ಮಂಗಳವಾರ, ಆಗಸ್ಟ್ 11, 2020
27 °C

ಕಲೆ ಅರಳುವ ಸಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲೆ ಅರಳುವ ಸಮಯ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್‌ನ 15ನೇ ‘ಚಿತ್ರಸಂತೆ’ಗೆ ನಗರದ ಕುಮಾರಕೃಪಾ ರಸ್ತೆಯ ಪರಿಸರ ಸಜ್ಜಾಗಿದೆ. ಇಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಪರಿಸರ ಕಾಳಜಿ, ಹವಾಮಾನ ವೈಪರೀತ್ಯ ಈ ಬಾರಿಯ ಚಿತ್ರ ಸಂತೆಯ ಪ್ರಮುಖ ವಿಷಯ. ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಅವರು ಈ ಕಲಾಕೃತಿಗಳ ಮೇಳವನ್ನು ಉದ್ಘಾಟಿಸುವರು.

ವಿವಿಧ ರಾಜ್ಯಗಳಿಂದ ಬಂದಿರುವ 20ರಿಂದ 80 ವರ್ಷ ವಯೋಮಾನದ ಕಲಾವಿದರು ಈ ಸಂತೆಯಲ್ಲಿ ಭಾಗವಹಿಸಲಿದ್ದಾರೆ. 20ಕ್ಕೂ ಹೆಚ್ಚು ರಾಜ್ಯಗಳ 2,000 ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. 1,000 ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ 4 ಲಕ್ಷ ಕಲಾಪ್ರೇಮಿಗಳು ಪಾಲ್ಗೊಳ್ಳಬಹುದು ಮತ್ತು ₹3 ಕೋಟಿ ವಹಿವಾಟು ನಡೆಯಬಹುದೆಂದು ನಿರೀಕ್ಷಿಸಲಾಗಿದೆ.

ಚಿತ್ರಸಂತೆ ವೀಕ್ಷಿಸಲು ವಯಸ್ಸಾದವರು ಹಾಗೂ ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ವಿಶೇಷ ವಾಹನ ವ್ಯವಸ್ಥೆ ಇರಲಿದೆ. ಜನಪದ ನೃತ್ಯ ಹಾಗೂ ಚಂದ್ರಿಕಾ ಗುರುರಾಜ್‌ ಅವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ.

ಸಂಚಾರ ಮಾರ್ಗ ಬದಲಾವಣೆ: ಕುಮಾರಕೃಪಾ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮೌರ್ಯ ವೃತ್ತ ಮತ್ತು ಆನಂದರಾವ್‌ ವೃತ್ತದಿಂದ ಬರುವ ವಾಹನಗಳು, ರೇಸ್‌ ವ್ಯೂ ಜಂಕ್ಷನ್‌ ಮೂಲಕ ಕುಮಾರಕೃಪಾ ರಸ್ತೆ ಪ್ರವೇಶಿಸಲು ನಿರ್ಬಂಧಿಸಲಾಗಿದೆ. ಈ ವಾಹನಗಳು ಟ್ರಿಲೈಟ್‌ ಜಂಕ್ಷನ್, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್ ಹಾಗೂ ವಿಂಡ್ಸರ್‌ ಮ್ಯಾನರ್‌ ವೃತ್ತ ಮಾರ್ಗವಾಗಿ ಸಂಚರಿಸಬಹುದು.

ಟಿ. ಚೌಡಯ್ಯ ರಸ್ತೆಯಿಂದ ಬರುವ ವಾಹನಗಳು, ವಿಂಡ್ಸರ್‌ ಮ್ಯಾನರ್‌ ವೃತ್ತದ ಮೂಲಕ ಕುಮಾರಕೃಪಾ ರಸ್ತೆ ಪ್ರವೇಶಿಸಲು ಅವಕಾಶವಿಲ್ಲ. ಅದರ ಬದಲು ಹಳೇ ಹೈಗ್ರೌಂಡ್ಸ್‌ ಜಂಕ್ಷನ್‌, ಎಲ್‌.ಆರ್‌.ಡಿ.ಇ, ಬಸವೇಶ್ವರ ವೃತ್ತ ಹಾಗೂ ರೇಸ್‌ ಕೋರ್ಸ್‌ ರಸ್ತೆ ಮೂಲಕ ಸಾಗಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಾಹನ ನಿಲುಗಡೆ ವ್ಯವಸ್ಥೆ: ರೈಲ್ವೆ ಪ್ಯಾರಲಲ್ ರಸ್ತೆ, ರೇಸ್‌ಕೋರ್ಸ್‌ ರಸ್ತೆ (ಟ್ರಿಲೈಟ್‌ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ ರಸ್ತೆಯ ಪೂರ್ವ ಭಾಗ), ಕ್ರಿಸೆಂಟ್‌ ರಸ್ತೆ (ಗುರುರಾಜ ಕಲ್ಯಾಣ ಮಂಟಪದಿಂದ ಜನಾರ್ದನ್‌ ಹೋಟೆಲ್‌ವರೆಗೆ) ವಾಹನಗಳ ನಿಲುಗಡೆಗೆ ಅವಕಾಶ

ಕಲ್ಪಿಸಲಾಗಿದೆ.

ಸಂತೆಗೆ ಬರುವವರಿಗೆ ಕಿವಿಮಾತು

* ಬೆಳಗ್ಗೆಯೇ ಚಿತ್ರಸಂತೆಗೆ ಭೇಟಿ ನೀಡಿದರೆ ಉತ್ತಮ ಪೇಂಟಿಂಗ್‌ ಖರೀದಿಸಬಹುದು

* ಪೇಟಿಂಗ್ಸ್‌ ಖರೀದಿಸಲು ಅಗತ್ಯ ಹಣ ತನ್ನಿ. ಜತೆಗೆ ಸ್ಥಳದಲ್ಲಿ ಎಟಿಎಂ, ಕ್ರೆಡಿಟ್‌, ಡೆಬಿಟ್‌, ಪೇಟಿಎಂ ಬಳಸಬಹುದು.

* ನೀರು ಹಾಗೂ ಲಘು ಆಹಾರವನ್ನು ಜತೆಯಲ್ಲಿ ತಂದರೆ ಒಳ್ಳೆಯದು

* ಚಿತ್ರಸಂತೆಯಲ್ಲಿ ಜನದಟ್ಟಣೆ ಇರುವುದರಿಂದ ಕುಳಿತುಕೊಳ್ಳಲು ಆಸನ ಲಭ್ಯವಿರುವುದಿಲ್ಲ

* ತಡವಾಗಿ ಬರುವವರಿಗೆ ಪಾರ್ಕಿಂಗ್‌ ಸೌಲಭ್ಯ ಸಿಗುವುದು ಕಷ್ಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.