪಡೆಯಲು ಅರ್ಹರಾಗಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈಗಾಗಲೇ ನೀಡಿರುವ ಘಟಿಕೋತ್ಸವದ ಶುಲ್ಕ ಬಿಟ್ಟು ₹500 ಪಾವತಿಸಬೇಕೆಂದು ಸುತ್ತೋಲೆಯಲ್ಲಿ ಸೂಚಿಸಿದೆ.

‘1962ರಿಂದ ಚಿನ್ನದ ಪದಕ, ಬಹುಮಾನ ನೀಡುವ ಪದ್ಧತಿ ನಡೆಯುತ್ತ ಬಂದಿದೆ. ಚಿನ್ನದ ಪದಕ ನೀಡಲು ದಾನಿಗಳು ₹2,000 ನಿಧಿಯನ್ನು ಸ್ಥಾಪಿಸಿದ್ದಾರೆ. ಇದರಿಂದ ₹85 ಬಡ್ಡಿ ಹಣ ಬರುತ್ತದೆ. ಪ್ರಥಮ ರ‍್ಯಾಂಕ್‌ಗೆ ನೀಡುವ 20 ಗ್ರಾಂ ಬೆಳ್ಳಿ ಪದಕಕ್ಕೆ 1.3 ಗ್ರಾಂ ಚಿನ್ನದ ಲೇಪನದ ಪದಕಕ್ಕೆ ಬಡ್ಡಿ ಹಣ ಸಾಕಾಗದೆ, ವಿ.ವಿಯಿಂದ ಹಣ ಭರಿಸಲಾಗುತ್ತಿದೆ’ ಎಂದು ವಿ.ವಿ ಪ್ರಕಟಣೆಯಲ್ಲಿ ತಿಳಿಸಿದೆ.

‘ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಯಾವುದಾದರೂ ದತ್ತಿ ನಿಧಿಗಳನ್ನು ಪಡೆದು ಚಿನ್ನದ ಪದಕ ಅಥವಾ ಬಹುಮಾನ ನೀಡಬೇಕು. ಅದನ್ನು ಬಿಟ್ಟು ನಮ್ಮಿಂದಲೇ ಹಣ ಸಂಗ್ರಹಿಸುವುದು ಎಷ್ಟು ಸರಿ’ ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳು ಎತ್ತಿದ್ದಾರೆ.

ಅಂಕಪಟ್ಟಿ ಮುದ್ರಣ, ಚಿನ್ನದ ಲೇಪನ ಸೇರಿ ಇತರೆ ಖರ್ಚುಗಳಿಗೆ ವಿ.ವಿ ಸಾಕಷ್ಟು ಹಣ ವೆಚ್ಚ ಮಾಡುತ್ತಿದೆ. ಹಾಗಾಗಿ ವಿದ್ಯಾರ್ಥಿಗಳಿಂದ ಹಣವನ್ನು ಪಡೆದು ಆರ್ಥಿಕ ಸಂಕಷ್ಟ ನೀಗಿಸಿಕೊಳ್ಳಲು ಈ ರೀತಿ ಉಪಾಯ ಹೂಡಿದೆ ಎಂಬುದು ಅವರ ಆರೋಪ.

‘ಅಂಕಪಟ್ಟಿ ಮತ್ತು ಚಿನ್ನದ ಪದಕವನ್ನು ಹಣ ನೀಡಿ ಪಡೆಯುಬೇಕೆಂದಾದರೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವುದಕ್ಕೂ ಪದವಿ ಪಡೆಯುವುದಕ್ಕೂ ಬೆಲೆಯೇ ಇಲ್ಲದಂತಾಗುತ್ತದೆ’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಈ ರೀತಿ ಹಣ ನೀಡಿ ಪದವಿ ಪತ್ರ ಮತ್ತು ಚಿನ್ನದ ಪದಕ‌ ಪಡೆಯುವ ಪ್ರವೃತ್ತಿ ಸಾಕಷ್ಟು ವರ್ಷಗಳಿಂದ ಜಾರಿಯಲ್ಲಿದೆ. ಕಳೆದ ವರ್ಷ ₹380 ಪಡೆಯಲಾಗಿತ್ತು. ಈ ವರ್ಷ ಶೇ10 ಶುಲ್ಕ ಏರಿಕೆಯಾದ ಕಾರಣ ₹500 ಪಡೆಯಲಾಗುತ್ತಿದೆ. ಅಲ್ಲದೆ, ಈ ವಿಚಾರದ ಕುರಿತು ಮುಂದಿನ ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸುತ್ತೇವೆ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.