ಗುರುವಾರ , ಜೂಲೈ 2, 2020
28 °C

ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ನೂತನ ಕಟ್ಟಡ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ನೂತನ ಕಟ್ಟಡ

ಚಿಂಚೋಳಿ: ತಾಲ್ಲೂಕಿನ ಕೋಡ್ಲಿಯ ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ನೂತನ ಕಟ್ಟಡ ಭಾಗ್ಯ ಒದಗಿ ಬಂದಿದೆ. ಸುಮಾರು 14 ಎಕರೆ ಜಮೀನಿನಲ್ಲಿ ಶಾಲೆಯ ವಿವಿಧ ಕಟ್ಟಡಗಳು ತಲೆ ಎತ್ತಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

2009ರಿಂದ ಆರಂಭವಾದ ವಸತಿ ಶಾಲೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಶಾಲೆಯ ಬಾಲಕಿಯರಿಗೆ ತೀವ್ರ ತೊಂದರೆಯಾಗಿತ್ತು. ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು. ಸೂಕ್ತ ಕಟ್ಟಡದ ಕೊರತೆ ಕಾಡುತಿತ್ತು.

ರಾಜ್ಯ ಸರ್ಕಾರ ಮಂಜೂರು ಮಾಡಿದ ₹9.87 ಕೋಟಿ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಈ ಮೊತ್ತದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ರಸಕ್ತ ಜನವರಿ 26ರೊಳಗೆ  ಬೋಧಕ ಸಿಬ್ಬಂದಿಯ ವಸತಿ ಗೃಹ ಕಟ್ಟಡ ಹೊರತುಪಡಿಸಿ, ಉಳಿದ 8 ಕಟ್ಟಡಗಳು ಬಳಕೆಯಾಗಲಿವೆ. ಕಟ್ಟಡದ ಕೊರತೆ ನಿವಾರಣೆಯಾಗಲಿದೆ. ವಿದ್ಯುತ್‌ ಸಂಪರ್ಕದ ಕೆಲಸ ಪ್ರಗತಿಯಲ್ಲಿದೆ.

ಒಂದು ಕಟ್ಟಡದಲ್ಲಿ 5 ತರಗತಿ ಕೊಠಡಿಗಳು, 1 ದಾಸ್ತಾನು ಕೊಠಡಿ, 2 ಪ್ರಯೋಗಾಲಯ ಕೊಠಡಿ, ಗ್ರಂಥಾಲಯ ಕೊಠಡಿ, ಗಣಕಯಂತ್ರ ಕೊಠಡಿ, ಸಿಬ್ಬಂದಿ ಕೊಠಡಿ, ಪ್ರಾಂಶುಪಾಲರ ಕೊಠಡಿ, ಕಚೇರಿ ಒಳಗೊಂಡಿದ್ದು, 2 ವಸತಿ ಗೃಹಗಳು, 1 ಅಡುಗೆ ಮನೆ, 4 ಕುಟುಂಬಗಳು ವಾಸಿಸುವ ಬೋಧಕ ಸಿಬ್ಬಂದಿ ವಸತಿ ಗೃಹ, 4 ಕುಟುಂಬ ವಾಸಿಸುವ ಬೋಧಕೇತರ ಸಿಬ್ಬಂದಿ ವಸತಿಗೃಹ ಹಾಗೂ ಪ್ರಾಂಶುಪಾಲರ ವಸತಿ ಗೃಹ ಕಟ್ಟಡಗಳು ಮತ್ತು ನೆಲಮಟ್ಟದ ನೀರಿನ ಟ್ಯಾಂಕ್‌ ನಿರ್ಮಾಣ ಪೂರ್ಣಗೊಂಡಿದೆ.

‘ಇನ್ನೂ 1 ಬೋಧಕ ಸಿಬ್ಬಂದಿಯ ವಸತಿ ಗೃಹ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ’ ಎಂದು ಸ್ಥಳೀಯ ಕಾಮಗಾರಿ ಎಂಜಿನಿಯರ್‌ ಸೋಮೇಶ್‌ ವಿವರಿಸಿದರು.

2016ರ ಮಾರ್ಚ್‌ನಲ್ಲಿ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. 23 ತಿಂಗಳಲ್ಲಿ ನೂತನ ಕಟ್ಟಡ ಸಿದ್ಧವಾಗಿದೆ. ಫಿರೋಜಾಬಾದ ಕಮಲಾಪುರ ರಾಜ್ಯ ಹೆದ್ದಾರಿ 125ರ ಬದಿಯಲ್ಲಿ ಕೋಡ್ಲಿಯ ಒಡೆಯ ಹನುಮಾನ ಮಂದಿರದ ಬಳಿ ಶಿಕ್ಷಣ ಸೌಧ ನಿರ್ಮಾಣವಾಗಿ ಜನರನ್ನು ಆಕರ್ಷಿಸುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೇಲ್ವಿಚರಣೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಎಂವಿ ಕನಸ್ಟ್ರಕ್ಷನ್‌ ಕಂಪನಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದೆ. ಈ ಕಟ್ಟಡ ಪೂರ್ಣಗೊಳಿಸಲು ಕಾಲಮಿತಿಗಿಂತ 5 ತಿಂಗಳು ಹೆಚ್ಚು ಸಮಯ ಪಡೆದಿದೆ.

‘ಕೆಲ ದಿನಗಳ ಹಿಂದೆ ಕೋಡ್ಲಿಯ ನೂತನ ಕಟ್ಟಡ ಪರಿಶೀಲಿಸಿದ್ದೇನೆ. ಬೇಗ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಸೂಚಿಸಿದ್ದೇನೆ. ಕಾಮಗಾರಿ ಪೂರ್ಣಗೊಂಡ ಮೇಲೆ ಬಾಡಿಗೆ ಕಟ್ಟಡದಿಂದ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಂದಾನವಾಜ ಗೇಸುದರಾಜ್‌ ತಿಳಿಸಿದರು.

‘ಒಳರಸ್ತೆ, ಚರಂಡಿ, ಕ್ರೀಡಾಂಗಣ ಉದ್ಯಾನ ಹಾಗೂ ರಂಗಮಂದಿರದ ಕೊರತೆಯಿದೆ. ಇವುಗಳ ಜತೆಗೆ ಮಕ್ಕಳಿಗೆ ಪೀಠೋಪಕರಣ ಮಂಜೂರಾತಿಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು’ ಎಂದರು.

250 ಮಕ್ಕಳ ಗರಿಷ್ಠ ದಾಖಲಾತಿಯ ಶಾಲೆಯಲ್ಲಿ ಸದ್ಯ 241 ವಿದ್ಯಾರ್ಥಿನಿಯರು ಇದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ಉತ್ತಮ ಫಲಿತಾಂಶ ಗಳಿಸಿದೆ. 2013–14ರಲ್ಲಿ ಶೇ 96, 2014–15ರಲ್ಲಿ ಶೇ 90, 2015–16ರಲ್ಲಿ ಶೇ 100, 2016–17ರಲ್ಲಿ ಶೇ 100 ಗಳಿಸಿದೆ.

ವಲ್ಲ್ಯಾಪುರ ಶಾಲೆಗೆ ಜಾಧವ್‌ ಕಟ್ಟಡ ನಿರ್ಮಾಣ!

6ರಿಂದ 10ನೇ ತರಗತಿವರೆಗಿನ ಕಿತ್ತೂರು ಚನ್ನಮ್ಮ ವಸತಿ ಶಾಲೆ 2009ರಲ್ಲಿ ತಾಲ್ಲೂಕಿನ ಚಿಮ್ಮನಚೋಡ್‌ಗೆ ಮಂಜೂರಾಗಿತ್ತು. ಅಲ್ಲಿ ಜಾಗ ಸಿಗದ ಕಾರಣ ಇದನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಸುನೀಲ ವಲ್ಲ್ಯಾಪುರ ಅವರು ಕೋಡ್ಲಿಯಲ್ಲಿ ಆರಂಭಿಸಲು ಕ್ರಮ ಕೈಗೊಂಡಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಶಾಲೆಗೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ₹9.87 ಕೋಟಿ ಅನುದಾನ ಮಂಜೂರು ಮಾಡಿಸಿ ಹಾಲಿ ಕಾಂಗ್ರೆಸ್‌ ಶಾಸಕ ಡಾ.ಉಮೇಶ ಜಾಧವ್‌ ನೂತನ ಕಟ್ಟಡ ನಿರ್ಮಾಣಕ್ಕೆ ಕಾರಣವಾಗಿದ್ದಾರೆ.

* * 

ಕೆಲ ದಿನಗಳ ಹಿಂದೆ ಕೋಡ್ಲಿ ಕಿತ್ತೂರು ಚನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡ ಪರಿಶೀಲಿಸಿದ್ದೇನೆ. ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದೇನೆ.

ಬಂದಾನವಾಜ ಗೇಸುದರಾಜ್  ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.