ಶನಿವಾರ, ಜೂಲೈ 4, 2020
21 °C

ಜಾನುವಾರುಗಳ ವೀಕ್ಷಣೆಗೆ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಕಲಗೂಡು: ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪಶುಮೇಳದ ವೀಕ್ಷಣೆಗೆ ಶುಕ್ರವಾರ ಜನಸಾಗರ ಹರಿದು ಬಂತು. ವಾರದ ಸಂತೆಗೆ ಬಂದ ತಾಲ್ಲೂಕಿನ ವಿವಿಧ ಭಾಗಗಳ ರೈತರಲ್ಲದೆ ರಾಜ್ಯದ ಇತರೆಡೆಯಿಂದಲೂ ಜನರು ಬಂದು ಮೇಳ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳನ್ನು ಮೇಳ ವೀಕ್ಷಿಸಲು ಕರೆತಂದ ಕಾರಣ ಕ್ರೀಡಾಂಗಣದಲ್ಲಿ ಎಲ್ಲೆಲ್ಲಿ ನೋಡಿದರೂ ಜನಸಂದಣಿ ಏರ್ಪಟ್ಟಿತ್ತು.

ಎರಡನೆ ದಿನವೂ ವಿವಿಧೆಡೆಯಿಂದ ಪಶುಗಳು ಮೇಳಕ್ಕೆ ಆಗಮಿಸಿದ್ದು, ಎಲ್ಲ 129 ಸ್ಟಾಲ್‌ಗಳು ಭರ್ತಿಯಾಗಿದ್ದವು. ವಿವಿಧ ತಳಿಯ 128 ಹಸು ಮತ್ತು ಹೋರಿ, 10 ಎಮ್ಮೆ ಮತ್ತು ಕೋಣ, ಕುರಿಗಳು,ಆಡುಗಳು, ಕೋಳಿ, ಮೊಲ, ಹಂದಿ ಸೇರಿ 589ಜಾನುವಾರು ನೋಂದಣಿ ಆಗಿದ್ದವು.

ಬೆಳಿಗ್ಗೆ ಹಾಲು ಕರೆಯುವ ಸ್ಪರ್ಧೆ ಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಂದ ಬಂದಿದ್ದ 13 ಮಿಶ್ರತಳಿ ರಾಸುಗಳು ಪಾಲ್ಗೊಂಡಿದ್ದವು.

ಮಂಡ್ಯ ಜಿಲ್ಲೆಯ ಮಾಯಣ್ಣನಕೊಪ್ಪಲು ಗ್ರಾಮದ ವೀರೇಶ್ ಅವರ ರಾಸು 21.800 ಕೆಜಿ, ಬೆಂಗಳೂರಿನ ಮುದ್ದಿನ ಪಾಳ್ಯದ ಹರ್ಷಿತ್ ಗೌಡ ಅವರ ಹಸು 20.385 ಹಾಗೂ ಹೊಳೆನರಸೀಪುರ ತಾಲ್ಲೂಕು ಸೂರನಹಳ್ಳಿ ಗ್ರಾಮದ ರಘು ಅವರ ಹಸು 20.220 ಕೆಜಿ ಹಾಲು ಕರೆದವು.

ನಾಟಿ ತಳಿಯ ಎರಡು ಹಸುಗಳೂ ಮೇಳದಲ್ಲಿ ಗಮನಸೆಳೆದವು. ತಾಲ್ಲೂಕಿನ ನಿಲುಕುಂದ ಗ್ರಾಮದ ಪುಟ್ಟಪ್ಪ ಅವರ ಹಸು 3.285 ಕೆಜಿ ಹಾಗೂ ಅರೇಮಾದನಹಳ್ಳಿ ಕುಮಾರಸ್ವಾಮಿ ಅವರ ರಾಸು 2.390 ಕೆ.ಜಿ ಹಾಲುಕರೆದವು. ಮೇಳದಲ್ಲಿ ಏರ್ಪಡಿಸಿದ್ದ ಕರುಗಳ ಪ್ರದರ್ಶನದಲ್ಲಿ ಮಿಶ್ರ ತಳಿ, ಹಳ್ಳಿಕಾರ್‌ ತಳಿ, ಇನ್ನತರ ತಳಿಗಳ 80 ಕರುಗಳು ಇದ್ದವು. ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಕುಸ್ತಿಪಂದ್ಯ: ಮಧ್ಯಾಹ್ನ ರಾಜ್ಯ ಮಟ್ಟದ ಕುಸ್ತಿ ಪಂದ್ಯಕ್ಕೆ ಸಚಿವ ಎ.ಮಂಜು ಚಾಲನೆ ನೀಡಿದರು. ವಿವಿಧ ಜಿಲ್ಲೆಗಳ 240 ಕುಸ್ತಿಪಟುಗಳು ಭಾಗವಹಿಸಿದ್ದರು. 57, 61, 71, 74, 81 ಮತ್ತು 86 ಕೆ.ಜಿ ವಿಭಾಗದಲ್ಲಿ ಪಂದ್ಯಗಳು ನಡೆದವು. ಕನ್ನಡ ಮತ್ತು ಸಂಸದ್ಕೃತಿ ಇಲಾಖೆ ವತಿಯಿಂದ ಜನಪದ ಉತ್ಸವ ಏರ್ಪಾಟಾಗಿತ್ತು. ಗುರುವಾರ ರಾತ್ರಿ ಚಿತ್ರನಟರು ನಡೆಸಿಕೊಟ್ಟ ಹಾಸ್ಯ ಕಾರ್ಯ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಇತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.