ಬುಧವಾರ, ಜೂಲೈ 8, 2020
29 °C

ಜಂಭದ ಹೆಣ್ಣಿಲಿ

ಡಿ.ಎನ್. ಶ್ರೀನಾಥ್ Updated:

ಅಕ್ಷರ ಗಾತ್ರ : | |

ಜಂಭದ ಹೆಣ್ಣಿಲಿ

ಒಂದು ಮಾವಿನ ಮರದಲ್ಲಿ ಪಕ್ಷಿಯೊಂದು ವಾಸಿಸುತ್ತಿತ್ತು. ಅದರ ಕೆಳಗೆ ಒಂದು ಹೆಣ್ಣಿಲಿಯೂ ವಾಸಿಸುತ್ತಿತ್ತು. ಪಕ್ಷಿಯು ಎಲ್ಲರೊಂದಿಗೆ ಬೆರೆಯುತ್ತಿತ್ತು, ಅದು ಎಲ್ಲರಿಗೂ ಆಪತ್ಕಾಲದಲ್ಲಿ ಸಹಾಯ ಮಾಡುತ್ತಿತ್ತು. ಆದರೆ ಹೆಣ್ಣಿಲಿಗೆ ತುಂಬಾ ಜಂಭವಿದ್ದು, ಜಗಳಗಂಟಿಯಾಗಿತ್ತು.

ಎರಡೂ ಒಂದೇ ಮರದಲ್ಲಿ ವಾಸಿಸುತ್ತಿದ್ದರಿಂದ ಪಕ್ಷಿ ಹೋದಲ್ಲಿಗೆ ಹೆಣ್ಣಿಲಿಯೂ ಹೋಗುತ್ತಿತ್ತು. ಹೆಣ್ಣಿಲಿಯಿಂದ ಏನಾದರೂ ತಪ್ಪಾದರೆ, ಅದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿರಲಿಲ್ಲ, ಪ್ರತಿಯಾಗಿ ಅದು ಬೇರೆ ಕಾರಣವನ್ನು ಹೇಳಿ ತಾನೇ ಸರಿ ಎಂದು ತೋರ್ಪಡಿಸಿಕೊಳ್ಳುತ್ತಿತ್ತು.

ಒಂದು ದಿನ ಪಕ್ಷಿ ಹೇಳಿತು - ‘ನಾನು ನದಿಗೆ ಸ್ನಾನ ಮಾಡಲು ಹೋಗುತ್ತೇನೆ.’

‘ನಾನೂ ನದಿಗೆ ಸ್ನಾನ ಮಾಡಲು ಹೋಗುತ್ತೇನೆ’ ಎಂದಿತು ಹೆಣ್ಣಿಲಿ.

ಆದರೆ ಪಕ್ಷಿ ಮಾತನಾಡಲಿಲ್ಲ. ಅದು ಪುರ್ರನೆ ಹಾರಿ ನದಿಯ ಬಳಿಗೆ ಬಂತು. ಅತ್ತ ಹೆಣ್ಣಿಲಿ ಸಹ ಓಡುತ್ತಾ - ನೆಗೆಯುತ್ತಾ ನದಿಯ ಸಮೀಪಕ್ಕೆ ಬಂತು. ಪಕ್ಷಿ ನದಿಯಲ್ಲಿ ಒಂದೆರೆಡು ಬಾರಿ ಮುಳುಗಿ, ಹೊರಬಂದು ರೆಕ್ಕೆಯನ್ನು ಬಡಿಯಿತು. ಹೆಣ್ಣಿಲಿ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿತು. ಪಕ್ಷಿ ಕೂಡಲೇ ಅದರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತಕ್ಷಣ ಅದರ ಸಮೀಪಕ್ಕೆ ಬಂದು ಅದನ್ನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ದಡದ ಆಚೆಗೆ ಬಂತು.

ಮನೆಗೆ ಬಂದ ಹೆಣ್ಣಿಲಿ ಕಾರಣವಿಲ್ಲದೆ ಪಕ್ಷಿಯೊಂದಿಗೆ ಜಗಳವಾಡಿತು.

‘ನಾನು ನಿನ್ನನ್ನು ನೀರಿನಲ್ಲಿ ಮುಳುಗುವುದರಿಂದ ಕಾಪಾಡಿದೆ, ಆದರೆ ನೀನು ಅಕಾರಣವಾಗಿ ಜಗಳವಾಡುತ್ತಿದ್ದೀಯಾ!’ ಎಂದು ಪಕ್ಷಿ ನೊಂದು ಹೇಳಿತು.

‘ಆದರೆ ನಾನೆಲ್ಲಿ ಮುಳುಗುತ್ತಿದ್ದೆ? ನಾನು ನೀರಿನಲ್ಲಿ ಮುಳುಗೇಳುತ್ತಿದ್ದೆ’ ಎಂದು ಹೆಣ್ಣಿಲಿ ವಾದಿಸಿತು.

ಪಕ್ಷಿ ಮಾತನಾಡಲಿಲ್ಲ. ಮರುದಿನ ಪಕ್ಷಿ ಹೀಗೇ ಮಾತನಾಡುವಾಗ ಹೇಳಿತು, ‘ನಾನಿಂದು ಬೋರೆ ಹಣ್ಣುಗಳನ್ನು ತರಲು ಹೋಗುತ್ತೇನೆ.’

‘ಇವತ್ತು ನನಗೂ ಬೋರೆ ಹಣ್ಣುಗಳನ್ನು ತಿನ್ನಬೇಕೆಂದು ಮನಸ್ಸಾಗುತ್ತಿದೆ. ನಾನೂ ಹೋಗುತ್ತೇನೆ.’

‘ನೀನು ಹೋಗಬೇಡ, ನಿನಗೆ ಮುಳ್ಳುಗಳು ಚುಚ್ಚುತ್ತವೆ. ನಾನು ನಿನಗಾಗಿ ಬೋರೆ ಹಣ್ಣುಗಳನ್ನು ತರುವೆ’ ಎಂದು ಪಕ್ಷಿ ಹೇಳಿತು.

‘ನೀನು ತರುವುದು ಬೇಡ, ನಾನೇ ತರಬಲ್ಲೆ, ನನಗೆ ಮುಳ್ಳುಗಳ ಭಯವಿಲ್ಲ’ ಎಂದು ಹೆಣ್ಣಿಲಿ ವಾದಿಸಿತು.

ಪಕ್ಷಿ ಹಾರಿ ಮರದ ಬಳಿಗೆ ಹೋದರೆ, ಹೆಣ್ಣಿಲಿ ಓಡೋಡಿ ಮರದ ಸಮೀಪಕ್ಕೆ ಬಂತು. ಪಕ್ಷಿ ಮೂರ್ನಾಲ್ಕು ಬೋರೆ ಹಣ್ಣುಗಳನ್ನು ತಿಂದು ಹಾರಿ ಹೋಯಿತು. ಆದರೆ ಹೆಣ್ಣಿಲಿ ಮುಳ್ಳುಗಳಲ್ಲಿ ಸಿಲುಕಿಕೊಂಡಿತು. ಅದು ಎಷ್ಟು ಹೊತ್ತಾದರೂ ಬರದಿದ್ದನ್ನು ಗಮನಿಸಿದ ಪಕ್ಷಿ ಮರದ ಸಮೀಪಕ್ಕೆ ಬಂದಾಗ ಹೆಣ್ಣಿಲಿ ಮುಳ್ಳುಗಳ ನಡುವೆ ಸಿಲುಕಿಕೊಂಡಿದ್ದನ್ನು ಗಮನಿಸಿತು. ಅದು ಹೆಣ್ಣಿಲಿಯನ್ನು ಮುಳ್ಳುಗಳಿಂದ ರಕ್ಷಿಸಿ ಮನೆಗೆ ಕರೆತಂದಿತು. ಮನೆಗೆ ಬಂದು ಸ್ವಲ್ಪ ಹೊತ್ತಿನಲ್ಲಿಯೇ ಹೆಣ್ಣಿಲಿ ಪಕ್ಷಿಯೊಂದಿಗೆ ಜಗಳ ಮಾಡಲು ಆರಂಭಿಸಿತು.

‘ನಾನು ಪೊದೆಗಳಲ್ಲಿ ಸಿಲುಕಿಕೊಂಡಿರಲಿಲ್ಲ. ನಾನು ಮೂಗನ್ನು ತುರಿಸಿಕೊಳ್ಳುತ್ತಿದ್ದೆ’ ಎಂದಿತು ಹೆಣ್ಣಿಲಿ.

ಮರುದಿನ ಪಕ್ಷಿ ಮಾತಿನ ಮಧ್ಯೆ ಹೇಳಿತು - ‘ಇಂದು ನಾನು ಬೆಲ್ಲ ತಿನ್ನಲು ಹೋಗುತ್ತೇನೆ.’

‘ನಿನಗೆ ನನ್ನ ಮನಸ್ಸಿನ ಮಾತು ತಿಳಿಯಿತು, ಬೆಲ್ಲ ತಿನ್ನಲು ನಾನೂ ಬರುತ್ತೇನೆ.’

‘ನೀನು ದೂರವೇ ನಿಂತಿರು, ನಾನೇ ನಿನಗೆ ಬೆಲ್ಲ ತಂದು ಕೊಡುತ್ತೇನೆ’ ಎಂದು ಪಕ್ಷಿ ಹೇಳಿತು.

ಕಡೆಗೆ ಎರಡೂ ಕಿರಾಣಿ ಅಂಗಡಿಗೆ ಬಂದವು. ಪಕ್ಷಿ ತನ್ನ ಕೊಕ್ಕಿನಿಂದ ಮೂರ್ನಾಲ್ಕು ಬಾರಿ ಬೆಲ್ಲವನ್ನು ತಿಂದು ಹಾರಿತು. ಆದರೆ ಹೆಣ್ಣಿಲಿ ಬೆಲ್ಲವನ್ನು ತಿನ್ನುತ್ತಲೇ ಇತ್ತು. ಈ ನಡುವೆ ಅಂಗಡಿಯ ಮಾಲೀಕ ಬೆಲ್ಲದ ದೊಡ್ಡ ಉಂಡೆಯನ್ನು ಒಡೆದ. ಆಗ ಬೆಲ್ಲದ ಒಂದು ಉಂಡೆ ಹೆಣ್ಣಿಲಿಯ ಮೇಲೆ ಬಿತ್ತು. ಅದು ಕೆಳಗೆ ಸೇರಿತು.

ಅತ್ತ ಎಷ್ಟು ಹೊತ್ತಾದರೂ ಹೆಣ್ಣಿಲಿ ಬರದಿದ್ದನ್ನು ಗಮನಿಸಿದ ಪಕ್ಷಿ ಕೂಡಲೇ ಕಿರಾಣಿ ಅಂಗಡಿಗೆ ಹಾರಿ ಬಂತು. ಪಕ್ಷಿ ಮೆಲ್ಲ-ಮೆಲ್ಲನೆ ಬೆಲ್ಲದ ಉಂಡೆಯನ್ನು ಕೊಕ್ಕಿನಿಂದ ಚೂರು-ಚೂರು ಮಾಡಿ, ಹೆಣ್ಣಿಲಿಯನ್ನು ಹೊರತಂದು, ತನ್ನೊಂದಿಗೆ ಕರೆದೊಯ್ಯಿತು.

ಮನೆಗೆ ಬಂದ ಹೆಣ್ಣಿಲಿ ಮತ್ತೆ ಪಕ್ಷಿಯೊಂದಿಗೆ ಜಗಳವಾಡಿತು. ‘ನಾನೇನು ನಿನಗೆ ಕೆಡುಕು ಮಾಡಿದೆ? ನಾನು ನಿನ್ನನ್ನು ಬೆಲ್ಲದ ಉಂಡೆಗಳಿಂದ ರಕ್ಷಿಸಿ ಕರೆತಂದಿದ್ದೇನೆ. ಇಲ್ಲದಿದ್ದರೆ ನೀನು ಅಲ್ಲಿಯೇ ಸತ್ತು ಹೋಗುತ್ತಿದ್ದೆ’ ಎಂದು ಪಕ್ಷಿ ಹೇಳಿತು.

‘ನಾನು ಬೆಲ್ಲದ ಉಂಡೆಗೆ ಕಾಲನ್ನು ತಿಕ್ಕಿಕೊಳ್ಳುತ್ತಿದ್ದೆ’ ಎಂದು ಹೆಣ್ಣಿಲಿ ಮತ್ತೆ ವಾದಿಸಿತು. ಪಕ್ಷಿ ಮಾತನಾಡದೆ ಮೌನವಹಿಸಿತು. ದಿನಗಳು ಕಳೆದವು. ಒಂದು ದಿನ ಮತ್ತೆ ಪಕ್ಷಿ ಹೇಳಿತು- ‘ನಾನಿಂದು ಆನೆಯ ಕಾಲುಗಳ ನಡುವಿನಿಂದ ಹೋಗುವೆ.’

‘ನಾನೂ ಸಹ ಆನೆಯ ಕಾಲುಗಳ ಕೆಳಗಿನಿಂದ ಹೋಗುವೆ’ ಎಂದು ಹೆಣ್ಣಿಲಿ ಹಿಂಜರಿಯದೆ ಹೇಳಿತು. ‘ಬೇಡ. ನೀನು ಅಪಾಯಕ್ಕೆ ಸಿಲುಕಿಕೊಳ್ಳುತ್ತೀಯಾ, ಆನೆಗಳ ಕಾಲುಗಳ ಅಡಿ ನೀನು ಅರಚಿ ಹೋಗಬಹುದು’ ಎಂದು ಪಕ್ಷಿ ಕಳವಳದಿಂದ ಹೇಳಿತು.

‘ಏನು ಮಾತನಾಡುತ್ತಿದ್ದೀಯಾ! ನಾನು ತುಂಬಾ ಬುದ್ಧಿವಂತೆ’ ಎಂದು ಹೆಣ್ಣಿಲಿ ಬೀಗಿತು.

ಸರಿ, ಪಕ್ಷಿಯು ಎದುರಿಗೆ ಬರುತ್ತಿದ್ದ ಆನೆಗಳ ಕಾಲುಗಳ ನಡುವಿನಿಂದ ಪುರ್‍ರನೆ ಹಾರಿಹೋಯಿತು. ಆದರೆ ಹೆಣ್ಣಿಲಿ ಹಿಂದು-ಮುಂದು ಯೋಚಿಸದೆ ಆನೆಯ ಕಾಲುಗಳ ನಡುವೆ ಬಂತು. ಆಗ ಆನೆಯ ಹಿಂದಿನ ಒಂದು ಕಾಲಿನ ಉಗುರಿನಿಂದಾಗಿ ಹೆಣ್ಣಿಲಿಯ ಬಾಲ ತುಂಡಾಯಿತು. ಅದನ್ನು ಕಂಡು ಪಕ್ಷಿಗೆ ತುಂಬಾ ದುಃಖವಾಯಿತು.

‘ಇನ್ನು ಮುಂದೆ ನಾನು ಜಂಭದ ಮಾತುಗಳನ್ನು ಆಡುವುದಿಲ್ಲ. ನೀನು ಹೇಳಿದಂತೆಯೇ ಕೇಳುತ್ತೇನೆ’ ಎಂದು ಹೆಣ್ಣಿಲಿ ತನ್ನ ತಪ್ಪಿನ ಅರಿವಾಗಿ ಗಟ್ಟಿಯಾಗಿ ರೋದಿಸಿತು.

ಆಧಾರ: ನಿಮಾಡಿ ಜಾನಪದ ಕಥೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.