ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆತ

Last Updated 7 ಜನವರಿ 2018, 6:01 IST
ಅಕ್ಷರ ಗಾತ್ರ

ಮಾಗಡಿ: ಇಲ್ಲಿನ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ದಲಿತ ಅಭ್ಯರ್ಥಿಗೆ ಬೆಂಬಲ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಭ್ಯರ್ಥಿಯ ಬೆಂಬಲಿಗರು ಶಾಸಕ ಎಚ್‌.ಸಿ. ಬಾಲಕೃಷ್ಣರ ಕಾರಿಗೆ ಚಪ್ಪಲಿ ತೂರಿ, ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಮಾದಿಗ ಸಮುದಾಯಕ್ಕೆ ಸೇರಿದ ಸುಶೀಲಾ ರಂಗಹನುಮಯ್ಯ ಅವರಿಗೆ ಅವಕಾಶ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಸುಶೀಲಾರ ಪತಿ ರಂಗಹನುಮಯ್ಯ ಹಾಗೂ ಅವರ ಬೆಂಬಲಿಗರು ಪುರಸಭೆ ಕಚೇರಿಯ ಮುಂದೆ ಅರೆಬೆತ್ತಲೆ ಪ್ರತಿಭಟನೆ ಆರಂಭಿಸಿದರು.

ಶಾಸಕ ಬಾಲಕೃಷ್ಣರ ಕಾರನ್ನು ಅಡ್ಡಗಟ್ಟಿ ಅದರ ಮೇಲಿನ ಹೂವಿನ ಹಾರಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಗುಂಪಿನಲ್ಲಿ ಒಬ್ಬರು ಶಾಸಕರ ಕಾರಿನ ಮೇಲೆ ಚಪ್ಪಲಿ ತೂರಿದರು. ಅದು ಕಾರಿನಿಂದ ಆಚೆಗೆ ಹೋಗಿ ಬಿತ್ತು. ಶಾಸಕರು ಅಲ್ಲಿಂದ ನಿರ್ಗಮಿಸಿದರು.

ಸ್ಥಳದಲ್ಲಿದ್ದ ಸಂಸದ ಡಿ.ಕೆ. ಸುರೇಶ್‌ ಅವರ ವಿರುದ್ಧವೂ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಅವರ ಕಾರಿಗೆ ಅಡ್ಡಲಾಗಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವರಾದ ಡಿ.ಕೆ. ಶಿವಕುಮಾರ್, ಎಚ್‌.ಎಂ. ರೇವಣ್ಣ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ನಂತರದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

‘ಕಳೆದ ಬಾರಿಯೂ ನಮಗೆ ಅಧಿಕಾರ ಕೈತಪ್ಪಿದ್ದು, ಈ ಬಾರಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಶಾಸಕ ಬಾಲಕೃಷ್ಣ ನುಡಿದಂತೆ ನಡೆದುಕೊಳ್ಳದೇ ಮೋಸ ಮಾಡಿದ್ದಾರೆ’ ಎಂದು ರಂಗಹನುಮಯ್ಯ ಆರೋಪಿಸಿದರು.

* * 

ಸುಶೀಲಾ ಅವರಿಗೆ ಅನ್ಯಾಯ ಆಗಿರುವುದು ನಿಜ. ಆದರೆ ಕಾಂಗ್ರೆಸ್‌ನ ಎಲ್ಲ ಮುಖಂಡರ ಅಭಿಪ್ರಾಯದಂತೆ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಯಿತು
ಎಚ್.ಸಿ. ಬಾಲಕೃಷ್ಣ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT