ಸೋಮವಾರ, ಜೂಲೈ 6, 2020
28 °C

ಜನರ ದಾರಿ ತಪ್ಪಿಸುತ್ತಿರುವ ಮಧ್ವರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾಮಗಾರಿಗೆ ಸಹ ಮುಖ್ಯಮಂತ್ರಿ ಅವರ ಮೂಲಕ ನಿಯಮ ಬಾಹಿರವಾಗಿ ಶಿಲಾನ್ಯಾಸ ಮಾಡಿಸಲು ಹೊರಟಿರುವ ಸಚಿವ ಪ್ರಮೋದ್ ಮಧ್ವರಾಜ್ ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾರ್ಯಸಾಧುವಲ್ಲದ ವಾರಾಹಿ ಯೋಜನೆಯಿಂದ ನೀರು ತರುವುದಾಗಿ ಹೇಳಿ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಆರೋಪ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಅವರು ಇದೇ 8ರಂದು ಉಡುಪಿ ವಿಧಾನಸಭಾ ಕ್ಷೇತ್ರದ ಸುಮಾರು ₹581 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಮೋದ್ ಹೇಳಿದ್ದಾರೆ. ಆದರೆ, ಅದರಲ್ಲಿರುವ ಪ್ರಮುಖ ₹270 ಕೋಟಿ ಮೊತ್ತದ ವಾರಾಹಿ ಕುಡಿಯುವ ನೀರಿನ ಯೋಜನೆ ಟೆಂಡರ್ ಪ್ರಕ್ರಿಯೆಯೇ ಇನ್ನೂ ಮುಗಿದಿಲ್ಲ. ಇಂತಹ ಕಾಮಗಾರಿಗೆ ಶಿಲಾನ್ಯಾಸ ಮಾಡುವುದು ನಿಯಮಬಾಹಿರ ಎಂದರು.

ವಾರಾಹಿಯಿಂದ ಉಡುಪಿಯ ವರೆಗೆ ಈಗಾಗಲೇ ಇರುವ ರಸ್ತೆ ಮಾರ್ಗದಲ್ಲಿಯೇ, ಅಂದರೆ ರಸ್ತೆ ಅಗೆದು ಅದರ ಕೆಳಗೆ ಪೈಪ್‌ ಅಳವಡಿಸಿ ಆ ಮೂಲಕ ನೀರು ತರಲಾಗುತ್ತದೆ ಎಂಬ ಉಲ್ಲೇಖ ವಾರಾಹಿಯ ವಿಸ್ಕೃತ ಯೋಜನಾ ವರದಿಯಲ್ಲಿದೆ. ರಸ್ತೆ ಮಾರ್ಗ ನೇರವಾಗಿ ಇರುವುದಿಲ್ಲ. ಅಲ್ಲದೆ ಆಮಾರ್ಗದ ಎಲ್ಲ ಪಂಚಾಯಿತಿಗಳಿಂದ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಯೋಜನೆ ಜಾರಿಗೊಳ್ಳಲು ಸಾಧ್ಯವೇ ಇಲ್ಲ. ಇದು ಗೊತ್ತಿದ್ದರೂ ಸಹ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಪ್ರಮೋದ್ ಮಾಡುತ್ತಿದ್ದಾರೆ ಎಂದರು.

ಡಿಸಿ ಕೈಗೊಂಬೆ: ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಪ್ರತಿ ಪಂಚಾಯಿತಿಯಿಂದ 2 ಬಸ್ ಮೂಲಕ ಜನರನ್ನು ಕರೆತರಬೇಕು ಎಂದು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಕಾಲೇಜು ವಿದ್ಯಾರ್ಥಿನಿಯರು ಸಮವಸ್ತ್ರ ಇಲ್ಲದೆ ಬರಬೇಕು ಎಂದು ಸಹ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಜನರನ್ನು ಸೇರಿಸುವ ಸಲುವಾಗಿ ಆಡಳಿತ ಯಂತ್ರವನ್ನು ಸಂಪೂರ್ಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೂ ಕಾಂಗ್ರೆಸ್ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೂ ಮನವಿ ಮಾಡಲಾಗಿದೆ ಎಂದರು. ಮುಖಂಡರಾದ ಯಶ್‌ಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶ್ರೀಶ ನಾಯಕ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.