ಸೋಮವಾರ, ಜೂಲೈ 6, 2020
21 °C

ರೈತರ ಸುಧಾರಣೆಯಿಂದ ದೇಶಕ್ಕೆ ನೆಮ್ಮದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಸುಧಾರಣೆಯಿಂದ ದೇಶಕ್ಕೆ ನೆಮ್ಮದಿ

ಕೋಲಾರ: ‘ದೇಶ ನೆಮ್ಮದಿಯಾಗಿರಲು, ಹಸಿರು ಕಾಣಲು, ನಾವೆಲ್ಲರೂ ಉಸಿರಾಡಲು ರೈತರ ಸ್ಥಿತಿ ಮೊದಲು ಸುಧಾರಣೆಯಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

ಕೃಷಿ ಇಲಾಖೆ, ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಾವಯವ ಕೃಷಿಕರ ಸಹಕಾರ ಸಂಘಗಳ ಒಕ್ಕೂಟ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆರಂಭವಾದ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ‘ರೈತರ ವಿಚಾರ ಬಂದಾಗ ಬಾವುಟ, ಪಾರ್ಟಿ ತಿಪ್ಪೆಗೆ ಬಿಸಾಕಿ ರೈತರ ಪರ ನಿಲ್ಲಬೇಕು ಮತ್ತು ಗೌರವ ನೀಡಬೇಕು. ಆಗ ಮಾತ್ರ ಅವರ ಅಭಿವೃದ್ಧಿ ಸಾಧ್ಯ’ ಎಂದರು.

‘ರೈತರು ತಮಗಾಗುವ ಅನ್ಯಾಯ ಪ್ರಶ್ನಿಸುವ ಮಟ್ಟಕ್ಕೆ ಕೃಷಿಯ ಬಗ್ಗೆ ತಿಳಿವಳಿಕೆ ಹೊಂದಬೇಕು. ರೈತರು ಪ್ರಶ್ನೆ ಮಾಡದೆ ಅನ್ಯಾಯಕ್ಕೆ ಒಳಗಾಗುತ್ತಿದ್ದರೆ ಜೀವನವಿಡೀ ಬಗ್ಗುತ್ತಲೇ ಇರಬೇಕಾಗುತ್ತದೆ. ಬೆಳೆದು ನಿಲ್ಲಲು ಸಾಧ್ಯವಾಗುವುದಿಲ್ಲ. ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪ್ರಶ್ನಿಸಲು ರೈತರು ಕೃಷಿಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೃಷಿ ಎನ್ನುವುದು ಕಾಗದ, ಪುಸ್ತಕ ಅಥವಾ ಪ್ರಯೋಗಾಲಯಗಳಲ್ಲಿ ಸಿಗುವುದಿಲ್ಲ. ಭೂಮಿಯಲ್ಲಿ ಸಿಗುವುದು ಮಾತ್ರ ನಿಜವಾದ ಕೃಷಿ. ಸಿರಿಧಾನ್ಯ ಮೇಳವು ಒಂದು ರೀತಿಯಲ್ಲಿ ಶಿಕ್ಷಣವಿದ್ದಂತೆ. ಮರೆತು ಹೋಗಿರುವ ಹಳೆಯ ಪದ್ಧತಿಗಳನ್ನು ನೆನಪಿಸಿಕೊಂಡು, ಪ್ರಸ್ತುತ ಬದುಕಿಗೆ ಬೇಕಾದ್ದನ್ನು ಅಳವಡಿಸಿಕೊಂಡು ಮುಂದುವರಿಯಲು ಸಹಾಯಕ’ ಎಂದು ತಿಳಿಸಿದರು.

ನೀಲಗಿರಿ ತೆರವು: ‘ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ಪಾಪಿಗಳು ಕೆರೆಗಳಲ್ಲಿ ಜಾಲಿ ಗಿಡ ತಂದು ಹಾಕಿದ್ದಾರೆ. ಜಾಲಿ ಮರವು ದನ ಕರುಗಳಿಗೆ ಮೇವು ಆಗುವುದಿಲ್ಲ, ಪಕ್ಷಿಗಳಿಗೆ ತಿನ್ನಲು ಹಣ್ಣು ಕೊಡುವುದಿಲ್ಲ, ಬಿಸಿಲಿನಲ್ಲಿ ದಣಿದು ಬಂದ ಜನರಿಗೆ ನೆರಳು ಕೊಡುವುದಿಲ್ಲ. ಮುಳ್ಳಿನಿಂದ ತುಂಬಿರುವ ಆ ಮರಗಳು ನಿಷ್ಪ್ರಯೋಜಕ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮಾವು ಬೇವು ಮರಗಳೆಲ್ಲಾ ಮಾಯವಾಗಿ ಭೂಮಿಯೆಲ್ಲಾ ನೀಲಗಿರಿಮಯವಾಗಿದೆ. ಹೆಚ್ಚಿನ ಖರ್ಚಿಲ್ಲ ಮತ್ತು ಬೆಳೆ ಸುಲಭವೆಂದು ಜನ ನೀಲಗಿರಿ ಹಾಕಿದ್ದಾರೆ. ಅಂತರ್ಜಲಕ್ಕೆ ಮಾರಕವಾಗಿರುವ ನೀಲಗಿರಿ ನಿಷೇಧಕ್ಕೆ ಕಾನೂನು ಮಾಡಲಾಗಿದೆ. ಜಿಲ್ಲೆಯಲ್ಲಿ ಆರು ತಿಂಗಳಲ್ಲಿ ನೀಲಗಿರಿ ಮರಗಳನ್ನು ಸಂಪೂರ್ಣ ತೆರವುಗೊಳಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಸಾವಯವ ಭಾಗ್ಯ: ‘ರಾಜ್ಯ ಸರ್ಕಾರವು ಸಾವಯವ ಭಾಗ್ಯ ಜಾರಿಗೊಳಿಸಿದ್ದು, ಇದಕ್ಕೆ ₹ 54 ಕೋಟಿ ಮೀಸಲಿಟ್ಟಿದೆ. ರಾಜ್ಯದ 566 ಹೋಬಳಿಗಳಲ್ಲಿ 6,070 ಸಾವಿರ ರೈತರು ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಪ್ರಾಂತೀಯ ಸಾವಯವ ಕೃಷಿಕರ ಸಂಘಗಳನ್ನು ರಚಿಸಲಾಗಿದೆ’ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ವಿವರಿಸಿದರು.

ಬೆಂಗಳೂರಿನಲ್ಲಿ ಜ.20 ಮತ್ತು 21ರಂದು ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳ ನಡೆಸಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸಾವಯವ ಕೃಷಿಕರು, ಸಿರಿಧಾನ್ಯ ಬೆಳೆಗಾರರು ಮೇಳದಲ್ಲಿ ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಯಶೋದಾ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಾವಯವ ಕೃಷಿಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ವಿ.ರೆಡ್ಡಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಉಪಾಧ್ಯಕ್ಷೆ ಸಿ.ಲಕ್ಷ್ಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಕೆ.ಶಿವಕುಮಾರ್, ಸಹಾಯಕ ನಿರ್ದೇಶಕ ಎಸ್.ರಂಗಸ್ವಾಮಿ ಪಾಲ್ಗೊಂಡಿದ್ದರು.

* * 

2004ರಿಂದ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಾವಯವ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೇರೇಪಿಸಲಾಗುತ್ತಿದೆ. ಬಿ.ವೈ.ಶ್ರೀನಿವಾಸ್‌, ಕೃಷಿ ಇಲಾಖೆ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.