ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನಾ ಸಮಾವೇಶಕ್ಕೆ ಬಿಜೆಪಿ ವಿರೋಧ

Last Updated 6 ಜನವರಿ 2018, 6:02 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಗೆ ಯಾವುದೇ ಹೊಸ ಯೋಜನೆ ಮಂಜೂರು ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ನೀಡಿದ ಅನುದಾನದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಬರುತ್ತಿದ್ದಾರೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಲೇವಡಿ ಮಾಡಿದರು.

ವಿವಿಧ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂದು ನಂಬಿಸುವ ಮೂಲಕ ಕಾಂಗ್ರೆಸ್‌ ಜನರಿಗೆ ಮೋಸ ಮಾಡುತ್ತಿದೆ. ವಾಸ್ತವದಲ್ಲಿ ಅಮೃತ್ ಯೋಜನೆ, ಸ್ಮಾರ್ಟ್‌ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಅನುದಾನ ನೀಡಿದೆ. ಆದರೆ, ರಾಜ್ಯ ಸರ್ಕಾರ ಒಂದು ಪೈಸೆ ಅನುದಾನ ವನ್ನು ನೀಡಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕೇಂದ್ರ ಸರ್ಕಾರ ಜಿಲ್ಲೆಯ 18 ಸಾವಿರ ಮನೆಗಳಿಗೆ ಉಚಿತ ವಿದ್ಯುತ್ ಕಲ್ಪಿಸಲು ₹ 159 ಕೋಟಿ ನೀಡಿದೆ. ವಸತಿ ರಹಿತರಿಗೆ ಮನೆ ನೀಡಲು ಯೋಜನೆ ರೂಪಿಸಿದೆ. ಇಂತಹ ಮಹತ್ವದ ವಿಚಾರಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಜನರಿಗೆ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲು ರೂಪಿಸಿದ ಯೋಜನೆಯಲ್ಲಿ ಮೆಗ್ಗಾನ್ ಆಸ್ಪತ್ರೆಯನ್ನೇ ಸೇರಿಸಿಲ್ಲ ಎಂದು ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ವಿಧಾನಸಭಾಧ್ಯಕ್ಷ ಸ್ಥಾನದಲ್ಲಿದ್ದಾಗ ಸರ್ಕಾರದ ವಿರುದ್ಧ ಚಾಟಿ ಬೀಸುತ್ತಿದ್ದರು. ಈಗ ಅವರೇ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದರೂ, ಜಿಲ್ಲೆಗೆ ಅಗತ್ಯವಾದ ಅನುದಾನ ತರಲೂ ಆಗಿಲ್ಲ. ಅಂದು ಇದ್ದ ಹುಮ್ಮಸ್ಸು ಮಂತ್ರಿಯಾದ ಮೇಲೆ ಕಾಣುತ್ತಿಲ್ಲ ಎಂದು ಟೀಕಿಸಿದರು.

ನಾಲ್ಕೂವರೆ ವರ್ಷ ಏನೂ ಮಾಡದ ಮುಖ್ಯಮಂತ್ರಿ ಈಗ ಸಾಧನಾ ಸಮಾವೇಶದ ನೆಪದಲ್ಲಿ ಹೋದ ಕಡೆಯಲ್ಲೆಲ್ಲ ಸಾವಿರಾರು ಕೋಟಿ ಅನುದಾನ ಘೋಷಿಸುತ್ತಿದ್ದಾರೆ. ಅವುಗಳಿಗೆ ಹಣಕಾಸು, ಆಡಳಿತಾತ್ಮಕ ಅನುಮೋದನೆ ದೊರೆತು, ಅನುಷ್ಠಾನ ಮಾಡಲು ಮತ್ತೊಂದು ಸರ್ಕಾರ ಬರಬೇಕಿದೆ. ರಾಜಕೀಯ ಕಾರಣಗಳಿಗಾಗಿ ಬೂಟಾಟಿಕೆ ಮಾಡಲಾಗುತ್ತಿದೆ. ಸರ್ಕಾರದ ಇಂತಹ ನಡವಳಿಕೆಯನ್ನು ಬಿಜೆಪಿ ವಿರೋಧಿಸುತ್ತದೆ ಎಂದರು.

ವಾಚ್‌ ಪ್ರಕರಣ, ಭೂ ಹಗರಣಗಳ ಪರಿಣಾಮ ಜೈಲಿಗೆ ಹೋಗುವ ಭೀತಿಯಿಂದ ಪಾರಾಗಲು ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸಿದರು. ಪಿಎಫ್‌ಐನಂತಹ ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂತೆಗೆಯುವ ಮೂಲಕ ಭಯೋತ್ಪಾದಕ ಸಂಘಟನೆಗಳ ಮಹಾಪೋಷಕರ ರೀತಿ ಸರ್ಕಾರ ವರ್ತಿಸುತ್ತಿದೆ. ಹಾಗಾಗಿಯೇ, ದೀಪಕ್ ರಾವ್ ಹತ್ಯೆಯಂತಹ ಪ್ರಕರಣ ಮರುಕಳಿಸುತ್ತಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್‌. ಅರುಣ್,  ಎಂ. ಶಂಕರ್‌, ಜ್ಞಾನೇಶ್ವರ್, ವೀರಭದ್ರಪ್ಪ ಪೂಜಾರಿ, ಅನಿತಾ ರವಿಶಂಕರ್, ಕೆ.ವಿ. ಅಣ್ಣಪ್ಪ, ರತ್ನಾಕರ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT