ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಶೀರ್‌ ಆರೋಗ್ಯಕ್ಕಾಗಿ ಸರ್ವಧರ್ಮೀಯರ ಪ್ರಾರ್ಥನೆ

Last Updated 6 ಜನವರಿ 2018, 19:41 IST
ಅಕ್ಷರ ಗಾತ್ರ

ಮಂಗಳೂರು: ಕೊಟ್ಟಾರ ಚೌಕಿ ಬಳಿಯ ಫಾಸ್ಟ್‌ಫುಡ್‌ ಮಳಿಗೆ ಬಾಗಿಲು ಮುಚ್ಚಿ ಮನೆಗೆ ಮರಳುವ ತವಕದಲ್ಲಿದ್ದಾಗ ಮತೀಯ ಗೂಂಡಾಗಳ ದಾಳಿಗೆ ಜರ್ಝರಿತವಾಗಿ ನಗರದ ಎ.ಜೆ.ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಆಕಾಶಭವನ ನಿವಾಸಿ ಅಹಮ್ಮದ್‌ ಬಶೀರ್‌ ಚೇತರಿಕೆಗಾಗಿ ಈಗ ಅಲ್ಲಿನ ಸರ್ವ ಧರ್ಮೀಯರೂಪ್ರಾರ್ಥಿಸುತ್ತಿದ್ದಾರೆ.

ಕಾವೂರು ಸಮೀಪದ ಆಕಾಶಭವನ ನಿವಾಸಿಯಾಗಿರುವ ಅಹಮ್ಮದ್ ಬಶೀರ್‌ ಮತ್ತು ಅವರ ಕುಟುಂಬದ ಸದಸ್ಯರು ಎಲ್ಲ ಧರ್ಮದ ಜನರೊಂದಿಗೆ ಉತ್ತಮ ಒಡನಾಟ, ಬಾಂಧವ್ಯ ಇರಿಸಿಕೊಂಡವರು. ಅವರ ಮೇಲಿನ ದಾಳಿಯ ಸುದ್ದಿ ತಿಳಿದ ಸ್ನೇಹಿತರು ತಂಡೋಪತಂಡವಾಗಿ ಬಂದು ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ. ಅವರ ಚೇತರಿಕೆಗಾಗಿ ಮಸೀದಿಗಳು ಮಾತ್ರವಲ್ಲ ದೇವಾಲಯಗಳು, ಚರ್ಚ್‌ಗಳಲ್ಲೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.

‘ನಮ್ಮ ಅಣ್ಣ (ಅಹಮ್ಮದ್ ಬಶೀರ್) ಯಾರೊಂದಿಗೂ ದ್ವೇಷ ಕಟ್ಟಿಕೊಂಡವನಲ್ಲ. ನಮ್ಮ ಕುಟುಂಬದ ಎಲ್ಲರೂ ಇಲ್ಲಿನ ಹಿಂದೂಗಳು, ಕ್ರೈಸ್ತ ಧರ್ಮೀಯರ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದೇವೆ. ಈಗ ಅವರೆಲ್ಲರೂ ಅಣ್ಣನ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ನಮಗೆ ಬೇರೆ ಏನೂ ಬೇಕಿಲ್ಲ. ಅಣ್ಣ ಆರೋಗ್ಯವಂತನಾಗಿ ಮರಳಬೇಕು. ನಮ್ಮ ಊರು ಹಿಂದಿಗಿಂತ ಹೆಚ್ಚು ಸೌಹಾರ್ದದಿಂದ ಇರಬೇಕು’ ಎಂದು ಬಶೀರ್‌ ಅವರ ತಮ್ಮ (ಚಿಕ್ಕಪ್ಪನ ಮಗ) ಹಕೀಂ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶುಕ್ರವಾರ ಮತ್ತು ಶನಿವಾರ ಹಲವು ಮಂದಿ ಅಣ್ಣನ ಮನೆಗೆ ಬಂದು ವಿಚಾರಿಸಿಕೊಂಡು ಹೋಗಿದ್ದಾರೆ. ಅನೇಕ ಮಸೀದಿಗಳಲ್ಲಿ ಆತನ ಆರೋಗ್ಯ
ಕ್ಕಾಗಿ ಪ್ರಾರ್ಥನೆ ನಡೆದಿದೆ. ಅದಕ್ಕಿಂತಲೂ ಮುಖ್ಯವಾಗಿ ಹಿಂದೂ ಧರ್ಮದ ಗೆಳೆಯರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ನಿತ್ಯಾನಂದ ಎಂಬ ಗೆಳೆಯರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಪೂಜೆ ಸಲ್ಲಿಸಿದ್ದಾರೆ. ಹಲವು ಚರ್ಚ್‌ಗಳಲ್ಲೂ ಅಣ್ಣನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ’ ಎಂದು ಹೇಳಿದರು.

ಕಣ್ಣು ತೆರೆದು ನೋಡಿದರು: ತಲವಾರುಗಳ ಪೆಟ್ಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಬಶೀರ್‌, 20 ನಿಮಿಷಗಳ ಕಾಲ ಕೃತ್ಯ ನಡೆದ ಸ್ಥಳದಲ್ಲೇ ಬಿದ್ದಿದ್ದರು. ಆಗ ಭಾರಿ ಪ್ರಮಾಣದ ರಕ್ತಸ್ರಾವವಾಗಿತ್ತು. ಎ.ಜೆ. ಆಸ್ಪತ್ರೆಗೆ ದಾಖಲಿಸಿದ ದಿನವೇ ಅವರಿಗೆ 17 ಬಾಟಲಿ ರಕ್ತ ಪೂರೈಸಲಾಗಿದೆ. ಬಳಿಕ ನಾಲ್ಕು ಬಾಟಲಿ ರಕ್ತ ನೀಡಲಾಗಿದೆ. ಕುತ್ತಿಗೆ, ತಲೆ, ಹೊಟ್ಟೆ ಮತ್ತು ಎಡಕೈಗೆ ಹಲವು ಶಸ್ತ್ರಚಿಕಿತ್ಸೆ ಮಾಡಲಾಗಿದೆ.

‘ಈಗ ಅವರ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಶುಕ್ರವಾರ ನಾನು ಮತ್ತು ಅವರ ಪತ್ನಿ ನೋಡಿಕೊಂಡು ಬಂದಿದ್ದೇವೆ’ ಎಂದು ಹಕೀಂ ಹೇಳಿದರು.

ಮಾಧ್ಯಮಗಳಿಗೆ ಸೂಚನೆ ರವಾನಿಸಿದ ಜಿಲ್ಲಾಧಿಕಾರಿ

ಮಂಗಳೂರು: ಕಾಟಿಪಳ್ಳದ ದೀಪಕ್‌ ರಾವ್‌ ಕೊಲೆ ಪ್ರಕರಣದ ನಂತರ ನಗರದ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ಇರುವುದರಿಂದ ಮತೀಯ ದ್ವೇಷ ಹಬ್ಬಿಸಲು ಕಾರಣವಾಗುವಂತಹ ಯಾವುದೇ ಸುದ್ದಿ ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ದೃಶ್ಯ ಮಾಧ್ಯಮದ ಎಲ್ಲ ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಸೂಚನೆ ನೀಡಿದ್ದಾರೆ.

ಬುಧವಾರ ರಾತ್ರಿ ಕೊಟ್ಟಾರ ಚೌಕಿಯಲ್ಲಿ ನಡೆದ ಅಹಮ್ಮದ್ ಬಶೀರ್‌ ಮೇಲಿನ ದಾಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಶುಕ್ರವಾರ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇಂತಹ ವರದಿಗಳಿಂದ ಮತೀಯ ದ್ವೇಷ ಹಬ್ಬುವ ಸಾಧ್ಯತೆ ಇದೆ ಎಂಬ ಪೊಲೀಸರ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿಯವರು ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ (ನಿಯಂತ್ರಣ) ಕಾಯ್ದೆ 1995ರ ಅಡಿಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ.

‘ಮತೀಯ ದ್ವೇಷದ ಘಟನೆಗಳಿಗೆ ಸಂಬಂಧಿಸಿದ ಸುದ್ದಿ, ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ಸರಿಯಾಗಿ ಪರಿಶೀಲಿಸಿದ ಬಳಿಕವೇ ಪ್ರಸಾರ ಮಾಡಬೇಕು. ಅಂತಹ ಕಾರ್ಯಕ್ರಮಗಳು ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ತರುವಂತಿರಬಾರದು. ಹಿಂಸೆಗೆ ಪ್ರಚೋದನೆ ನೀಡುವಂತಹ ಸುದ್ದಿ, ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಹಿಂಸೆಯ ದೃಶ್ಯಾವಳಿಗಳನ್ನು ಪ್ರಸಾರ ಮಾಡುವುದನ್ನು ತಪ್ಪಿಸಬೇಕು. ವರದಿ ಮಾಡುವ ಸಂದರ್ಭದಲ್ಲಿ ಪದಗಳ ಆಯ್ಕೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಈ ಸೂಚನೆಯ ಯಾವುದೇ ರೀತಿಯ ಉಲ್ಲಂಘನೆಯು ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ (ನಿಯಂತ್ರಣ) ಕಾಯ್ದೆ 1995ರ ಅಡಿಯಲ್ಲಿ ಕ್ರಮ ಜರುಗಿಸಲು ಅರ್ಹವಾಗಿರುತ್ತದೆ ಎಂಬ ಎಚ್ಚರಿಕೆಯನ್ನೂ ಜಿಲ್ಲಾಧಿಕಾರಿ ನೀಡಿದ್ದಾರೆ.

‘ರಕ್ತದೋಕುಳಿ ಆಡುವ ಸಂಘಟನೆ ನಿಷೇಧಿಸಿ’

ಬಾಗಲಕೋಟೆ: ‘ರಾಜ್ಯದಲ್ಲಿ, ಧರ್ಮದ ಹೆಸರಿನಲ್ಲಿ ರಕ್ತದೋಕುಳಿ ಆಡುವ ಸಂಘಟನೆಗಳನ್ನು ಸರ್ಕಾರ ನಿಷೇಧಿಸಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಬಾದಾಮಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕರಾವಳಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ರಕ್ತದೋಕುಳಿ ಆಡುತ್ತಿವೆ. ಒಂದು ಪಕ್ಷ ಧರ್ಮದ ಹೆಸರಲ್ಲಿ ಸಂಘರ್ಷ ಸೃಷ್ಟಿಸಿ ಆಟವಾಡುತ್ತಿದ್ದರೆ, ಇನ್ನೊಂದು ಪಕ್ಷ ಆಡಲಿ ಬಿಡಿ ಎಂದು ಹೇಳುತ್ತಿದೆ’ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಾಂಶಗಳು

* ಕಟೀಲು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಹಿಂದೂ ಸ್ನೇಹಿತ

* ಹಲವೆಡೆ ಚರ್ಚ್‌ಗಳಲ್ಲೂ ಪ್ರಾರ್ಥನೆ ಸಲ್ಲಿಕೆ

* ತಾಯಿ, ಪತ್ನಿಯನ್ನು ಕಣ್ಣು ತೆರೆದು ನೀಡಿದ ಗಾಯಾಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT