ಶನಿವಾರ, ಜೂಲೈ 4, 2020
21 °C

ನಾಳೆಯಿಂದ ನಗರದಲ್ಲಿ ರಾಷ್ಟ್ರೀಯ ಏರೋಲಂಪಿಕ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆಯಿಂದ ನಗರದಲ್ಲಿ ರಾಷ್ಟ್ರೀಯ ಏರೋಲಂಪಿಕ್ಸ್‌

ಬೆಂಗಳೂರು: ವಿದ್ಯಾರ್ಥಿಗಳನ್ನು ವೈಮಾನಿಕ ಕ್ಷೇತ್ರದತ್ತ ಸೆಳೆಯುವ ಉದ್ದೇಶದಿಂದ ಏರೋನಾಟಿಕಲ್‌ ಸೊಸೈಟಿ ಆಫ್‌ ಇಂಡಿಯಾ ನಗರದಲ್ಲಿ ಇದೇ 8 ರಿಂದ 10 ರವರೆಗೆ ‘ರಾಷ್ಟ್ರೀಯ ಏರೋಲಂಪಿಕ್ಸ್‌–2018’ ಸ್ಪರ್ಧೆ ಏರ್ಪಡಿಸಿದೆ.

ಇದರಲ್ಲಿ 11 ರಾಜ್ಯಗಳ 22 ತಂಡಗಳು ಪಾಲ್ಗೊಳ್ಳುತ್ತಿವೆ ಎಂದು ಏರೋನಾಟಿಕಲ್‌ ಸೊಸೈಟಿ ಆಫ್‌ ಇಂಡಿಯಾದ ಉಪಾಧ್ಯಕ್ಷ ಸಿ.ಕಲೈವಾನನ್‌ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ದೇಶ–ವಿದೇಶಗಳಲ್ಲಿ ವಾಯುಯಾನ ಕ್ಷೇತ್ರ ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಪ್ರಯಾಣಿಕ ಸಂಚಾರ ಪ್ರತಿ ವರ್ಷ ಶೇ 20 ರಿಂದ 25 ರಷ್ಟು ಹೆಚ್ಚಳವಾಗುತ್ತಿದೆ. 2017 ರಲ್ಲಿ 2 ಕೋಟಿ ಜನ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಒಂದು ವಿಮಾನದ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 100  ಜನ ನುರಿತ ಸಿಬ್ಬಂದಿ ಅಗತ್ಯವಿದೆ ಎಂದು ಅವರು ಹೇಳಿದರು.

‘ಮುಂದಿನ ದಿನಗಳಲ್ಲಿ ನಾಗರಿಕ ವಿಮಾನಯಾನ ಮತ್ತು ವಾಯುಪಡೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಅದಕ್ಕೆ ಅಗತ್ಯವಿರುವಷ್ಟು ತರಬೇತಿ ಪಡೆದ ಮಾನವಸಂಪನ್ಮೂಲವಿಲ್ಲ. ‘ಏರೋಲಂಪಿಕ್ಸ್‌’ ಮೂಲಕ ವಿದ್ಯಾರ್ಥಿಗಳನ್ನು ಈ ಕ್ಷೇತ್ರದತ್ತ ಸೆಳೆಯುವುದು ಮತ್ತು ವೃತ್ತಿ ಜೀವನದಲ್ಲಿ ಎಂಜಿನಿಯರ್‌ಗಳಾಗಿ, ವಿಜ್ಞಾನಿಗಳಾಗಿ ಮತ್ತು ವಿನ್ಯಾಸಕರನ್ನಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ನಮ್ಮ ಉದ್ದೇಶ’ ಎಂದರು. ಈ ಸ್ಪರ್ಧೆಗಾಗಿ ದೇಶದ 600 ಕ್ಕೂ ಹೆಚ್ಚು ಶಾಲಾ–ಕಾಲೇಜುಗಳಿಗೆ ಆಹ್ವಾನ ಕಳಿಸಲಾಗಿತ್ತು. ‘ಕ್ಷೇತ್ರೀಯ ಸಾಗಾಣಿಕಾ ವಿಮಾನಗಳು’ ಎಂಬ ವಿಷಯದ ಬಗ್ಗೆ ನೀಡಿದ್ದ ವಿವರವಾದ ಪ್ರಾಜೆಕ್ಟ್‌ ವರದಿಗಳ ಆಧಾರದ ಮೇಲೆ ತಂಡಗಳನ್ನು ಆಯ್ಕೆ ಮಾಡಲಾಗಿದೆ.  ಇದರಲ್ಲಿ 10 ನೇ ತರಗತಿ ಮತ್ತು ಪ್ರಥಮ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ರಕ್ಷಣಾ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ಕಾವೇರಿಯಪ್ಪ ತಿಳಿಸಿದರು.

ಸ್ಪರ್ಧೆಯಲ್ಲಿ ವಿಜೇತರಾಗುವ ತಂಡಕ್ಕೆ ಬೆಂಗಳೂರಿನಲ್ಲಿ ನಡೆಯುವ ‘ಏರೋ ಇಂಡಿಯಾ– 2019’ದಲ್ಲಿ  ಪ್ರದರ್ಶನಕ್ಕೆ ಕರೆದೊಯ್ಯಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.