ಗುರುವಾರ , ಜೂಲೈ 9, 2020
27 °C

ಉತ್ತರ ಪ್ರದೇಶ: ವಿರೋಧ ಪಕ್ಷಗಳ ‘ಮಹಾಮೈತ್ರಿ’ಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದ ಗೋರಖಪುರ ಮತ್ತು ಫೂಲ್‌ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ ರಚಿಸುವ ಸಮಾಜವಾದಿ ಪಕ್ಷದ (ಎಸ್‌ಪಿ) ಪ್ರಯತ್ನಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಶನಿವಾರ ಕರೆದಿದ್ದ ಸಭೆಯಿಂದ ಕಾಂಗ್ರೆಸ್‌ ಮತ್ತು ಬಹುಜನ ಸಮಾಜವಾದಿ ಪಕ್ಷದ ನಾಯಕರು ದೂರ ಉಳಿದಿದ್ದಾರೆ. ಎನ್‌ಸಿಪಿ, ಆರ್‌ಎಲ್‌ಡಿ, ಆರ್‌ಜೆಡಿ ಮತ್ತು ಎಡಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಮತಪತ್ರ ಬಳಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುವ ಸಂಬಂಧ  ಅಖಿಲೇಶ್ ಈ ಸಭೆಯನ್ನು ಕರೆದಿದ್ದರು.

ಬಿಜೆಪಿ ಅಭ್ಯರ್ಥಿಯ ವಿರುದ್ಧ ಮಹಾಮೈತ್ರಿಕೂಟದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದೂ ಶನಿವಾರದ ಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು ಎಂದು ಎಸ್‌ಪಿಯ ಮೂಲಗಳು ತಿಳಿಸಿವೆ.

ಇವಿಎಂ ಬದಲಿಗೆ ಮತಪತ್ರ ಬಳಕೆಗೆ ಒತ್ತಾಯಿಸಲು ಸಮಾಜವಾದಿ ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ಈ ಪಕ್ಷಗಳು ಘೋಷಿಸಿವೆ. ‘ಪಕ್ಷದ ಈ ಯತ್ನಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಕಾಂಗ್ರೆಸ್ ನಮಗೆ ಪತ್ರ ಬರೆದಿದೆ’ ಎಂದು ಎಸ್‌ಪಿ ಹೇಳಿಕೊಂಡಿದೆ.

ಗೋರಖಪುರ ಕ್ಷೇತ್ರವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಫೂಲ್‌ಪುರ ಲೋಕಸಭಾ ಕ್ಷೇತ್ರವನ್ನು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಪ್ರತಿನಿಧಿಸುತ್ತಿದ್ದರು.ಇಬ್ಬರೂ ರಾಜ್ಯ ರಾಜಕಾರಣಕ್ಕೆ ಮರಳಿದ ಕಾರಣ ಎರಡೂ ಕ್ಷೇತ್ರಗಳು ತೆರವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.