ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ನಲ್ಲಿ ದೋಷ: ಹಣ ಮರುಪಾವತಿಗೆ ಆದೇಶ

Last Updated 5 ಜನವರಿ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ಖರೀದಿಸಿದ ಹೊಸ ಬೈಕ್‌ನಲ್ಲಿ ತಾಂತ್ರಿಕ ದೋಷವಿದ್ದ ಕಾರಣ ಗ್ರಾಹಕನಿಗೆ ಹಣವನ್ನು ಮರುಪಾವತಿ ಮಾಡುವಂತೆ ನಗರದ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅದನ್ನು ತಯಾರಿಸಿದ ಕಂಪೆನಿ ಹಾಗೂ ಮಾರಾಟ ಮಳಿಗೆಗೆ ನಿರ್ದೇಶನ ನೀಡಿದೆ.

ಮಹದೇವಪುರ ಕ್ಷೇತ್ರದ ನಾರಾಯಣಪುರ ನಿವಾಸಿ ಭೂಪತಿ ಬಿ. ಅವರು 2015ರ ಸೆಪ್ಟೆಂಬರ್‌ನಲ್ಲಿ ಇಂದಿರಾ ನಗರದ ಪನಚೆ ಎಂಟರ್‌ಪ್ರೈಸಸ್‌ ಮಳಿಗೆಯಿಂದ ಯಮಹ ಎಫ್‌ಜೆಡ್‌–5 ಬೈಕ್‌ ಖರೀದಿಸಿದ್ದರು. ಸಾಲ ಮಾಡಿ₹ 98,416 ಪಾವತಿಸಿದ್ದರು.

ಡಸ್ಟರ್ಸ್‌ ಟೋಟಲ್‌ ಸಲ್ಯೂಷನ್ಸ್‌ ಕಂ‍ಪೆನಿಯಲ್ಲಿ ಉಪ ವ್ಯವಸ್ಥಾಪಕರಾಗಿದ್ದ ಭೂಪತಿ ಅವರಿಗೆ ಹೊಸ ಬೈಕ್‌ ಖರೀದಿಸಿದ ಖುಷಿ ಹೆಚ್ಚಿನ ದಿನ ಉಳಿಯಲಿಲ್ಲ.

‘ಬೈಕ್‌ ಸವಾರಿ ಮಾಡುವಾಗ ಅದು ಎಡಭಾಗಕ್ಕೆ ಸೆಳೆಯುವಂತೆ ಭಾಸವಾಗುತ್ತಿತ್ತು. ಅದು ನೇರವಾಗಿ ಸಾಗುವಂತೆ ಮಾಡಲು ಹೆಚ್ಚು ಬಲಪ್ರಯೋಗ ಮಾಡಬೇಕಾಗುತ್ತಿತ್ತು. ಅದನ್ನು ಬಳಸಲು ಆರಂಭಿಸಿದ ಒಂದೇ ವಾರದಲ್ಲಿ ಬೆನ್ನುನೋವು ಹಾಗೂ ಕತ್ತು ನೋವು ಕಾಣಿಸಿಕೊಂಡಿತು’ ಎಂದು ಅವರು ತಿಳಿಸಿದರು.

‘ಆ ಬೈಕ್‌ನಿಂದ ನನಗೆ ಯಾವುದೇ ಪ್ರಯೋಜನ ಆಗಲಿಲ್ಲ. ಆಟೊ ಹಾಗೂ ಬಸ್‌ ಪ್ರಯಾಣಿಸಲು ಹಣ ವೆಚ್ಚ ಮಾಡಬೇಕಾಯಿತು. ಇದರ ಜೊತೆಗೆ ಬೈಕ್‌ ಖರೀದಿಗಾಗಿ ಮಾಡಿದ್ದ ಸಾಲವನ್ನೂ ಮರುಪಾವತಿ ಮಾಡಬೇಕಿತ್ತು. ಸರ್ವಿಸ್‌ ಮಾಡಿಸಿದ ಬಳಿಕವೂ ಸಮಸ್ಯೆ ಬಗೆಹರಿಯಲಿಲ್ಲ’ ಎಂದರು.

‘ಮೊದಲ ಸರ್ವೀಸ್‌ ಮಾಡಿಸಿದ ನಂತರ ಒಂದು ತಿಂಗಳು ಬಿಟ್ಟು ಬರುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದರು. ಆ ಬಳಿಕವೂ ಸಮಸ್ಯೆ ಹಾಗೆಯೇ ಮುಂದುವರಿಯಿತು. ಎರಡನೇ ಸರ್ವಿಸ್‌ ಮಾಡಿಸುವಾಗ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಆ ಬಳಿಕವೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ’

‘ಬೆನ್ನುನೋವಿನಿಂದಾಗಿ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಾಕಷ್ಟು ಹಣ ವ್ಯಯಿಸಿದೆ. ಸಾಕಷ್ಟು ಅಲೆದಾಟ ನಡೆಸಿದ ಬಳಿಕ ನಾನು ಇಂಡಿಯ ಯಮಹ ಮೋಟರ್‌ ಪ್ರೈವೇಟ್‌ ಲಿಮಿಟೆಡ್‌ ಕಂ‍‍ಪೆನಿ ಹಾಗೂ ಅದನ್ನು ಮಾರಾಟ ಮಾಡಿದ ಮಳಿಗೆ ವಿರುದ್ಧ ವೇದಿಕೆಗೆ ದೂರು ನೀಡಿದೆ’ ಎಂದರು.

ವೇದಿಕೆಯ ಅಧ್ಯಕ್ಷ ಪಿ.ವಿ.ಸಿಂಗ್ರಿ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ವಾಹನ ಸಮರ್ಪಕವಾಗಿದೆ ಎಂಬುದನ್ನು ಸಾಬೀತುಪಡಿಸುವಂತಹ ಪುರಾವೆ ಒದಗಿಸಲು ಕಂ‍ಪೆನಿ ಹಾಗೂ ಮಾರಾಟ ಮಳಿಗೆಯವರು ವಿಫಲರಾದರು.

ವಾರಂಟಿ ಅವಧಿಯಲ್ಲಿ ವಾಹನದಲ್ಲಿ ದೋಷ ಕಾಣಿಸಿಕೊಂಡರೆ ಅದನ್ನು ದುರಸ್ತಿಪಡಿಸಬೇಕು ಅಥವಾ ಅದರ ಬದಲು ಬೇರೆ ವಾಹನವನ್ನು ಒದಗಿಸಬೇಕು. ಇಲ್ಲವೇ ಪೂರ್ತಿ ಮೊತ್ತವನ್ನು ಮರುಪಾವತಿ ಮಾಡಬೇಕು.

ಕಂಪೆನಿಯು ವಾಹನ ದುರಸ್ತಿಪಡಿಸಿರಲಿಲ್ಲ. ಅದಕ್ಕೆ ಬದಲಾಗಿ ಬೇರೆ ಬೈಕನ್ನೂ ನೀಡಿರಲಿಲ್ಲ. ಹಾಗಾಗಿ ಬೈಕ್‌ನ ಹಣವನ್ನು ಮರುಪಾವತಿಸುವಂತೆ ಹಾಗೂ ವ್ಯಾಜ್ಯದ ವೆಚ್ಚವಾಗಿ ₹ 4,000ವನ್ನು ದೂರುದಾರರಿಗೆ ನೀಡುವಂತೆ ವೇದಿಕೆಯು ನಿರ್ದೇಶನ ನೀಡಿತು. ಈ ಹಣಕ್ಕೆ ಶೇ 9ರಷ್ಟು ಬಡ್ಡಿಯನ್ನೂ (2016ರ ಏಪ್ರಿಲ್‌ನಿಂದ) ಕಂಪೆನಿ ಹಾಗೂ ಮರಾಟ ಮಳಿಗೆಯವರು ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT