ಸೋಮವಾರ, ಆಗಸ್ಟ್ 3, 2020
25 °C

ಟಿಕೆಟ್‌ ಹಂಚಿಕೆಗೆ ಮೂರು ಹಂತದ ಸಮೀಕ್ಷೆ; ರಾಜ್ಯದಲ್ಲಿ ಮೋದಿ ಪ್ರಚಾರಕ್ಕೇ ಬಿಜೆಪಿ ಹೈಕಮಾಂಡ್‌ ಒಲವು

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಟಿಕೆಟ್‌ ಹಂಚಿಕೆಗೆ ಮೂರು ಹಂತದ ಸಮೀಕ್ಷೆ; ರಾಜ್ಯದಲ್ಲಿ ಮೋದಿ ಪ್ರಚಾರಕ್ಕೇ ಬಿಜೆಪಿ ಹೈಕಮಾಂಡ್‌ ಒಲವು

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ನಿರ್ಧರಿಸಿರುವ ಬಿಜೆಪಿಯ ವರಿಷ್ಠರು, ಮೂರು ಹಂತದ ಆಂತರಿಕ ಸಮೀಕ್ಷೆಯ ವರದಿಯನ್ನು ಆಧರಿಸಿಯೇ ಟಿಕೆಟ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.

ಆಯಾ ಕ್ಷೇತ್ರಗಳ ಮತದಾರರ ಒಲವು ಯಾವ ಪಕ್ಷದ ಕಡೆ ಇದೆ, ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಯುವುದು ಮೊದಲ ಹಂತದ ಸಮೀಕ್ಷೆ. ಒಂದೊಮ್ಮೆ ಜನರ ಒಲವು ಬಿಜೆಪಿ ಕಡೆ ಇದ್ದಲ್ಲಿ, ಯಾವ ಅಭ್ಯರ್ಥಿ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬುದನ್ನು ಅರಿಯುವುದು ಎರಡನೇ ಹಂತದ ಸಮೀಕ್ಷೆ. ಮತದಾರರ ಒಲವು ಅನ್ಯ ಪಕ್ಷಗಳತ್ತ ಇದ್ದಲ್ಲಿ ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸಿದರೆ ಮತದಾರರ ಮನಸ್ಥಿತಿ ಬದಲಿಸಲು ಸಾಧ್ಯ ಎಂಬುದನ್ನು ತಿಳಿಯುವುದು ಮೂರನೇ ಹಂತದ ಸಮೀಕ್ಷೆ.

ಇದಲ್ಲದೆ, ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರರು ಅಥವಾ ಇತರ ಯಾವುದಾದರೂ ಪಕ್ಷಗಳ ಅಭ್ಯರ್ಥಿಗಳತ್ತ ಕ್ಷೇತ್ರದ ಮತದಾರರ ಒಲವು ಇರುವುದು ಕಂಡುಬಂದಲ್ಲಿ, ಯಾವ ತಂತ್ರ ಅನುಸರಿಸಬೇಕು ಎಂಬುದನ್ನು ತಿಳಿಯಲು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರೆ ಒಳಿತು ಎಂದು ಪಕ್ಷದ ‘ಚಿಂತಕರ ಚಾವಡಿ‘ ಬಯಸಿದೆ ಎಂದು ಹೈಕಮಾಂಡ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ರಾಜ್ಯದ 100ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಕಂಡುಬರುತ್ತಿಲ್ಲ’ ಎಂಬ ಅಭಿಪ್ರಾಯಗಳು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದಲೇ ವ್ಯಕ್ತವಾಗಿರುವುದರಿಂದ ವಿಶಿಷ್ಟ ತಂತ್ರ ಅನುಸರಿಸಲು ನಿರ್ಧರಿಸಲಾಗಿದೆ. ಇತರ ಪಕ್ಷಗಳತ್ತಲೇ ಮತದಾರರ ಒಲವು ಇರುವ ಕ್ಷೇತ್ರಗಳಲ್ಲಿ ಈಹಿಂದೆ ಸ್ಪರ್ಧಿಸಿ ಗೆದ್ದಿರುವ ಅಥವಾ ಸೋತಿರುವ ತಮ್ಮ ಅಭ್ಯರ್ಥಿಗಳನ್ನು ಬದಲಿಸಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿದಲ್ಲಿ ಪಕ್ಷಕ್ಕೆ ಗೆಲುವು ದೊರೆಯಬಹುದೇ ಎಂಬುದನ್ನೂ ಕಾರ್ಯಕರ್ತರಿಂದಲೇ ಅರಿಯಲು ತೀರ್ಮಾನಿಸಲಾಗಿದೆಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದರು.

ಇದುವರೆಗೆ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಟಿಕೆಟ್‌ ಬಗ್ಗೆ ಭರವಸೆ ನೀಡಿಲ್ಲ. ಫೆಬ್ರುವರಿ ಅಂತ್ಯದ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ನಂತರ

ವಷ್ಟೇ ಸ್ಪರ್ಧಿಗಳ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ವಿವರಿಸಿದರು.

ಪ್ರತಿ ಜಿಲ್ಲೆಗೆ ಪ್ರಧಾನಿ: ಕಳೆದ ತಿಂಗಳು ನಡೆದಿರುವ ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ 44ಕ್ಕೂ ಹೆಚ್ಚು ಬಹಿರಂಗ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆಗಾಗಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ಸಭೆ ಏರ್ಪಡಿಸುವ ಕುರಿತು ಚಿಂತನೆ ನಡೆದಿದೆ. ಚುನಾವಣೆ ಘೋಷಣೆ ಆದ ಬಳಿಕ ನಿಗದಿತ ದಿನಗಳಂದು 5ರಿಂದ 6 ಸಭೆಗಳಲ್ಲಿ ಭಾಗವಹಿಸುವ ಕುರಿತೂ ಮೋದಿ ಆಸಕ್ತಿ ತಾಳಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾ ಕೇಂದ್ರ ಹಾಗೂ ದೊಡ್ಡದೊಡ್ಡ ಪಟ್ಟಣಗಳಲ್ಲಿ ಪ್ರಧಾನಿಯವರ ಸಭೆಗಳಲ್ಲಿ ಆಯೋಜಿಸುವ ಮೂಲಕ ಮತದಾರರನ್ನು ಸೆಳೆಯಬೇಕು ಎಂಬುದು ವರಿಷ್ಠರ ಆಲೋಚನೆಯಾಗಿದೆ. ಇದೇ 30ರಂದು ನಡೆಯಲಿರುವ ಪಕ್ಷದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲೂ ಮೋದಿ ಭಾಗವಹಿಸಲಿದ್ದು, ಚುನಾವಣೆ ಘೋಷಣೆ ಆಗುವುದರೊಳಗೇ ಅವರು ನಾಲ್ಕಾರು ಬಾರಿ ರಾಜ್ಯ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.